ವೈರಲ್ ಫೋಟೋ; ಶೌಚಾಲಯದಲ್ಲಿ ಬಂಧಿಯಾದ ಚಿರತೆ, ನಾಯಿ!
ದಕ್ಷಿಣ ಕನ್ನಡ, ಫೆಬ್ರವರಿ 03: ನಾಯಿಯನ್ನು ಅಟ್ಟಿಸಿಕೊಂಡ ಬಂದ ಚಿರತೆ ಮನೆಯ ಶೌಚಾಲಯಕ್ಕೆ ನುಗ್ಗಿದೆ. ಮನೆಯವರು ಚಿರತೆ ಮತ್ತು ನಾಯಿಯನ್ನು ಅಲ್ಲಿಯೇ ಕೂಡಿ ಹಾಕಿದ್ದಾರೆ. ಬುಧವಾರ ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬುಧವಾರ ಮುಂಜಾನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೈಕಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ.
ರೇಗಪ್ಪ ಎಂಬುವವರ ಮನೆಯ ನಾಯಿಯನ್ನು ಅಟ್ಟಿಸಿಕೊಂಡು ಬಂದ ಚಿರತೆ ಶೌಚಾಲಯಕ್ಕೆ ನುಗ್ಗಿದೆ. ಚಿರತೆ ನುಗ್ಗಿದ ಬಳಿಕ ಗಾಬರಿಗೊಂಡ ಮನೆಯ ಸದಸ್ಯರು ಹೊರಗೋಡಿ ಬಂದಿದ್ದಾರೆ. ಶೌಚಾಲಯದ ಬಾಗಿಲು ಹಾಕಿದ್ದಾರೆ.

ಇದರಿಂದಾಗಿ ಚಿರತೆ ಮತ್ತು ನಾಯಿ ಶೌಚಾಲಯದಲ್ಲಿಯೇ ಬಂಧಿಯಾಗಿವೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚಿರತೆ ಸಹ ಕೂಡಿ ಹಾಕಿದ್ದರಿಂದ ಗಾಬರಿಗೊಂಡಿದೆ. ಶೌಚಾಲಯದ ಒಂದು ಮೂಲೆಯಲ್ಲಿ ಚಿರತೆ ಮತ್ತೊಂದು ಮೂಲೆಯಲ್ಲಿ ನಾಯಿ ಇದೆ.
ಚಿರತೆ ಬಂಧಿಯಾಗಿರುವ ಮಾಹಿತಿಯನ್ನು ತಿಳಿದು ಸುಬ್ರಮಣ್ಯ ವಲಯ ಅರಣ್ಯಾಧಿಕಾರಿಗಳ ತಂಡ ಸ್ಥಳಕ್ಕೆ ಆಗಮಿಸಿದೆ. ಚಿರತೆಯನ್ನು ಸೆರೆ ಹಿಡಿಯುವ ಕಾರ್ಯಚರಣೆಯನ್ನು ಆರಂಭಿಸಿದ್ದಾರೆ.
ಮುಂಜಾನೆ ನಾಯಿ ಜೋರಾಗಿ ಕೂಗುತ್ತಾ ಓಡಿದ್ದನ್ನು ಕೇಳಿ ಹೊರಬಂದೆವು. ಆಗ ಚಿರತೆ ಅದನ್ನು ಅಟ್ಟಿಸಿಕೊಂಡು ಹೋಗಿದ್ದು ನೋಡಿದೆವು. ಅದು ಶೌಚಾಲಯದೊಳಗೆ ಹೋಗುತ್ತಿದ್ದಂತೆ ಬಾಗಿಲು ಹಾಕಿದೆವು ಎಂದು ರೇಗಪ್ಪ ಕುಟುಂಬದವರು ಹೇಳಿದ್ದಾರೆ.












Click it and Unblock the Notifications