ಮಸಾಜ್ ಸೆಂಟರ್ ಹೆಸರಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ
ಮಂಗಳೂರು, ಜುಲೈ 30 : ಅಕ್ರಮ ಚಟುವಟಿಕೆ ನಡೆಯತ್ತಿದ್ದ ಖಚಿತ ಮಾಹಿತಿ ಆಧಾರದ ಮೇಲೆ ಮಸಾಜ್ ಸೆಂಟರ್ ಮೇಲೆ ದಾಳಿ ಮಾಡಿದ ಪೊಲೀಸರು ಹೈಟೆಕ್ ವೇಶ್ಯಾ ವಾಟಿಕೆ ದಂಧೆ ಬಯಲಿಗೆಳೆದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರು ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊಟ್ಟಾರ ಚೌಕಿ ಬಳಿಯಿರುವ ಲೋಟಸ್ ಸಲೂನ್ ಆಂಡ್ ವೆಲ್ನೆಸ್ ಮಸಾಜ್ ಸೆಂಟರ್ ಮೇಲೆ ಸೋಮವಾರ ಸಿಸಿಬಿ ಪೊಲೀಸರು ದಾಳಿ ನಡೆಸಿದರು.
ಮಂಗಳೂರು ನಗರದ ಕೊಟ್ಟಾರ ಚೌಕಿ ಬಳಿಯಿರುವ ರಾಮಾನುಗ್ರಹ ಕಟ್ಟಡದಲ್ಲಿರುವ ಮಸಾಜ್ ಸೆಂಟರ್ ನಲ್ಲಿ ಯುವತಿಯನ್ನು ಹಾಗೂ ಮಹಿಳೆಯರನ್ನು ಇಟ್ಟುಕೊಂಡು ಬಾಡಿ ಮಸಾಜ್ ಹೆಸರಿನಲ್ಲಿ ವೇಶ್ಯಾವಾಟಿಕೆಗೆ ಪ್ರೇರೆಪಿಸುತ್ತಿರುವುದಾಗಿ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು.

ಈ ಹಿನ್ನೆಲೆಯಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಹಾಗೂ ಕಾವೂರು ಪೊಲೀಸರು ಮಸಾಜ್ ಪಾರ್ಲರ್ ಮೇಲೆ ದಾಳಿ ನಡೆಸಿದ್ದಾರೆ.
ದಾಳಿ ಸಂದರ್ಭದಲ್ಲಿ ಮಸಾಜ್ ಸೆಂಟರ್ ನಲ್ಲಿದ್ದ ಮಹಿಳಾ ಪಿಂಪ್ ಓರ್ವಳನ್ನು ವಶಕ್ಕೆ ಪಡೆದುಕೊಂಡು ಐವರು ಯುವತಿಯರನ್ನು ಪೊಲೀಸರು ರಕ್ಷಿಸಿದ್ದಾರೆ. ದಾಳಿ ಸಂದರ್ಭದಲ್ಲಿ 14,700 ರೂಪಾಯಿ ನಗದು ಹಾಗೂ 2 ಮೊಬೈಲ್ ಫೋನ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಮಸಾಜ್ ಪಾರ್ಲರ್ ನಲ್ಲಿ ಬಾಡಿ ಮಸಾಜ್ ಎಂಬ ಹೆಸರಿನಲ್ಲಿ ಯುವತಿಯರನ್ನು ಗಿರಾಕಿಗಳಿಗೆ ಒದಗಿಸಿ ವೇಶ್ಯಾವಾಟಿಕೆಗೆ ಪ್ರೇರೆಪಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಮಸಾಜ್ ಸೆಂಟರ್ ನಲ್ಲಿದ್ದ 5 ನೊಂದ ಯುವತಿಯರನ್ನೂ ರಕ್ಷಿಸಲಾಗಿದೆ.
ಮಸಾಜ್ ಸೆಂಟರ್ ನಡೆಸುತ್ತಿದ್ದ ರಾಜೇಶ್, ಸತೀಶ್ ಮತ್ತು ಜಯರಾಜ್ ಎಂಬವರು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.












Click it and Unblock the Notifications