ಡಿ. 18ರಂದು ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ
ಮಂಗಳೂರು, ಡಿಸೆಂಬರ್ 17: ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಭೇಟಿ ನೀಡಲಿದ್ದಾರೆ. ಡಿ. 18 ರಂದು ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ವಿಶೇಷ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.
ಮಂಗಳೂರು ನಿಲ್ದಾಣದಿಂದ ವಾಯು ಪಡೆಯ ಹೆಲಿಕಾಪ್ಟರ್ ಮೂಲಕ ಲಕ್ಷದ್ವೀಪಕ್ಕೆ ಪ್ರಧಾನಿ ಪಯಣಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಧಾನಿ ಅವರ ಪ್ರವಾಸ ಕಾರ್ಯಕ್ರಮ ಇನ್ನೂ ಅಧಿಕೃತವಾಗಿ ನಿಗದಿಯಾಗಿಲ್ಲ. ಮೂಲಗಳ ಪ್ರಕಾರ ಪ್ರಧಾನಿ ಅವರು ಡಿ. 17 ರಂದು ರಾತ್ರಿಯೇ ಮಂಗಳೂರಿಗೆ ವಿಶೇಷ ವಿಮಾನದಲ್ಲಿ ಆಗಮಿಸುವ ನಿರೀಕ್ಷೆ ಇದೆ.
ನಗರದ ಖಾಸಗಿ ಹೋಟೆಲ್ ಅಥವಾ ಸರ್ಕಿಟ್ ಹೌಸ್ ನಲ್ಲಿ ಅವರು ವಾಸ್ತವ್ಯ ಹೂಡಲಿದ್ದಾರೆ. ಡಿ. 18 ರಂದು ಬೆಳಗ್ಗೆ ಲಕ್ಷದ್ವೀಪಕ್ಕೆ ತೆರಳಲಿದ್ದಾರೆ ಎನ್ನುವ ಮಾಹಿತಿ ಇದೆ. ಒಂದೊಮ್ಮೆ ಡಿ. 17ರ ಪ್ರವಾಸ ರದ್ದುಗೊಂಡರೆ ಡಿ. 18 ರಂದು ಬೆಳಗ್ಗೆ ಮೋದಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.
ಪ್ರಧಾನಿ ಅವರ ಪ್ರವಾಸದ ಬಗ್ಗೆ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಮಾಹಿತಿ ಬಂದಿದ್ದು, ಕ್ಷೇತ್ರದಲ್ಲಿ ಇರುವಂತೆ ಸೂಚನೆ ನೀಡಲಾಗಿದೆ. ಪ್ರಧಾನಿ ಒಖಿ ಚಂಡಮಾರುತದ ಹೊಡೆತಕ್ಕೆ ಸಿಲುಕಿ ಹಾನಿಗೊಳಗಾದ ಲಕ್ಷದ್ವೀಪದ ಪ್ರದೇಶಗಳ ವೀಕ್ಷಣೆ ಮಾಡಲಿದ್ದಾರೆ.












Click it and Unblock the Notifications