ಮಂಗಳೂರು ವಿಮಾನ ನಿಲ್ದಾಣಕ್ಕೆ "ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣ" ಪ್ರಶಸ್ತಿ
ಮಂಗಳೂರು, ಮಾರ್ಚ್ 10: ಏರ್‌ಪೋರ್ಟ್ಸ್ ಕೌನ್ಸಿಲ್ ಇಂಟರ್ ನ್ಯಾಷನಲ್ (ಎಸಿಐ) ನಡೆಸಿದ ಸಮೀಕ್ಷೆಯಲ್ಲಿ ಬಜ್ಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣ ಸ್ಥಾನವನ್ನು ಪಡೆದುಕೊಂಡಿದೆ. ವಿಮಾನ ನಿಲ್ದಾಣ ಸೇವಾ ಗುಣಮಟ್ಟಕ್ಕಾಗಿ 2019ನೇ ಸಾಲಿನ ವಿಶ್ವ ಮಟ್ಟದ ಪ್ರಶಸ್ತಿಗೆ ಪಾತ್ರವಾಗಿದೆ.
ಮಂಗಳೂರು, ಚಂಢೀಗಡ, ತಿರುವನಂತಪುರ, ಹಾಗೂ ಲಕ್ನೋ ವಿಮಾನ ನಿಲ್ದಾಣಗಳು ವಿಶ್ವದ ಅತ್ಯುತ್ತಮ ನಿಲ್ದಾಣ ಪ್ರಶಸ್ತಿಗೆ ಪಾತ್ರವಾಗಿವೆ. ಎಸಿಐ ನಡೆಸಿದ ಏರ್‌ಪೋರ್ಟ್ ಸರ್ವಿಸ್ ಕ್ವಾಲಿಟಿ (ಎಎಸ್ ಕ್ಯೂ) ಸಮೀಕ್ಷೆಯಲ್ಲಿಈ ನಾಲ್ಕು ವಿಮಾನ ನಿಲ್ದಾಣಗಳು ಜಗತ್ತಿನ ಅತ್ಯುತ್ತಮ ವಿಮಾನ ನಿಲ್ದಾಣಗಳೆಂಬ ರೇಟಿಂಗ್ ಪಡೆದಿವೆ.
ಈ ನಾಲ್ಕು ವಿಮಾನ ನಿಲ್ದಾಣಗಳು ಒಟ್ಟು ಹತ್ತು ವಿಭಾಗಗಳಲ್ಲಿ ಪ್ರಯಾಣಿಕರಿಗೆ ನೀಡಿದ ಉತ್ಕೃಷ್ಟ ಸೇವೆ , ವಿಶ್ವ ಗುಣಮಟ್ಟದ ಸೌಲಭ್ಯಗಳಿಗಾಗಿ ಈ ಪುರಸ್ಕಾರ ಪಡೆದುಕೊಂಡಿವೆ. ಜಗತ್ತಿನಾದ್ಯಂತ 356 ವಿಮಾನ ನಿಲ್ದಾಣಗಳು ಸಮೀಕ್ಷೆಗೆ ಒಳಗಾಗಿದ್ದವು ಎಂದು ಪ್ರಾಧಿಕಾರ ಮಾಹಿತಿ ನೀಡಿದೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಬಳಕೆಗಾಗಿ ಎರಡು ಹೊಸ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಟರ್ಮಿನಲ್ ಕಟ್ಟಡವನ್ನು ಮೇಲ್ದರ್ಜೆಗೇರಿಸಲಾಗಿದೆ. ತಂತ್ರಾಂಶ ಆಧಾರಿತ ಕ್ಯಾಬ್ ಸೌಲಭ್ಯ, ಎಲೆಕ್ಟ್ರಾನಿಕ್ ಸ್ವಯಂಚಾಲಿಕ ನಿಯಂತ್ರಣ ವ್ಯವಸ್ಥೆ, ಇ- ಗೇಟ್, 500 ಹೊಸ ಟ್ರಾಲಿ, ಎಟಿಎಂ ಕೇಂದ್ರಗಳನ್ನು ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ತೆರೆಯಲಾಗಿದೆ. ಈ ಎಲ್ಲಾ ಅಂಶಗಳನ್ನು ಆಧರಿಸಿ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ವಿಶ್ವ ಮಟ್ಟದ ಸ್ಥಾನ ನೀಡಲಾಗಿದೆ. ಜೊತೆಗೆ ಈ ನಿಲ್ದಾಣವನ್ನು ಪರಿಸರಸ್ನೇಹಿ ನಿಲ್ದಾಣವನ್ನಾಗಿ ಬದಲಾಯಿಸಿರುವುದೂ ಈ ಸ್ಥಾನಮಾನ ಪಡೆಯಲು ಕಾರಣವಾಗಿದೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಥಳೀಯ ಕಲೆ ಮತ್ತು ಸಂಸ್ಕೃತಿ ಪ್ರತಿಬಿಂಬಿಸುವ ಕಲಾಕೃತಿಗಳನ್ನು ಪ್ರದರ್ಶಿಸಿರುವುದು ಪ್ರಯಾಣಿಕರ ಮೆಚ್ಚುಗೆಗೆ ಕಾರಣವಾಗಿದೆ. ಈ ಸ್ಥಾನ ದೊರೆಯಲು ಈ ಎಲ್ಲಾ ಅಂಶಗಳೂ ಕಾರಣ ಎಂದು ಪ್ರಾಧಿಕಾರದ ಕಾರ್ಪೋರೇಟ್ ಸಂವಹನ ವಿಭಾಗದ ಪ್ರಕಟಣೆ ತಿಳಿಸಿದೆ.












Click it and Unblock the Notifications