ಪ್ರವಾಸಿ ತಾಣವಾಗಿಯಷ್ಟೇ ಅಲ್ಲ, ಐತಿಹಾಸಿಕವಾಗಿಯೂ ಪ್ರಸಿದ್ಧಿ ಈ ಮಂಗಳೂರು
ಮಂಗಳೂರು, ಅಕ್ಟೋಬರ್ 14: ಮಂಗಳೂರು ನಗರ ಅರೇಬಿಯನ್ ಸಮುದ್ರ ಬಂದರು ಮತ್ತು ಕರ್ನಾಟಕ ರಾಜ್ಯದ ಪ್ರಮುಖ ವಾಣಿಜ್ಯ ಕೇಂದ್ರ. ಕಂಚಿನ ಪ್ರತಿಮೆಗಳಿಗೆ ಹಾಗೂ 2ನೇ ಶತಮಾನದ ಮಂಗಳಾದೇವಿ ದೇವಸ್ಥಾನಕ್ಕೆ ಹೆಸರು ವಾಸಿಯಾಗಿದೆ. ಅದೆಷ್ಟು ದುರ್ಗಾಪರಮೇಶ್ವರಿ, ಗಣೇಶ, ಸುಬ್ರಹ್ಮಣ್ಯ ದೇವಸ್ಥಾನಗಳಿವೆಯೋ ಆ ದೇವರೇ ಬಲ್ಲ! ಇವುಗಳಲ್ಲಿ ಕದ್ರಿಮಂಜುನಾಥ ಮತ್ತು ಕುದ್ರೋಳಿ ಗೋಕರ್ಣ ವಿಶೇಷವೆನ್ನಿಸುತ್ತದೆ.
ಏಕೆಂದರೆ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಗೋಮುಖ ಗಣಪತಿ ಇರುವ ಕಡೆ ಕಾಶಿಯಿಂದ ನೀರು ಕೆಳಗಡೆ ಬರುತ್ತೆ. ಭಕ್ತಾದಿಗಳು ಚೊಂಬಲ್ಲಿ ಅದರ ನೀರು ತೆಗೆದುಕೊಂಡು ಮೆಟ್ಟಲು ಹತ್ತಿಕೊಂಡು ಹೋಗಿ ಶಿವಲಿಂಗಕ್ಕೆ ಅವರೇ ಹಾಕಿಬರಬಹುದು. ಪಕ್ಕದಲ್ಲಿ ದೊಡ್ಡ ದೊಡ್ಡ ಈಜುಕೊಳಗಳು ಇದ್ದು ಭಕ್ತಾದಿಗಳಿಗೆ ಈಜಿಕೊಳ್ಳುವ ವ್ಯವಸ್ಥೆ ಇದೆ. ಅಲ್ಲಿಂದ ಬಂದರೆ ಕದ್ರಿಮಂಜುನಾಥನನ್ನು ಕಣ್ತುಂಬಿಕೊಳ್ಳಬಹುದು.

ಕುದ್ರೋಳಿ ಗೋಕರ್ಣನಾಥ ದೇವಸ್ಥಾನ ಬಹಳ ಆಕರ್ಷಣೀಯ. ಗಣೇಶ, ಷಣ್ಮುಖ, ಅನ್ನಪೂರ್ಣೇಶ್ವರಿ, ಶಿರ್ಡಿಸಾಯಿಬಾಬ, ಆಂಜನೇಯ, ಕೃಷ್ಣ,(ಇಲ್ಲಿ ಮಹಿಳೆಯರು ತೀರ್ಥ ಮತ್ತು ಮಂಗಳಾರತಿ ಕೊಡುವರು) ಮೃಗಾಲಯ, ವರ್ಣರಂಜಿತ ನೀರಿನ ಕಾರಂಜಿಗಳು ಮನಸೆಳೆಯುತ್ತವೆ. ಎಲ್ಲಾ ದೇವರ ದರ್ಶನ ಪಡೆದು ದಿನವಿಡೀ ಮನೆಮಂದಿಯೆಲ್ಲಾ ಹೋಗಿ, ಕೂತು, ಕಾಲು ಚಾಚಿ ವಿಶ್ರಾಂತಿ ಪಡೆದು ಬರುವಹಾಗೆ ತುಂಬಾ ಚೊಕ್ಕಟವಾದ ಜಾಗವೂ ಇದೆ.
ಇಷ್ಟೇ ಅಲ್ಲದೆ ಚರಿತ್ರೆಯಿಂದ ಕೂಡಿದ ಟಿಪ್ಪುಸುಲ್ತಾನ್ ನಿರ್ಮಿಸಿದ 'ಸುಲ್ತಾನ್ ಬತ್ತೇರಿ ಗಡಿಯಾರ ಗೋಪುರ' ಮಂಗಳೂರು ಸಿಟಿಗೆ 4ಕಿ.ಮಿ ದೂರದ ಬೋಳೂರಿನಲ್ಲಿದೆ. ಇದರ ಚರಿತ್ರೆ ಕ್ರಿ.ಶ. ಒಂದನೆಯ ಶತಮಾನದಲ್ಲಿ ಗ್ರೀಕ್ ದೇಶದ ಪ್ಲೀನಿ ಮತ್ತು ಅಲೆಗ್ಸಾಂಡ್ರಿಯದಲ್ಲಿದ್ದ ಪೆರಿಪ್ಲಸ್ ಕ್ರಿ.ಶ150 ರಲ್ಲಿ ಮಂಗಳೂರಿನ ಬಗ್ಗೆ ತಮ್ಮ ಪುಸ್ತಕಗಳಲ್ಲಿ ಹೇಳಿದ್ದಾರೆ. ಬಹಳ ಕಾಲದವರೆಗೆ ಮಂಗಳೂರನ್ನು ಪೋರ್ಚುಗೀಸರು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು. ಕ್ರಿ.ಶ.1526 ರಲ್ಲಿ ಮಂಗಳೂರು ಪೋರ್ಚುಗೀಸರ ವಶವಾಯಿತು.

18 ನೇ ಶತಮಾನದ ಪ್ರಾರಂಭದಲ್ಲಿ ಬಿದನೂರಿನ ನಾಯಕರು ಪೋರ್ಚುಗೀಸರನ್ನು ಹೊರದೂಡಿದರು. ಹೈದರಾಲಿಯಿಂದ 1763ರಲ್ಲಿ ಆಕ್ರಮಿತವಾಗುವವರೆಗೆ ಈ ಪ್ರದೇಶವು 'ಕೆಳದಿ' ನಾಯಕರ ಅಧೀನದಲ್ಲಿಯೇ ಇತ್ತು. 1768ರಲ್ಲಿ ಕೆಲಕಾಲ ಬ್ರಿಟೀಷರ ಆಳಿಕೆಯಲ್ಲಿದ್ದ ಈ ಸಂಸ್ಥಾನವು 1799ರಲ್ಲಿ ಟಿಪ್ಪುವಿನ ಮರಣಾನಂತರ ಬ್ರಿಟೀಷರಿಗೆ ಲಭಿಸಿತು. ಗುರುಪುರ ನದಿಗೆ ಯುದ್ಧ ನೌಕೆಗಳು ಬರುವುದನ್ನು ತಡೆಯಲು ಟಿಪ್ಪುಸುಲ್ತಾನನು ಕಾವಲು ಕೋಟೆಯಾದ ಸುಲ್ತಾನ್ ಬತ್ತೇರಿಯನ್ನು ನಿರ್ಮಿಸಿದನು. ಇದು ಸಣ್ಣದಾದ ಒಂದು ವೃತ್ತಾಕಾರದ ಗಡಿಯಾರ ಕಾವಲು ಗೋಪುರವಾದರೂ ಸಹ ಕೋಟೆಯಂತೆ ಕಾಣಿಸುತ್ತದೆ. ಪಿರಂಗಿಗಳ ಮೂಲಕ ಗುಂಡುಗಳ ಹಾರಿಸುವ ಸಲುವಾಗಿ ರಚಿತವಾಗಿದೆ. ಇಲ್ಲಿಗೆ ಹೋಗಲು 30 ಮೆಟ್ಟಲುಗಳಿವೆ. ಸುಲ್ತಾನ್ ಬತ್ತೇರಿ ಮೊದಲು ಒರಟಾದ ಹಡಗುಗಳಿಂದ ಮತ್ತು ಮರುಭೂಮಿಯಾಗಿದ್ದು ಈಗ ಬೋಟಿಂಗ್ ಕ್ಲಬ್ ನೊಂದಿಗೆ ಜನಪ್ರಿಯತೆ ಗಳಿಸುತ್ತಿದೆ.












Click it and Unblock the Notifications