Udupi-Chikkamagaluru: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಮಗ್ರ ಪರಿಚಯ
ಚಿಕ್ಕಮಗಳೂರು, ಮಾರ್ಚ್ 21: 1952ರಲ್ಲಿ ದೇಶದಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆ ಸಂದರ್ಭ ಚಿಕ್ಕಮಗಳೂರು ಜಿಲ್ಲೆ ಹಾಸನ ಲೋಕಸಭೆ ಕ್ಷೇತ್ರಕ್ಕೆ ಒಳಪಟ್ಟಿತ್ತು. 1967ರಲ್ಲಿ ಕ್ಷೇತ್ರ ಪುನರ್ವಿಂಗಡಣೆಯಾದ ಬಳಿಕ ಹಾಸನ ಕ್ಷೇತ್ರದಿಂದ ಬೇರ್ಪಟ್ಟು ಪ್ರತ್ಯೇಕ ಲೋಕಸಭಾ ಕ್ಷೇತ್ರವಾಗಿ ವಿಂಗಡಣೆಯಾಯಿತು.
2009ರಲ್ಲಿ ಮತ್ತೆ ನಡೆದ ಕ್ಷೇತ್ರಪುನರ್ವಿಂಗಡಣೆಯಲ್ಲಿ ಚಿಕ್ಕಮಗಳೂರು ಹಾಗೂ ಉಡುಪಿ ಜಿಲ್ಲೆಗಳನ್ನೊಳಗೊಂಡ ಕ್ಷೇತ್ರದ ಉದಯವಾಗಿದ್ದು, ಸದ್ಯ ಉಡುಪಿ-ಚಿಕ್ಕಮಗಳೂರು ಜಿಲ್ಲೆಗಳ ತಲಾ 4 ವಿಧಾನಸಭೆ ಕ್ಷೇತ್ರಗಳು ಸೇರಿ ಒಂದು ಲೋಕಸಭೆ ಕ್ಷೇತ್ರವಾಗಿ ಈ ಕ್ಷೇತ್ರ ಹೊರಹೊಮ್ಮಿದೆ.

ಉಡುಪಿ ಜಿಲ್ಲೆಯ ಕಾಪು, ಕಾರ್ಕಳ, ಕುಂದಾಪುರ, ಉಡುಪಿ ವಿಧಾನಸಭೆ ಕ್ಷೇತ್ರ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಶೃಂಗೇರಿ, ತರೀಕೆರೆ ಹಾಗೂ ಚಿಕ್ಕಮಗಳೂರು ವಿಧಾನಸಭೆ ಕ್ಷೇತ್ರಗಳನ್ನು ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಒಳಗೊಂಡಿದ್ದು, ಜಿಲ್ಲೆಯ ಕಡೂರು ತಾಲೂಕು ಮಾತ್ರ ಹಾಸನ ಲೋಕಸಭೆ ಕ್ಷೇತ್ರಕ್ಕೆ ಸೇರಿಕೊಂಡಿದೆ.
ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಅವರು ಈ ಕ್ಷೇತ್ರದ ಹಾಲಿ ಸಂಸದರಾಗಿದ್ದು, 2014ರ ಚುನಾವಣೆಯಲ್ಲಿ ಈ ಕ್ಷೇತ್ರದ ಸಂಸದೆಯಾಗಿ ಆಯ್ಕೆಯಾಗಿದ್ದ ಶೋಭಾ ಕರಂದ್ಲಾಜೆ 2019ರ ಚುನಾವಣೆಯಲ್ಲೂ ಮರು ಆಯ್ಕೆಯಾಗುವ ಮೂಲಕ ಎರಡನೇ ಬಾರಿಗೆ ಸಂಸದೆಯಾಗಿದ್ದಾರೆ.
ಕ್ಷೇತ್ರದ ಪರಿಚಯ
ಉಡುಪಿ ಜಿಲ್ಲೆ ಸಂಪೂರ್ಣವಾಗಿ ಕರಾವಳಿ ಪ್ರದೇಶವಾಗಿದ್ದರೇ, ಚಿಕ್ಕಮಗಳೂರು ಮಲೆನಾಡು ಹಾಗೂ ಬಯಲು ಪ್ರದೇಶವನ್ನೊಳಗೊಂಡ ಜಿಲ್ಲೆಯಾಗಿದೆ. ಎರಡು ಭಿನ್ನ ಭೌಗೋಳಿಕ ಪ್ರದೇಶದಿಂದ ಕೂಡಿರುವ ಈ ಕ್ಷೇತ್ರದ ಮಲೆನಾಡು ಭಾಗದಲ್ಲಿ ಕನ್ನಡ, ತುಳು, ಕೊಂಕಣಿ, ಮಲೆಯಾಳಿ ಭಾಷೆಯನ್ನು ಮಾತನಾಡುವ ಜನರಿದ್ದು, ಇಲ್ಲಿನ ಮಲೆನಾಡು ಭಾಗದ ಜನರಿಗೆ ಕರಾವಳಿ ನಂಟು ಹಿಂದಿನಿಂದಲೂ ಇದೆ.

ಕರಾವಳಿ ಮೂಲದ ಜನರು ಚಿಕ್ಕಮಗಳೂರು ಜಿಲ್ಲೆಯ ಕಳಸ, ಮೂಡಿಗೆರೆ, ಶೃಂಗೇರಿ, ಎನ್.ಆರ್.ಪುರ ಹಾಗೂ ಕೊಪ್ಪ ತಾಲೂಕುಗಳು ಅಪ್ಪಟ ಮಲೆನಾಡು ಪ್ರದೇಶವಾಗಿದ್ದು, ಮಲೆನಾಡು ಭಾಗದ ತಾಲೂಕುಗಳಲ್ಲಿ ಕರಾವಳಿ ಮೂಲದ ಜನರು ಭದ್ರ ನೆಲೆ ಕಂಡುಕೊಂಡಿದ್ದಾರೆ. ಕೃಷಿ ಸೇರಿದಂತೆ ವಿವಿಧ ಉದ್ಯಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಜಿಲ್ಲೆಯ ಜನರೊಂದಿಗೆ ಬೆರೆತು ಹೋಗಿದ್ದಾರೆ.
ಇನ್ನು ಜಿಲ್ಲೆಯ ತರೀಕೆರೆ, ಚಿಕ್ಕಮಗಳೂರು, ಅಜ್ಜಂಪುರ ತಾಲೂಕುಗಳು ಅಪ್ಪಟ ಬಯಲು ಪ್ರದೇಶವಾಗಿದ್ದು, ಈ ಭಾಗದ ಜನರಲ್ಲಿ ಬಯಲು ಪ್ರದೇಶದ ಆಚಾರ, ವಿಚಾರ, ಸ್ವಭಾವ ಸಮ್ಮಿಳಿತವಾಗಿದೆ. ಒಟ್ಟಾರೆ ಚಿಕ್ಕಮಗಳೂರು ಜಿಲ್ಲೆ ವಿವಿಧ ಭಾಷೆ, ಆಚಾರ, ಸಾಂಸ್ಕøತಿಕ, ಸಾಮಾಜಿಕ ಹಿನ್ನೆಲೆ ಇರುವ ಜನರಿಂದ ಕೂಡಿರುವ ವಿವಿಧತೆಯಲ್ಲಿ ಏಕತೆಯ ಸಂದೇಶ ಸಾರುತ್ತಿರುವ ಜಿಲ್ಲೆಯಾಗಿದೆ.
ಕ್ಷೇತ್ರದ ಜನರ ಆದಾಯದ ಮೂಲ
ಕೃಷಿ ಹಾಗೂ ತೋಟಗಾರಿಕೆ ಇಲ್ಲಿನ ಜನರ ಆದಾಯದ ಪ್ರಮುಖ ಮೂಲವಾಗಿದ್ದು, ಕಾಫಿ, ಅಡಿಕೆ, ಭತ್ತ, ರಬ್ಬರ್, ಕಾಳುಮೆಣಸು, ಏಲಕ್ಕಿಯಂತಹ ಬೆಳೆಗಳನ್ನು ಜಿಲ್ಲೆಯ ಮಲೆನಾಡು ಭಾಗದ ಜನರ ಪ್ರಮುಖ ಆದಾಯದ ಮೂಲವಾಗಿದ್ದರೇ, ಬಯಲು ಭಾಗದಲ್ಲಿ ತರಕಾರಿ, ರಾಗಿ, ಜೋಳದಂತಹ ಕೃಷಿ ಬೆಳೆಗಳು ಜನರ ಆದಾಯದ ಮೂಲವಾಗಿದೆ. ಜಿಲ್ಲೆಯಲ್ಲಿರುವ ಕಾಪಿ ಹಾಗೂ ಟೀ ಉದ್ಯಮ ಲಕ್ಷಾಂತರ ಕಾರ್ಮಿಕರಿಗೆ ಪ್ರತ್ಯಕ್ಷ, ಪರೋಕ್ಷವಾಗಿ ಉದ್ಯೋಗ ನೀಡಿರುವ ಪ್ರಮುಖ ಆದಾಯದ ಮೂಲವಾಗಿದೆ. ಕಾಫಿ, ಟೀ ಉದ್ಯಮದ ಬಳಿಕ ಜಿಲ್ಲೆಯಲ್ಲಿ ಯಥೇಚ್ಛವಾಗಿ ಬೆಳೆಯುತ್ತಿರುವ ಅಡಿಕೆ ಬೆಳೆ ಕೂಡ ಇತ್ತೀಚಿನ ದಿನಗಳಲ್ಲಿ ಪ್ರಮುಖ ಉದ್ಯಮವಾಗಿ ಹೊರ ಹೊಮ್ಮಿದೆ. ಅಡಿಕೆ ಬೆಳೆ ನಂಬಿ ಲಕ್ಷಾಂತರ ರೈತರು, ಕಾರ್ಮಿಕರು ಬದುಕು ಕಟ್ಟಿಕೊಂಡಿದ್ದಾರೆ.

ಕ್ಷೇತ್ರದ ರಾಜಕೀಯ ಪರಿಚಯ
ಉಡುಪಿ ಚಿಕ್ಕಮಗಳೂರು ಕ್ಷೇತ್ರ ರಾಜಕೀಯವಾಗಿ ಅತ್ಯಂತ ಮಹತ್ವ ಪಡೆದುಕೊಂಡಿರುವ ಕ್ಷೇತ್ರವಾಗಿದೆ. ದಿಲ್ಲಿ ರಾಜಕಾರಣಕ್ಕೆ ಈ ಕ್ಷೇತ್ರದ ಬಯಲು ಭಾಗ, ಮಲೆನಾಡು ಹಾಗೂ ಕರಾವಳಿ ಭಾಗದ ರಾಜಕೀಯ ಮುತ್ಸದ್ಧಿ ರಾಜಕಾರಣಿಗಳನ್ನೇ ಕ್ಷೇತ್ರ ನೀಡಿದೆ. ಡಿ.ಎಂ.ಪುಟ್ಟೇಗೌಡ, ಡಿ.ಬಿ.ಚಂದ್ರೇಗೌಡ, ಡಿ.ಕೆ.ತಾರಾದೇವಿ, ಡಿ.ಸಿ.ಶ್ರೀಕಂಠಪ್ಪ, ಬಿ.ಎಲ್.ಶಂಕರ್, ಜಯಪ್ರಕಾಶ್ ಹೆಗಡೆ, ಸದಾನಂದಗೌಡ, ಶೋಭಾ ಕರಂದ್ಲಾಜೆಯಂತಹ ಮುತ್ಸದ್ಧಿ ರಾಜಕಾರಣಿಗಳು ದೇಶದ ದಿಲ್ಲಿ ರಾಜಕಾರಣದಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ.
ಈ ಘಟಾಟನುಘಟಿ ರಾಜಕಾರಣಿಗಳ ಪೈಕಿ ಬಹುತೇಕರು ಅಪಾರ ಶೈಕ್ಷಣಿಕ ಅರ್ಹತೆಯ ಈ ರಾಜಕೀಯ ಧುರೀಣರಾಗಿದ್ದು, ದಿಲ್ಲಿ ರಾಜಕಾರಣದ ಮೂಲಕ ತಮ್ಮ ಸಂಸತ್ ಕ್ಷೇತ್ರ ಹಾಗೂ ಜನರ ಬದುಕಿನ ಸುಧಾರಣೆ ನಿಟ್ಟಿನಲ್ಲಿ ತಮ್ಮದೇಯಾದ ಕೊಡುಗೆ ನೀಡಿದ ಸಾಧಕರಾಗಿದ್ದಾರೆ. ಕ್ಷೇತ್ರವನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಸದೃಢಗೊಳಿಸಲು ಎಲ್ಲ ಸಂಸದರು ತಮ್ಮದೇಯಾದ ಕೊಡುಗೆಗಳನ್ನು ಕ್ಷೇತ್ರಕ್ಕೆ ನೀಡಿದ್ದಾರೆ.
ಡಿ.ಬಿ.ಚಂದ್ರೇಗೌಡ, ಬಿ.ಎಲ್.ಶಂಕರ್, ಜಯಪ್ರಕಾಶ್ ಹೆಗಡೆ, ಡಿ.ಕೆ.ತಾರಾದೇವಿ, ಡಿ.ಸಿ.ಶ್ರೀಕಂಠಪ್ಪ ಅವರಂತಹ ಮುತ್ಸದ್ಧಿಗಳು ಅಪಾರ ರಾಜಕೀಯ ಜ್ಞಾನದೊಂದಿಗೆ ದಿಲ್ಲಿಯಲ್ಲಿರುವ ಸಂಸತ್‍ನಲ್ಲಿ ರಾಜ್ಯ ಹಾಗೂ ಕ್ಷೇತ್ರದ ಎರಡೂ ಜಿಲ್ಲೆಗಳ ಕೀರ್ತಿಯನ್ನು ಬೆಳಗಿಸಿದವರಾಗಿದ್ದಾರೆ. ಡಿ.ಬಿ.ಚಂದ್ರೇಗೌಡ, ಬಿ.ಎಲ್.ಶಂಕರ್, ಜಯಪ್ರಕಾಶ್ ಹೆಗಡೆ ಅತ್ಯುತ್ತಮ ಸಂಸದೀಯಪಟುಗಳಾಗಿ ಮಿಂಚಿದ್ದಾರೆ.

ಡಿ.ಬಿ.ಚಂದ್ರೇಗೌಡ ಅವರು ತಮ್ಮ ರಾಜಕೀಯ ಮುತ್ಸದ್ಧಿತನ, ರಾಜಕಾರಣ, ಸಂವಿಧಾನದ ಬಗ್ಗೆ ಹೊಂದಿದ್ದ ಅಪಾರ ಜ್ಞಾನದ ಕಾರಣಕ್ಕೆ ಸಂಸತ್‍ನ ಉಭಯ ಸದನಗಳ ಪ್ರತಿನಿಧಿಯಾಗಿದ್ದಲ್ಲದೇ ರಾಜ್ಯದ ವಿಧಾನಸಭೆ ಹಾಗೂ ವಿಧಾನಪರಿಷತ್‍ನ ಪ್ರತಿನಿಧಿಯಾಗಿ ರಾಜಕೀಯ ಕ್ಷೇತ್ರದಲ್ಲಿ 4 ಸದನಗಳನ್ನೂ ಛಾಪು ಮೂಡಿಸಿ ಸದನಗಳ ಗೌರವ ಹೆಚ್ಚಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.
ಎಲ್ಲ ಸಂಸದರು ತಮ್ಮ ಅಧಿಕಾರವಧಿಯಲ್ಲಿ ಜಿಲ್ಲೆಯ ಕಾಫಿ ಉದ್ಯಮ ಸೇರಿದಂತೆ ಅಡಿಕೆ ಬೆಳೆಗಾರರು, ಬಯಲು ಭಾಗದ ನೀರಾವರಿ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿ ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲೂ ಯಶ ಕಂಡಿದ್ದಾರೆ.
ದಿಲ್ಲಿ ರಾಜಕಾರಣದಲ್ಲಿ ಮಹಿಳೆಯರ ಛಾಪು
ಕ್ಷೇತ್ರದ ಲೋಕಸಭೆ ಚುನಾವಣೆ ಇತಿಹಾಸದಲ್ಲಿ ಇದುವರೆಗೆ ಚಿಕ್ಕಮಗಳೂರು ಹಾಗೂ ಕರಾವಳಿ ಮೂಲದ ಇಬ್ಬರು ಮಹಿಳಾ ರಾಜಕಾರಣಿಗಳು ದಿಲ್ಲಿ ರಾಜಕಾರಣ ಪ್ರವೇಶಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಡಿ.ಕೆ.ತಾರಾದೇವಿ 1984ರ ಲೋಕಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಸಂಸದೆಯಾಗಿ ಆಯ್ಕೆಯಾಗುವ ಮೂಲಕ ದಿಲ್ಲಿ ರಾಜಕಾರಣ ಪ್ರವೇಶಿಸಿದ ಮೊದಲ ಮಹಿಳಾ ಸಂಸದೆಯಾಗಿದ್ದರೇ, 2014ರ ಚುನಾವಣೆಯಲ್ಲಿ ಕರಾವಳಿ ಮೂಲದ ಶೋಭಾ ಕರಂದ್ಲಾಜೆ ಸಂಸದೆಯಾಗಿ ಆಯ್ಕೆಯಾಗುವ ಮೂಲಕ ಕ್ಷೇತ್ರದಿಂದ ಆಯ್ಕೆಯಾದ 2ನೇ ಮಹಿಳಾ ಸಂಸದೆಯಾಗಿದ್ದಾರೆ.
ಇಬ್ಬರು ಮಹಿಳಾ ರಾಜಕಾರಣಿಗಳು ತಲಾ ಎರಡು ಬಾರಿ ಸಂಸದೆಯಾಗಿ ಆಯ್ಕೆಯಾಗಿರುವುದು ವಿಶೇಷವಾಗಿದೆ. ಇದರ ಹೊರತಾಗಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಐತಿಹಾಸಿಕ ಗೆಲುವು ದಾಖಲಿಸಿದ್ದು, ಇಂದಿರಾ ಗಾಂಧಿ ಸೇರಿದಂತೆ ಒಟ್ಟು ಮೂವರು ಮಹಿಳೆಯರು ಈ ಕ್ಷೇತ್ರದ ರಾಜಕಾರಣದಲ್ಲಿ ಛಾಪು ಮೂಡಿಸಿದ್ದಾರೆ.
ಸಾಂಸ್ಕೃತಿಕ ಸಾಮಾಜಿಕ ವಿಶೇಷತೆ
ಚಿಕ್ಕಮಗಳೂರು-ಉಡುಪಿ ಲೋಕಸಭೆ ಕ್ಷೇತ್ರ ಸಾಂಸ್ಕೃತಿಕವಾಗಿ ವಿಭಿನ್ನ, ವೈಶಿಷ್ಟ್ಯಪೂರ್ಣ ಇತಿಹಾಸ ಹೊಂದಿರುವ ಕ್ಷೇತ್ರವಾಗಿದೆ. ಉಡುಪಿ ಜಿಲ್ಲೆ ಬುಡಕಟ್ಟು ಸಂಸ್ಕೃತಿಯ ಕಲೆಗಳು ಹಾಗೂ ಯಕ್ಷಗಾನದಂತಹ ಸಾಂಸ್ಕೃತಿಕ ಕಲೆಗಳ ಬೀಡಾಗಿದ್ದರೇ, ಚಿಕ್ಕಮಗಳೂರು ಜಿಲ್ಲೆ ಮಲೆನಾಡು ಹಾಗೂ ಬಯಲು ಪ್ರದೇಶಗಳ ಸಾಂಸ್ಕೃತಿಕ ಪರಂಪರೆಗೆ ಹೆಸರುವಾಸಿಯಾಗಿದೆ.
ಜಿಲ್ಲೆಯ ಮಲೆನಾಡು ಭಾಗದ ತಾಲೂಕುಗಳು ಆದಿವಾಸಿ ಸಮುದಾಯಗಳ ಸಂಸ್ಕೃತಿ, ಆಚಾರ, ವಿಚಾರಗಳು, ಕೋಲದಂತಹ ಜಾನಪದ ಆಚರಣೆಗೆ ಹೆಸರುವಾಸಿಯಾಗಿದ್ದರೇ, ಜಿಲ್ಲೆಯ ಬಯಲು ಭಾಗದ ತಾಲೂಕುಗಳು ಹಲವಾರು ಜಾನಪದ ಕಲೆಗಳಿಗೆ ಹೆಸರಾಗಿದೆ. ಸಾಹಿತ್ಯ ಕ್ಷೇತ್ರದಲ್ಲೂ ಜಿಲ್ಲೆ ಅತ್ಯಂತ ಶ್ರೀಮಂತವಾಗಿದ್ದು, ಪೂರ್ಣಚಂದ್ರ ತೇಜಸ್ವಿಯಂತಹ ಸಾಹಿತಿಗಳು ನಾಡಿನ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇಯಾದ ಕೊಡುಗೆ ನೀಡಿದ ಸಾಧಕರಾಗಿದ್ದಾರೆ. ಜಿಲ್ಲಾದ್ಯಂತ ಹಿಂದೂ, ಮುಸ್ಲಿಂ, ಕ್ರೈಸ್ತ ಸಮುದಾಯದ ಜನರು ತಮ್ಮದೇಯಾದ ವಿಭಿನ್ನ ಸಾಂಸ್ಕೃತಿಕ ಪರಂಪರೆಗೆ ಸಾಕ್ಷಿಯಾಗಿದ್ದಾರೆ.
ಕ್ಷೇತ್ರದ ರಾಜಕೀಯ ಇತಿಹಾಸ
1952ರಿಂದ 1996ರ ಲೋಕಸಭೆ ಚುನಾವಣೆವರೆಗೆ ಈ ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿತ್ತು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಸೋಲಿಲ್ಲದ ಸರದಾರರಂತೆ ನಿರಾಯಾಸವಾಗಿ ಗೆಲುವು ಕಾಣುತ್ತಿದ್ದರು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ದೇಶದ ಸ್ವಾತಂತ್ರ್ಯ ಚಳವಳಿ, ಮೊದಲ ಪ್ರಧಾನಿ ನೆಹರು, ನಂತರದ ಪ್ರಧಾನಿಗಳಾದ ಇಂದಿರಾಗಾಂಧಿ, ರಾಜೀವ್‌ಗಾಂಧಿ ಅವರ ಆಡಳಿತದ ಅವಧಿಯಲ್ಲಿ ಜಾರಿಯಾದ ಜನಪರ ಯೋಜನೆಗಳು ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಕಾರಣವಾಗುತ್ತಿತ್ತು. ಆದರೆ 1998ರ ಚುನಾವಣೆ ಬಳಿಕ ಚಿಕ್ಕಮಗಳೂರು ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ಪಕ್ಷದ ಡಿ.ಸಿಶ್ರೀಕಂಠಪ್ಪ ಅವರು ಗೆಲುವು ದಾಖಲಿಸಿದ ಬಳಿಕ ಚಿಕ್ಕಮಗಳೂರು ಲೋಕಸಭೆ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ ಎಂಬ ಹಣೆಪಟ್ಟಿಯನ್ನು ಕಳಚಿತು.
ಬಿಜೆಪಿಯ ಡಿ.ಸಿ.ಶ್ರೀಕಂಠಪ್ಪ ಅವರು ಸತತ ಮೂರು ಬಾರಿ ಸಂಸದರಾಗಿ ಹ್ಯಾಟ್ರಿಕ್ ಸಾಧನೆ ಮಾಡಿದ್ದು, ಡಿ.ಸಿ.ಶ್ರೀಕಂಪ್ಪ ಬಳಿಕ ಕ್ಷೇತ್ರ ಪುನರ್ವಿಂಗಡಣೆಯಾಗಿ ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂಧ ಸ್ಪರ್ಧಿಸಿದ್ದ ಡಿ.ವಿ. ಸದಾನಂದಗೌಡ ಸಂಸದರಾಗಿ ಆಯ್ಕೆಯಾದರು. ನಂತರದ ಒಂದು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಜಯಪ್ರಕಾಶ್ ಹೆಗಡೆ ಆಯ್ಕೆಯಾಗಿದ್ದರು. ಆ ಬಳಿಕ ನಡೆದ 2014 ಹಾಗೂ 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಶೋಭಾ ಕರಂದ್ಲಾಜೆ ಸತತ ಎರಡು ಬಾರಿ ಸಂಸದೆಯಾಗಿ ಆಯ್ಕೆಯಾಗಿದ್ದಾರೆ.
ಡಿ.ಸಿ.ಶ್ರೀಕಂಠಪ್ಪ ಅವರು ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದ ಬಳಿಕ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದ ಚಿಕ್ಕಮಗಳೂರು ಜಿಲ್ಲೆ ಕ್ರಮೇಣ ಸಂಘಪರಿವಾರದ ಪ್ರಯೋಗಶಾಲೆಯಾಗಿ ಮಾರ್ಪಟ್ಟಿತು. ಇದೇ ಸಂದರ್ಭದಲ್ಲಿ ಇನಾಂ ದತ್ತಾತ್ರೇಯ ಬಾಬಾ ಬುಡನ್‍ಗಿರಿ-ದತ್ತಪೀಠದ ಹೋರಾಟ ಜಿಲ್ಲೆಯಲ್ಲಿ ಕಾವು ಪಡೆದುಕೊಂಡಿದ್ದರಿಂದ ಚಿಕ್ಕಮಗಳೂರು ಜಿಲ್ಲಾದ್ಯಂತ ಕಮಲಪಡೆ ಪ್ರವರ್ಧಮಾನಕ್ಕೆ ಬಂತು. ಆ ಬಳಿಕ ಲೋಕಸಭೆ ಕ್ಷೇತ್ರ ಹಾಗೂ ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಕಂಡರು. ಗ್ರಾಪಂ, ತಾಪಂ, ಜಿಪಂ ಕೂಡ ಬಿಜೆಪಿಮಯವಾದವು. ಇಡೀ ಜಿಲ್ಲೆಯ ರಾಜಕೀಯ ಚಿತ್ರಣ ಬದಲಾದ ಪರಿಣಾಮ ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಸತತವಾಗಿ ಬಿಜೆಪಿ ಪಾಲಾಗುತ್ತಲೇ ಇದೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿಗೆ ರಾಜಕೀಯ ಪುನರ್ಜನ್ಮದ ಕ್ಷೇತ್ರ
1978ರ ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದಲ್ಲಿ ನಡೆದ ಉಪಚುನಾವಣೆ ದೇಶ, ವಿದೇಶಗಳ ಗಮನ ಸೆಳೆದು ಇತಿಹಾಸ ನಿರ್ಮಿಸಿದ ಚುನಾವಣೆಯಾಗಿ ದಾಖಲಾಗಿದೆ. 1977ರ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಸೋಲುಕಂಡಿದ್ದರು. ಇದರಿಂದ ಅವರು ದೇಶದ ಪ್ರಧಾನಿಯಾಗಬೇಕೆಂಬ ಕೋಟ್ಯಂತರ ಕಾಂಗ್ರೆಸ್ ಕಾರ್ಯಕರ್ತರ ಕನಸು ನುಚ್ಚುನೂರಾಗಿತ್ತು. ಈ ಸಂದರ್ಭದಲ್ಲಿ ಚಿಕ್ಕಮಗಳೂರು ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿದ್ದ ಡಿ.ಬಿ.ಚಂದ್ರೇಗೌಡ ಅವರು ತಮ್ಮ ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಿ, ಇಂದಿರಾಗಾಂಧಿ ಅವರನ್ನು ಈ ಕ್ಷೇತ್ರದಿಂದ ಸ್ಪರ್ಧಿಸಲು ತಮ್ಮ ಸ್ಥಾನವನ್ನು ತ್ಯಾಗ ಮಾಡಿ ಇತಿಹಾಸ ಬರೆದರು. ಆಗ ನಡೆದ ಉಪಚುನಾವಣೆಯಲ್ಲಿ ಇಂದಿರಾಗಾಂಧಿ ಅವರು ಅಭೂತಪೂರ್ವ ಜಯಗಳಿಸಿ ದೇಶದ ಪ್ರಧಾನಿಯಾದರು.
ಸೋತು ಕಂಗಾಲಾಗಿದ್ದ ಇಂದಿರಾಗಾಂಧಿ ಅವರ ರಾಜಕೀಯ ಭವಿಷ್ಯ ಮುಗಿಯಿತು ಎಂಬಂತಹ ಸ್ಥಿತಿಯಲ್ಲಿ ಡಿಬಿಸಿ ಅವರ ತ್ಯಾಗದಿಂದಾಗಿ ಇಂದಿರಾಗಾಂಧಿ ಅವರು ಉಪಚುನಾವಣೆಯಲ್ಲಿ ಐತಿಹಾಸಿಕ ಗೆಲುವು ದಾಖಲಿಸಿ ರಾಜಕೀಯವಾಗಿ ಪುನರ್ಜನ್ಮ ಪಡೆದಿದ್ದು, ಈ ಕ್ಷೇತ್ರದ ಪ್ರಮುಖ ಚುನಾವಣಾ ದಾಖಲೆಯಾಗಿದೆ. ಇದರ ಹೊರತಾಗಿ ಈ ಕ್ಷೇತ್ರದಲ್ಲಿ ಬಿಜೆಪಿಯ ಡಿ.ಸಿ.ಶ್ರೀಕಂಠಪ್ಪ ಅವರು ಸತತ ಮೂರು ಸಂಸದರಾಗಿ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ಗೆಲುವಿನ ಸಾಧನೆ ಮಾಡಿದ್ದಾರೆ.
ಹಾಸನ ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಿದ್ದನಂಜಪ್ಪ, ಚಿಕ್ಕಮಗಳೂರು ಕ್ಷೇತ್ರದಲ್ಲಿ ಡಿ.ಬಿ.ಚಂದ್ರೇಗೌಡ, ಡಿ.ಕೆ.ತಾರಾದೇವಿ, ಡಿ.ಎಂ.ಪುಟ್ಟೇಗೌಡ ಹಾಗೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಅವರು ತಲಾ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿರುವುದು ಈ ಕ್ಷೇತ್ರದ ಚುನಾವಣಾ ದಾಖಲೆಯಾಗಿದೆ.
ಚಿಕ್ಕಮಗಳೂರು-ಉಡುಪಿ ಲೋಕಸಭೆ ಚುನಾವಣಾ ಇತಿಹಾಸ
ಚಿಕ್ಕಮಗಳೂರಿನ ಲೋಕಸಭೆ ಚುನವಣೆ ಇತಿಹಾಸವನ್ನು ಗಮನಿಸಿದರೆ ಕ್ಷೇತ್ರದ ಜನತೆ ರಾಜಕೀಯ ಬದಲಾವಣೆಗೆ ತಕ್ಕಂತೆ ಪ್ರಾದೇಶಿಕ ನ್ಯಾಯವನ್ನೂ ಒದಗಿಸುತ್ತಾ ಬಂದಿದ್ದಾರೆ. ಹಾಸನ ಜಿಲ್ಲೆಯಿಂದ ಆಯ್ಕೆಯಾದವರು ಎರಡು ಬಾರಿ ಈ ಕ್ಷೇತ್ರವನ್ನು ಲೋಕಸಭೆಯಲ್ಲಿ ಪ್ರತಿನಿಧಿಸಿದ್ದಾರೆ. ನಂತರ ನಡೆದ ಕ್ಷೇತ್ರ ಪುನರ್ವಿಂಗಡಣೆಯಿಂದಾಗಿ ಚಿಕ್ಕಮಗಳೂರು ಕ್ಷೇತ್ರ ಪ್ರತ್ಯೇಕವಾಗಿ ಅಸ್ತಿತ್ವಕ್ಕೆ ಬಂದಾಗಲೂ ಜಿಲ್ಲೆಯ ಮಲೆನಾಡು ಹಾಗೂ ಬಯಲು ಪ್ರದೇಶದಿಂದ ಹಲವು ಮುತ್ಸದ್ಧಿಗಳನ್ನು ದಿಲ್ಲಿ ರಾಜಕೀಯಕ್ಕೆ ಹೋಗಿದ್ದಾರೆ. ಉಡುಪಿ ಜಿಲ್ಲೆಯನ್ನು ಒಳಗೊಂಡ ಬಳಿಕ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಪದೇ ಪದೇ ಕರಾವಳಿ ಮೂಲದ ಪ್ರತಿನಿಧಿಗಳನ್ನೇ ಮತದಾರರು ಆಯ್ಕೆ ಮಾಡುತ್ತಿರುವುದು ಈ ಕ್ಷೇತ್ರದ ವಿಶೇಷತೆಯಾಗಿದೆ.
1952 ಹಾಗೂ 1957ರಲ್ಲಿ ಹಾಸನ ಚಿಕ್ಕಮಗಳೂರು ಕ್ಷೇತ್ರ ಅಸ್ತಿತ್ವದಲ್ಲಿತ್ತು. ಆ ಎರಡೂ ಅವಧಿಗೆ ಜನತೆ ಹಾಸನ ಜಿಲ್ಲೆಯ ಸಿದ್ದನಂಜಪ್ಪ ಅವರನ್ನು ಆಯ್ಕೆ ಮಾಡಿದ್ದರು. 1957ರ ಚುನಾವಣೆಯಲ್ಲಿ ಸಿದ್ದನಂಜಪ್ಪ ಅವಿರೋಧವಾಗಿ ಆಯ್ಕೆಯಾಗಿ ದೇಶದ ಗಮನ ಸೆಳೆದಿದ್ದರು. 1967ರ ಚುನಾವಣೆ ಹಾಗೂ ನಂತರದ ಚುನಾವಣೆಗಳಲ್ಲಿ ಕ್ಷೇತ್ರದಲ್ಲಿ ಮಲೆನಾಡಿನ ರಾಜಕಾರಣಿಗಳದ್ದೇ ಪಾರುಪತ್ಯವಾಗಿತ್ತು. ಅದರಲ್ಲಿಯೂ ಮೂಡಿಗೆರೆ ತಾಲೂಕಿನ ದಾರದಹಳ್ಳಿ ಮೂಲದ ಘಟಾನುಘಟಿ ಮುತ್ಸದ್ಧಿ ರಾಜಕಾರಣಿಗಳನ್ನು ರಾಷ್ಟ್ರ ರಾಜಕಾರಣಕ್ಕೆ ಪರಿಚಯಿಸಿದೆ. 1967ರಲ್ಲಿ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಹುಚ್ಚೇಗೌಡ ಅವರು ಸಂಸದರಾಗಿ ಆರಿಸಿಬಂದರು. ನಂತರದ 1970 ಹಾಗೂ 1977ರಲ್ಲಿ ಎರಡು ಬಾರಿ ದಾರದಹಳ್ಳಿಯ ಡಿ.ಬಿ.ಚಂದ್ರೇಗೌಡ ಅವರು ಚುನಾಯಿತರಾದರು.
ಇಂದಿರಾ ಗಾಂಧಿ ಅವರ ಈ ಐತಿಹಾಸಿನ ಗೆಲುವಿನ ಬಳಿಕ ಈ ಕ್ಷೇತ್ರವು 1991ರವರೆಗೆ ದಾರದಹಳ್ಳಿ ಕುಟುಂಬದ ರಾಜಕಾರಣಿಗಳ ಹಿಡಿತದಲ್ಲೇ ಇದ್ದುದ್ದು ವಿಶೇಷ. ಇಂದಿರಾ ಗಾಂಧಿ ನಂತರದ 1980ರ ಚುನಾವಣೆಯಲ್ಲಿ ದಾರದಹಳ್ಳಿಯವರೇ ಆದ ಡಿ.ಎಂ.ಪುಟ್ಟೇಗೌಡ ಅವರು ಗೆದ್ದುಬಂದರು. ನಂತರದ 1984ರ ಚುನಾವಣೆಯಲ್ಲಿ ದಾರದಹಳ್ಳಿಯವರೇ ಆದ ಡಿ.ಕೆ.ತಾರಾದೇವಿ ಅವರು ಸಂಸದೆಯಾಗಿ ಆಯ್ಕೆಯಾದರು. 1989ರಲ್ಲಿ ಮತ್ತೆ ಡಿ.ಎಂ.ಪುಟ್ಟೇಗೌಡ ಅವರೇ ಆಯ್ಕೆಯಾದರು. 1991 ರಲ್ಲಿ ಡಿ.ಕೆ. ತಾರಾದೇವಿ ಮತ್ತೆ ಆಯ್ಕೆ ಯಾಗುವ ಮೂಲಕ ದಾರದಹಳ್ಳಿಯ ಮಹತ್ವವನ್ನು ಉಳಿಸಿಕೊಂಡು ಬಂದಿದ್ದರು. 1996ರ ಚುನಾವಣೆಯಲ್ಲಿ ಬಣಕಲ್‌ನ ಬಿ.ಎಲ್.ಶಂಕರ್ ಗೆದ್ದಿದ್ದು, ಅವರೂ ಸಹ ಮೂಡಿಗೆರೆ ತಾಲೂಕಿನವರೇ ಎಂಬುದು ವಿಶೇಷ.
ಆದರೆ 1998ರಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ಜಿಲ್ಲೆಯ ಬಯಲು ಪ್ರದೇಶದ ಡಿ.ಸಿ.ಶ್ರೀಕಂಠಪ್ಪ ಅವರು ಮೂಡಿಗೆರೆ ಹಾಗೂ ದಾರದಹಳ್ಳಿಯ ರಾಜಕಾರಣಿಗಳ ಪಾರುಪತ್ಯವನ್ನು ಮುರಿದರು. ಸತತ ಮೂರು ಬಾರಿ ಸಾಂಸದರಾಗಿ ಆಯ್ಕೆಯಾದ ಅವರು, ಕರಾವಳಿಯ ವೀರಪ್ಪ ಮೊಯ್ಲಿ ಸೇರಿದಂತೆ ಬಿ.ಎಲ್.ಶಂಕರ್, ಡಿ.ಎಂ.ಪುಟ್ಟೇಗೌಡ, ಡಿ.ಕೆ.ತಾರಾದೇವಿ ಅವರಂತಹ ಘಟನಾನುಘಟಿಗಳನ್ನು ಸೋಲಿಸಿದ್ದರು. 1999, 2004ರಲ್ಲಿ ಆವರು ಆಯ್ಕೆಯಾಗಿದ್ದರು.
ಕ್ಷೇತ್ರ ಪುನರ್‌ವಿಂಗಡಣೆ ಪರಿಣಾಮ 2009ರಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಉದಯವಾಯಿತು. ನಂತರ ನಡೆದ ಎರಡು ಚುನಾವಣೆಗಳಲ್ಲೂ ಕ್ಷೇತ್ರದ ಜನರು ಕರಾವಳಿ ಭಾಗದವರನ್ನೇ ಆರಿಸಿಕಳಿಸಿದ್ದಾರೆ. ಒಮ್ಮೆ ಡಿ.ವಿ.ಸದಾನಂದಗೌಡ ಅವರು ಗೆದ್ದುಬಂದರೇ, ಮತ್ತೊಮ್ಮೆ ಜಯಪ್ರಕಾಶ ಹೆಗ್ಡೆ ಅವರು ಆರಿಸಿ ಬಂದರು. 2014 ಮತ್ತು 2019ರಲ್ಲಿ ಶೋಭಾ ಕರಂದ್ಲಾಜೆ ಸತತವಾಗಿ 2 ಬಾರಿ ಆಯ್ಕೆಯಾದರು. ಒಟ್ಟಾರೆ ಭೌಗೋಳಿಕವಾಗಿ ವಿಭಿನ್ನ ವಾಗಿರುವ ಕ್ಷೇತ್ರದಿಂದ ಆಯಾ ಕಾಲಕ್ಕೆ ಉಂಟಾದ ರಾಜಕೀಯ ಬದಲಾವಣೆಗೆ ತಕ್ಕಂತೆ ಪ್ರತಿನಿಧಿಯನ್ನು ಆಯ್ಕೆ ಮಾಡಿರುವ ಕ್ಷೇತ್ರದ ಜನತೆ ಪ್ರಾದೇಶಿಕ ನ್ಯಾಯವನ್ನೂ ದೊರಕಿಸಿದ್ದಾರೆ ಎಂಬುದು ಕ್ಷೇತ್ರದ ಇತಿಹಾಸದಿಂದ ಕಂಡುಬರುವ ವಾಸ್ತವವಾಗಿದೆ.
ಕ್ಷೇತ್ರದ ಮತದಾರರ ವಿವರ
ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಒಟ್ಟು ಮತದಾರ ಸಂಖ್ಯೆ-9,63,738
ಪುರುಷ ಮತದಾರರು-4,75, 419
ಮಹಿಳಾ ಮತದಾರರು-4,88, 284
ಜಾತಿವಾರು ಮತದಾರರು
ಲಿಂಗಾಯತ-1,60,000
ಕುರುಬ-1,50,000
ಮುಸ್ಲಿಂ-1,10,000
ಎಸ್ಸಿ, ಎಸ್ಟಿ-2,20,000
ಒಕ್ಕಲಿಗ-1,20,000
ಇತರೆ-1,80,000












Click it and Unblock the Notifications