ಮಂಗಳೂರಲ್ಲಿ ವರ್ಷದಿಂದ ಅಪ್ರಾಪ್ತ ಬಾಲಕಿಯ ಅತ್ಯಾಚಾರ

ನಗರದ ಶಾಲೆಯೊಂದರಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದ 13 ವರ್ಷದ ಬಾಲಕಿಯನ್ನು ಸತತವಾಗಿ ಲೈಂಗಿಕ ದೌರ್ಜನ್ಯಕ್ಕೆ ಒಳಪಡಿಸಿರುವುದು ಆಕೆಯ ಸಂಬಂಧಿಯೇ ಆದ 20ರ ಹರೆಯದ ವಿಕೇಶ್ ಎಂಬಾತ. ಆತನೊಂದಿಗೆ ಸ್ನೇಹಿತ ಪ್ರವೀಣ್ ಎಂಬಾತ ಕೂಡ ಬಾಲಕಿಯನ್ನು ದುರ್ಬಳಸಿಕೊಳ್ಳುತ್ತಲೇ ಬಂದಿದ್ದ.
ಬಾಲಕಿಯ ಸಂಬಂಧಿ ಆಗಿದ್ದರಿಂದ ಆಕೆಯನ್ನು ಪುಸಲಾಯಿಸಿ ಕರೆದುಕೊಂಡು ಬರುತ್ತಿದ್ದ ಇಬ್ಬರೂ, ಆಕೆಗೆ ಅಶ್ಲೀಲ ಚಿತ್ರಗಳನ್ನು ತೋರಿಸುತ್ತಿದ್ದರು ಮತ್ತು ಸಮಯ ಸಿಕ್ಕಾಗಲೆಲ್ಲ ಅತ್ಯಾಚಾರ ಎಸಗುತ್ತಿದ್ದರು. ಸಾಲದ್ದಕ್ಕೆ ಅತ್ಯಾಚಾರ ಎಸಗಿದ್ದನ್ನು ಮೊಬೈಲಿನಲ್ಲಿ ಕೂಡ ರೆಕಾರ್ಡ್ ಮಾಡಿಕೊಂಡಿದ್ದರು.
ಈ ವಿಷಯದ ಬಗ್ಗೆ ಮನೆಯವರಿಗೆ ಅಥವಾ ಪೊಲೀಸರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಕೂಡ ಬೆದರಿಕೆ ಒಡ್ಡಿದ್ದರು. ಬಾಲಕಿ ಗರ್ಭಿಣಿಯಾಗದಿರಲೆಂದು ಗರ್ಭನಿರೋಧಕ ಮಾತ್ರೆಗಳನ್ನು ನೀಡುತ್ತಿದ್ದರು. ಇದೆಲ್ಲವನ್ನು ಸಹಿಸಿಕೊಂಡು ಶಾಲೆಗೆ ಹೋಗುತ್ತಿದ್ದ ಬಾಲಕಿಯ ವರ್ತನೆಯಲ್ಲಿ ಇತ್ತೀಚೆಗೆ ಬದಲಾವಣೆಗಳು ಕಂಡುಬಂದವು.
ಸಂದೇಹ ಬಂದು ಬಾಲಕಿಯನ್ನು ವಿಚಾರಿಸಿದಾಗ ಸತ್ಯ ಸಂಗತಿ ಬಹಿರಂಗವಾಗಿದೆ. ಶಾಲೆಯಲ್ಲಿಯೂ ಈ ಸಂಗತಿ ಗುಲ್ಲಾಗಿದೆ. ಇದರಿಂದ ಬಾಲಕಿಯ ತಾಯಿ ಹೌಹಾರಿದ್ದಾರೆ. ಬಾಲಕಿ ಕಣ್ಣೀರು ಸುರಿಸುತ್ತ ಎಲ್ಲ ಕಥೆಯನ್ನು ತಾಯಿಯ ಮುಂದೆ ಬಿಚ್ಚಿಟ್ಟಿದ್ದಾಳೆ. ಕೂಡಲೆ ಬಾಲಕಿಯ ತಾಯಿ ಮಂಗಳೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.
ಕಾರ್ಯಾಚರಣೆಗಿಳಿದ ಪೊಲೀಸರು ಮಂಗಳವಾರ, ಅಕ್ಟೋಬರ್ 1ರಂದು ವಿಕೇಶನನ್ನು ಬಂಧಿಸಿದ್ದಾರೆ. ಪ್ರವೀಣ್ ಎಂಬಾತ ತಲೆಮರೆಸಿಕೊಂಡಿದ್ದಾನೆ. ವಿಕೇಶ್ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 376ರ ಅಡಿಯಲ್ಲಿ ಅತ್ಯಾಚಾರವೆಸಗಿದ ಕೇಸನ್ನು ಜಡಿಯಲಾಗಿದೆ. ಪ್ರವೀಣನಿಗಾಗಿ ಹುಡುಕಾಟ ಸಾಗಿದೆ. [ವಿಡಂಬನೆ : ಅತ್ಯಾಚಾರಕ್ಕೆ ಕಾರಣ ಯಾರು?]












Click it and Unblock the Notifications