ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಕಂಬಳದ ಕರೆಗಿಳಿದ ಕೋಣಗಳು!
ಮಂಗಳೂರು, ಡಿಸೆಂಬರ್ 06; ಅಭಿಮಾನಿಗಳ ಪಾಲಿನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿ ಎರಡು ತಿಂಗಳಾದರೂ ಅವರಿಲ್ಲದ ನೋವು ಇನ್ನೂ ಮಾಸಿಲ್ಲ. ರಾಜ್ಯಾದ್ಯಂತ ಅಭಿಮಾನಿಗಳು ವಿವಿಧ ರೀತಿಯಲ್ಲಿ ಅಪ್ಪುಗೆ ನಮನ ಸಲ್ಲಿಸುತ್ತಿದ್ದಾರೆ. ಅಪ್ಪುವಿನ ನೆನಪನ್ನು ಮತ್ತಷ್ಟು ಜೀವಂತವಾಗೀಡೋದಕ್ಕೆ ಸೇವಾ ಕಾರ್ಯಗಳನ್ನು ಮಾಡುತ್ತಿದ್ದಾರೆ. ಮಂಗಳೂರಿನ ಕಂಬಳದಲ್ಲೂ ಪುನೀತ್ ರಾಜ್‌ಕುಮಾರ್ ಹೆಸರು ಕೇಳಿಬಂದಿದೆ.
ಕರಾವಳಿಯಲ್ಲಿ ಕಂಬಳ ಋತು ಆರಂಭವಾಗಿದೆ. ಮೊದಲ ಕಂಬಳ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆಯ ಹೊಕ್ಕಾಡಿಗೋಳಿ ಎಂಬಲ್ಲಿ ನಡೆಯುತ್ತಿದೆ. ಹೊಕ್ಕಾಡಿಗೋಳಿಯ ವೀರ-ವಿಕ್ರಮ ಕಂಬಳ ಕರೆಯಲ್ಲಿ ನೂರಾರು ಜೋಡಿ ಕೋಣಗಳು ಪ್ರತಿಷ್ಠಿತ ಕಂಬಳ ಸ್ಪರ್ಧೆಯಲ್ಲಿ ಸೆಣಸಾಟ ನಡೆಸುತ್ತಿವೆ.
ಅದರಲ್ಲೂ ಈ ಬಾರಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹೆಸರಿನಲ್ಲಿ ಕೋಣಗಳು ಸ್ಪರ್ಧೆ ಗೆ ಇಳಿದಿದೆ. ಮರೋಡಿ ಕೃಷ್ಣ ಕೋಟ್ಯಾನ್ ನೇತೃತ್ವದಲ್ಲಿ ಕಂಬಳ ಕೋಣಗಳು ರೇಸ್‌ಗೆ ಇಳಿದಿದೆ.

ತೋಡಾರ್ ಪಂಚಶಕ್ತಿ ಪಾಂಡು, ಕರ್ನಿರೆ ಬೈಲು ಮನೆ ಚಂದು ಎಂಬ ಹೆಸರಿನ ಕೋಣಗಳು ನೇಗಿಲು ಹಿರಿಯ ವಿಭಾಗದಲ್ಲಿ ರೇಸ್‌ಗೆ ಇಳಿದಿದೆ. ಈ ಎರಡು ಕೋಣಗಳು ಕಂಬಳ ಓಟದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದು, ಮೊದಲ ಕಂಬಳದಲ್ಲಿ ಬೆಂಗಳೂರು ದೊಡ್ಡಮನೆ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಈ ಬಾರಿ ಓಟಕ್ಕಿಳಿದಿದೆ.
ನೋಣೇಲು ಗುತ್ತು ರಶ್ಮಿತ್ ಶೆಟ್ಟಿ ನೇತೃತ್ವದಲ್ಲಿ ಹೊಕ್ಕಾಡಿಗೋಳಿ ವೀರ-ವಿಕ್ರಮ ಕಂಬಳ ನಡೆಯುತ್ತಿದ್ದು, ಕರಾವಳಿಯಲ್ಲಿ ಕಂಬಳ ಋತು ಆರಂಭವಾಗೋದು ಈ ಕಂಬಳದ ಮೂಲಕ ಅನ್ನೋದು ವಿಶೇಷವಾಗಿದೆ. ಮೊದಲ ಕಂಬಳಕ್ಕೆ ದಕ್ಷಿಣ ಕನ್ನಡ, ಉಡುಪಿ ಭಾಗಗಳಿಂದ ಇನ್ನೂರಕ್ಕೂ ಅಧಿಕ ಜೋಡಿಗಳು ಸ್ಪರ್ಧೆಯಲ್ಲಿ ಭಾಗವಹಿಸುತ್ತದೆ. ಎಲ್ಲಾ ಕೋಣಗಳ ಪೈಕಿ ಈ ಅಪ್ಪುವಿನ ಹೆಸರಿನ ಜೋಡಿ ಕಂಬಳ ಪ್ರೀಯರನ್ನು ಆಕರ್ಷಿಸಿದೆ.
ಕಂಬಳ ಪ್ರತಿಷ್ಠೆಯ ಕಣವಾಗಿದ್ದು,ಇಲ್ಲಿ ಹಲವು ಮನೆತನಗಳು ಹೆಸರಿಗಾಗಿ ಕೋಣಗಳನ್ನು ಓಡಿಸುತ್ತದೆ. ಯಾವ ಹೆಸರಿನ ಕೋಣಗಳು ಕಂಬಳದಲ್ಲಿ ವಿಜಯಶಾಲಿಗಳಾಗುತ್ತದೋ ಆ ವಿಜಯ ಮನೆತನಕ್ಕೆ ಮತ್ತು ಓಡಿದ ಕೋಣಗಳಿಗೆ ಸಂದುತ್ತದೆ. ಹೀಗಾಗಿ ಕಂಬಳ ಒಂದು ಪ್ರತಿಷ್ಠೆ ಯ ಕಣವಾಗಿದೆ.
ಈ ಬಾರಿ ಮೊದಲ ಕಂಬಳ ನವೆಂಬರ್ 27 ಮತ್ತು 28ರಂದು ನಡೆಯ ಬೇಕಾಗಿತ್ತು. ಆದರೆ ಹವಾಮಾನ ವೈಪರೀತ್ಯದಿಂದ ಕಂಬಳ ಒಂದು ವಾರ ತಡವಾಗಿ ಆರಂಭವಾಗಿದೆ.
ಕಂಬಳದ ವಿವರಗಳು; ಡಿಸೆಂಬರ್ 5 ರಿಂದ ಮಾರ್ಚ್ 26ರವರೆಗೆ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಭಾಗದಲ್ಲಿ ಕಂಬಳ ಕೂಟ ನಡೆಯಲಿದೆ. ಡಿಸೆಂಬರ್ 5ರಂದು ಹೊಕ್ಕಾಡಿಗೋಳಿ ಯಲ್ಲಿ ಪ್ರಥಮ ಕಂಬಳ ನಡೆದರೆ, ಡಿ.11 ಶನಿವಾರ ಮೂಡಬಿದಿರೆ ನಡೆಯಲಿದೆ.
* ಡಿ.18ರ ಶನಿವಾರ ಮಿಯಾರ್ ಕಂಬಳ
* ಡಿ.19ರ ಆದಿತ್ಯವಾರ ಬಳ್ಳಮಂಜ ಕಂಬಳ
* ಡಿ.26ರ ಆದಿವಾರ ಮುಲ್ಕಿ ಅರಸು ಕಂಬಳ
* ಜನವರಿ 1ರ ಶನಿವಾರ ಕಕ್ಕೆ ಪದವು ಕಂಬಳ
* ಜನವರಿ 8ರ ಶನಿವಾರ ಅಡ್ವೆ ಕಂಬಳ
* ಜನವರಿ 15ರ ಶನಿವಾರ ಪುತ್ತೂರು ಕಂಬಳ
* ಜನವರಿ 22ರ ಶನಿವಾರ ಮಂಗಳೂರು ಕಂಬಳ
* ಜನವರಿ 29 ಶನಿವಾರ ಐಕಳಬಾವ ಕಂಬಳ
* ಫೆಬ್ರವರಿ 5ರ ಶನಿವಾರ ಬಾರಾಡಿ ಬೀಡು ಕಂಬಳ
* ಫೆಬ್ರವರಿ 13ರ ಆದಿ ಜಪ್ಪಿನಮೊಗರು ಕಂಬಳ
* ಫೆಬ್ರವರಿ 19ರ ಶನಿವಾರ ವಾಮಂಜೂರು ಕಂಬಳ
* ಫೆಬ್ರವರಿ 26ರ ಶನಿವಾರ ಕಾಸರಗೋಡು ವಿನ ಪೈವಳಿಕೆ ಕಂಬಳ
* ಮಾರ್ಚ್ 5ರ ಶನಿವಾರ ವೇಣೂರು ಕಂಬಳ
* ಮಾರ್ಚ್ 12ರ ಶನಿವಾರ ಉಪ್ಪಿನಂಗಡಿ ಕಂಬಳ
* ಮಾರ್ಚ್ 19 ರ ಶನಿವಾರ ಕಟಪಾಡಿ ಕಂಬಳ
* ಮಾರ್ಚ್ 26ರ ಶನಿವಾರ ಬಂಗಾಡಿ ಕಂಬಳ ನಡೆಯಲಿದೆ
ಓಮಿಕ್ರಾನ್ ಭೀತಿಯ ನಡುವೆಯೂ ಕರಾವಳಿಯಲ್ಲಿ ಕಂಬಳ ಕಲರವ ಆರಂಭವಾಗಿದೆ. ಕಂಬಳ ಯಾವುದೇ ಅಡೆತಡೆಯಿಲ್ಲದೇ ಸುಸಾಂಗವಾಗಿ ನಡೆಯಲಿ ಎನ್ನೋದು ಕಂಬಳ ಪ್ರಿಯರ ಅಭಿಪ್ರಾಯ.












Click it and Unblock the Notifications