ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ, ನಾಲ್ವರು ವಶಕ್ಕೆ
ಮಂಗಳೂರು, ಜನವರಿ 29: ಮಂಗಳೂರಿನಲ್ಲಿ ಮತ್ತೆ ನೈತಿಕ ಪೋಲಿಸ್ ಗಿರಿ ಸದ್ದು ಮಾಡಿದೆ. ಮಂಗಳೂರು ಹೊರವಲಯದ ನಾಟೆಕಲ್ ಎಂಬಲ್ಲಿ ಈ ಘಟನೆ ನಡೆದಿದ್ದು, ಇಲ್ಲಿಯ ಕಣಚೂರು ಆಸ್ಪತ್ರೆಯ ಎದುರು ಡ್ರೈವಿಂಗ್ ಶಾಲೆಯೊಂದರ ಶಿಕ್ಷಕ ದಂಪತಿ ಮೇಲೆ 50 ಮಂದಿಯ ತಂಡವೊಂದು ದಾಳಿ ನಡೆಸಿ ಕಾರು ಪುಡಿಪುಡಿ ಮಾಡಿ ನೈತಿಕ ಪೊಲೀಸ್‌ಗಿರಿ ಮೆರೆದಿದೆ.
ಮುಡಿಪು ಸ್ಮಾರ್ಟ್ ಮೋಟಾರ್ ಡ್ರೈವಿಂಗ್ ಸ್ಕೂಲ್ ನ ಥಾಮಸ್ ಮತ್ತು ಅವರ ಪತ್ನಿ ಇಂದು ಕಾರನ್ನು ಚಲಾಯಿಸುತ್ತಿದ್ದ ಸಂದರ್ಭ ದುಷ್ಕರ್ಮಿಗಳ ತಂಡ ಏಕಾಏಕಿ ದಾಳಿ ನಡೆಸಿದೆ. ಅದೇ ಕಾರಿನಲ್ಲಿ ಕಾರು ಕಲಿಯಲು ಬಂದಿದ್ದ ಮುಸ್ಲಿಂ ಮಹಿಳೆಯೊಬ್ಬರು ಇದ್ದದ್ದು ಈ ದಾಳಿಗೆ ಕಾರಣ ಎಂದು ಹೇಳಲಾಗಿದೆ. ಮುಸ್ಲಿಂ ಮಹಿಳೆಗೆ ಕಾರು ಕಲಿಸುತ್ತಿರುವುದರ ಬಗ್ಗೆ ಆಕ್ಷೇಪ ಎತ್ತಿದ ದುಷ್ಕರ್ಮಿಗಳ ತಂಡ ಥಾಮಸ್ ಅವರ ಮೇಲೆ ದಾಳಿ ನಡೆಸಿದೆ.
ಬಳಿಕ ದುಷ್ಕರ್ಮಿಗಳು ಕಲ್ಲಿನಿಂದ ಗಾಜು ಪುಡಿ ಮಾಡಿ ಕಾರಿಗೆ ಹಾನಿಗೊಳಿಸಿದ್ದಾರೆ. ಕಾರು ಚಲಾಯಿಸುತ್ತಿದ್ದ ಥಾಮಸ್ ಅವರ ಮೇಲೆ ಗಂಭೀರ ಹಲ್ಲೆ ನಡೆಸಿ, ಪತ್ನಿಯ ಮೇಲೂ ದಾಳಿ ನಡೆಸಿದ್ದಾರೆ. ಸುಮಾರು 50 ಮಂದಿಯ ತಂಡ ಕೃತ್ಯದಲ್ಲಿ ಭಾಗಿಯಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕೊಣಾಜೆ ಪೊಲೀಸರು ದಾಳಿಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ದಾಳಿ ನಡೆಸಿದ ಇತರರ ವಿವರ ಪತ್ತೆ ಮಾಡಲಾಗಿದ್ದು ಅವರ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ.












Click it and Unblock the Notifications