ಒಂದೇ ತರಗತಿಯೊಳಗೆ ಐವರು ಅವಳಿ-ಜವಳಿ: ಶಿಕ್ಷಕರಿಗೆ ಫುಲ್ ಕನ್ಫ್ಯೂಷನ್
ಮಂಗಳೂರು, ಅಕ್ಟೋಬರ್ 08: ಅದು ಸರ್ಕಾರಿ ಪ್ರೌಢ ಶಾಲೆ.ಆ ಶಾಲೆಯ ಎಂಟನೇ ತರಗತಿ ಎಲ್ಲಾ ಶಿಕ್ಷಕರ ಫೇವರೇಟ್ ತರಗತಿ. ಶಿಕ್ಷಕರ ನೆಚ್ಚಿನ ತರಗತಿ ಅಂದ್ರೆ ಆ ಕ್ಲಾಸಿನ ಎಲ್ಲಾ ವಿದ್ಯಾರ್ಥಿಗಳು ಕಲಿಯೋದರಲ್ಲಿ ಟಾಪ್ ನಲ್ಲಿದ್ದಾರೆ ಅಂತಾ ನೀವು ಭಾವಿಸಬೇಡಿ. ಎಂಟನೇ ತರಗತಿಯ ಒಳಗೆ ಹೋದರೆ ಶಿಕ್ಷಕರಿಗೆ ಕಾಣಸಿಗೋದು ಐವರು ಅವಳಿ ಜವಳಿಗಳು.
ಇಂತಹ ವಿಶೇಷ ತರಗತಿ ಇರೋದು ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜಿಪ ಮೂಡ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಎಂಟನೇ ತರಗತಿ. ಎಂಟನೇ ತರಗತಿಗೆ ಶಿಕ್ಷಕರು ಹೋದಾಗಲೆಲ್ಲಾ ಶಿಕ್ಷಕರಿಗೆ ಗೊಂದಲ ಆಗದ ದಿನಗಳಿಲ್ಲ. ತರಗತಿಯಲ್ಲಿ ತಪ್ಪು ಮಾಡಿರೋದು ಒಬ್ಬಳು, ಶಿಕ್ಷಕರು ಬೈಯೋದು ಇನ್ನೊಬ್ಬಳಿಗೆ.

ಹೌದು ಈ ಗೊಂದಲ ಆಗಲು ಕಾರಣವೂ ಇದೆ. ಈ ತರಗತಿಯಲ್ಲಿ ಬಹುತೇಕ ಇರುವ ಮಕ್ಕಳೆಲ್ಲಾ ಅವಳಿ-ಜವಳಿ ಮಕ್ಕಳೇ. ಇದೇ ಕಾರಣಕ್ಕೆ ಈ ತರಗತಿಗೆ ಪಾಠ ಮಾಡಲು ತೆರಳುವ ಶಿಕ್ಷಕರಿಗೂ, ಮಕ್ಕಳಿಗೂ ಗೊಂದಲಕಾರಿ ಸನ್ನಿವೇಶ ನಿರ್ಮಾಣ ವಾಗಿದೆ.
ಈ ಬಾರಿಯ ಶೈಕ್ಷಣಿಕ ಸಾಲಿನಲ್ಲಿ ಈ ಶಾಲೆಯ ಎಂಟನೇ ತರಗತಿಯ ಮಕ್ಕಳೇ ಎಲ್ಲರ ಆಕರ್ಷಣೆಯ ಕೇಂದ್ರಬಿಂದುಗಳಾಗಿದ್ದಾರೆ.ಅಪರೂಪದಲ್ಲಿ ಅಪರೂಪವಾಗಿರುವ ಅವಳಿ ಜವಳಿ ಮಕ್ಕಳನ್ನು ನೋಡುವುದೇ ಶಿಕ್ಷಕರಿಗೆ ಒಂದು ಖುಷಿ. ಒಂದೇ ಕ್ಲಾಸಿನಲ್ಲಿ 5 ಜೋಡಿ ಅವಳಿ ಜವಳಿ ವಿದ್ಯಾರ್ಥಿಗಳು ಇದೀಗ ಎಲ್ಲರ ಮನೆ ಮಾತಾಗಿದ್ದಾರೆ.
ಅಯಿಷಾ ಝಿಬಾ-ಖತೀಝಾ ಝಿಯಾ, ಶ್ರಣವಿ-ಜಾನ್ಹವಿ, ಫಾತಿಮತ್ ಕಮಿಲ-ಫಾತಿಮತ್ ಸಮಿಲ, ಆಯಿಷಾ ರೈಫಾ- ಫಾತೀಮಾ ರೌಲ, ದುಲೈಕತ್ ರುಫಿದಾ- ಹಲೀಮತ್ ರಾಫಿದ ಒಂದೇ ತರಗತಿಯಲ್ಲಿ ಕಲಿಯುತ್ತಿರುವ ಅವಳಿ ಜವಳಿ ವಿದ್ಯಾರ್ಥಿಗಳಾಗಿದ್ದಾರೆ. ಐದು ಜೋಡಿ ಅವಳಿ ಮಕ್ಕಳಲ್ಲಿ ಒಂದು ಜೋಡಿ ಹಿಂದೂ ಸಮುದಾಯದ ಹಾಗೂ ಉಳಿದಂತೆ ನಾಲ್ಕು ಜೋಡಿ ಮಕ್ಕಳು ಮುಸ್ಲಿಂ ಸಮುದಾಯದಕ್ಕೆ ಸೇರಿದವರಾಗಿದ್ದಾರೆ.
ಅವಳಿ ಜವಳಿ ಮಕ್ಕಳು ಹೆಚ್ಚಾಗಿ ರೂಪದಲ್ಲಿ ಮತ್ತು ಚಟುವಟಿಕೆಯಲ್ಲಿ ಒಂದೇ ಸಮನಾಗಿರುವುದರಿಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕೆಲವೊಮ್ಮೆ ತಬ್ಬಿಬ್ಬಗುವ ಪ್ರಸಂಗಗಳು ನಡೆಯುತ್ತಿರುತ್ತದೆ.

ಒಮ್ಮೊಮ್ಮೆ ಸಹಪಾಠಿಗಳು ಗೊಂದಲಕ್ಕೀಡಾದ ಆಗುವ ಸಂದರ್ಭಗಳು ಕೂಡ ಬಂದಿವೆ. ಎಂಟನೇ ತರಗತಿಯ ಇತರ ಮಕ್ಕಳೆಲ್ಲಾ ಶಾಲೆ ಆರಂಭವಾದಂದಿನಿಂದ ತರಗತಿಯಲ್ಲಿರುವ ಐದು ಜೋಡಿ ಅವಳಿ-ಜವಳಿ ಮಕ್ಕಳನ್ನು ಸೂಕ್ಷ್ಮವಾಗಿ ಗಮನಿಸಿ ಒಬೊಬ್ಬರಲ್ಲಿ ಇರುವ ವ್ಯತ್ಯಾಸವನ್ನು ಕಂಡು ಹಿಡಿದ ಕಾರಣ ಆ ತರಗತಿಯ ಮಕ್ಕಳು ಅವಳಿಗಳನ್ನು ಗುರುತು ಪತ್ತೆಹಚ್ಚುತ್ತಾರೆ. ಆದರೆ ಇವರಲ್ಲಿ ಎರಡು ಜೋಡಿಯನ್ನು ಸಹಪಾಠಿಗಳಿಗೂ ಪತ್ತೆಹಚ್ಚಲು ಕಷ್ಟವಾಗುತ್ತದೆ.
ಇನ್ನುಳಿದ ಜೋಡಿಗಳಲ್ಲಿ ಮಕ್ಕಳ ಮುಖದ ಮೇಲಿರುವ ಕಲೆ ಹಾಗೂ ಇತರ ವ್ಯತ್ಯಾಸಗಳನ್ನು ಗುರುತಿಸಿಕೊಂಡು ಯಾರು,ಯಾರೆಂದು ಗುರುತಿಸುತ್ತೇವೆ. ಆದರೆ ಕ್ಲಾಸ್ ಗೆ ಬರುವ ಶಿಕ್ಷಕರಿಗೆ ಮಾತ್ರ ಇವರನ್ನು ಗುರುತಿಸೋದು ಸ್ವಲ್ಪ ಕಷ್ಟವಾಗುತ್ತಾರೆ ಎಂದು ಅವಳಿ ವಿದ್ಯಾರ್ಥಿಗಳು ಹೇಳುತ್ತಾರೆ.
ಐದು ಜೋಡಿ ಅವಳಿ-ಜವಳಿ ಮಕ್ಕಳ ಜೊತೆಗೆ ಪಾಠ ಕಲಿಯೋದು ಉಳಿದ ಮಕ್ಕಳಿಗೂ ಖುಷಿ ಕೊಡುತ್ತಿದೆ. ಅಲ್ಲದೆ ಈ ಶಾಲೆ ಇತ್ತೀಚಿನ ದಿನಗಳಲ್ಲಿ ಐದು ಜೋಡಿ ಅವಳಿ-ಜವಳಿಗಳ ಶಾಲೆ ಎಂದೇ ಗುರುತಿಸಲ್ಪಟ್ಟಿದೆ. ಈ ಶಾಲೆಯಲ್ಲಿ ಅವಳಿ-ಜವಳಿ ಮಕ್ಕಳು ಈ ಹಿಂದೆಯೂ ಕಲಿತಿದ್ದು, ಹೆಚ್ಚಾಗಿ ಅವಳಿಗಳನ್ನೇ ಕಂಡ ಶಾಲೆಯಾಗಿಯೂ ಗುರುತಿಸಿಕೊಂಡಿದೆ.
ಜಿಲ್ಲೆಯ ಬೇರೆ ಬೇರೆ ಶಾಲೆಗಳಲ್ಲಿ ಈ ರೀತಿಯ ಅವಳಿ ಜವಳಿ ಮಕ್ಕಳ ಬಗ್ಗೆ ವರದಿಯಾಗಿದೆ. ಆದರೆ ಒಂದೇ ಶಾಲೆಯಲ್ಲಿ, ಒಂದೇ ತರಗತಿಯಲ್ಲಿ ಐದು ಜೋಡಿಗಳು ಕಲಿಯುತ್ತಿರೋದು ಇದೇ ಮೊದಲ ಬಾರಿಯಾಗಿದ್ದು, ಎಲ್ಲರ ಕುತೂಹಲಕ್ಕೂ ಕಾರಣವಾಗಿದೆ.












Click it and Unblock the Notifications