Vande Bharat Train: ಬುಕ್ ಮಾಡಿದ್ದು ವಂದೇ ಭಾರತ್, ಮಂಗಳೂರಿಗೆ ಬಂದಿದ್ದು ವಿಶೇಷ ರೈಲು!
ಮಂಗಳೂರು, ಸೆಪ್ಟೆಂಬರ್ 01: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಶನಿವಾರ ಅಚ್ಚರಿಯ ಘಟನೆಗೆ ಸಾಕ್ಷಿಯಾಯಿತು. ಮಂಗಳೂರು-ಮಡಗಾಂವ್ ವಂದೇ ಭಾರತ್ ರೈಲು ಬುಕ್ ಮಾಡಿದ್ದ ಪ್ರಯಾಣಿಕರು ಒಂದು ಕ್ಷಣ ಏನಾಗುತ್ತಿದೆ? ಎಂದು ಅಚ್ಚರಿಪಟ್ಟರು. ರೈಲಿನ ಫೋಟೋ, ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದರು. ರೈಲ್ವೆ ಇಲಾಖೆ ಕೊನೆಗೆ ಸ್ಪಷ್ಟನೆಯನ್ನು ನೀಡಿದೆ. ಪ್ರಯಾಣಿಕರು ಯಾವುದೇ ಸಮಸ್ಯೆ ಇಲ್ಲದಂತೆ ನಿಗದಿತ ಸ್ಥಳಕ್ಕೆ ಪ್ರಯಾಣ ಮಾಡಿದ್ದಾರೆ.
ಮಂಗಳೂರು-ಮಡಗಾಂವ್ ವಂದೇ ಭಾರತ್ ರೈಲು ವೇಳಾಪಟ್ಟಿ ಪ್ರಕಾರ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಮಡಗಾಂವ್‌ಗೆ ಹೊರಡಬೇಕಿತ್ತು. ಪ್ರಯಾಣಿಕರು ರೈಲಿಗಾಗಿ ಕಾಯುತ್ತಿದ್ದರು. ಆದರೆ ಈ ಸಮಯಕ್ಕೆ ಬಂದಿದ್ದು, ಐಸಿಎಫ್ ಕೋಚ್ ಹೊಂದಿರುವ ವಿಶೇಷ ರೈಲು. ಪ್ರಯಾಣಿಕರು ಇದನ್ನು ನೋಡಿ ಅಚ್ಚರಿಪಟ್ಟರು.

ಮಂಗಳೂರು ಸೆಂಟ್ರಲ್-ಮಡಗಾಂವ್ ನಡುವೆ ರೈಲು ನಂಬರ್ 20646/ 645 ವಂದೇ ಭಾರತ್ ರೈಲು ಸಂಚಾರ ನಡೆಸುತ್ತದೆ. 8 ಬೋಗಿಯ ಈ ರೈಲು ಸುಮಾರು 560 ಸೀಟುಗಳನ್ನು ಹೊಂದಿದೆ. ಆದರೆ ಶನಿವಾರ ವಂದೇ ಭಾರತ್ ಬೋಗಿಯ ಬದಲು ಐಸಿಎಫ್ ಕೋಚ್ ಹೊಂದಿರುವ ವಿಶೇಷ ರೈಲು ಬಂದು ಪ್ರಯಾಣಿಕರ ಮುಂದೆ ನಿಂತಿತು.
ಅಷ್ಟಕ್ಕೂ ಆಗಿದ್ದೇನು?; ರೈಲು ಪ್ರಯಾಣಿಕರು ನೀಡಿದ ಮಾಹಿತಿಯಂತೆ ಶುಕ್ರವಾರ ರಾತ್ರಿ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಬರಬೇಕಿದ್ದ ವಂದೇ ಭಾರತ್ ರೈಲು ಬೋಗಿಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಮಧ್ಯದಲ್ಲಿ ನಿಂತಿತು, ಎಷ್ಟು ಪ್ರಯತ್ನ ನಡೆಸಿದರೂ ಸಹ ರೈಲು ಸಂಚಾರಕ್ಕೆ ಅವಕಾಶ ಸಿಗಲಿಲ್ಲ. ಆದರೆ ಶನಿವಾರ ಬೆಳಗ್ಗೆ ಮಂಗಳೂರು ಸೆಂಟ್ರಲ್‌ನಿಂದ ವಂದೇ ಭಾರತ್ ರೈಲು ನಿಗದಿತ ವೇಳಾಪಟ್ಟಿ ಪ್ರಕಾರ ಸಂಚಾರ ನಡೆಸಬೇಕಿತ್ತು. ಆದ್ದರಿಂದ ದಕ್ಷಿಣ ರೈಲ್ವೆ ಐಸಿಎಫ್ ಕೋಚ್ ಹೊಂದಿರುವ ವಿಶೇಷ ರೈಲನ್ನು ಕಳುಹಿಸಿಕೊಟ್ಟಿತು.
ಮಾಹಿತಿಗಳ ಪ್ರಕಾರ ವಂದೇ ಭಾರತ್ ರೈಲಿನ 238 ಸೀಟುಗಳನ್ನು ಐಸಿಎಫ್‌ನ ಐಷಾರಾಮಿ ಕೋಚ್‌ನ (3, 2 ಟೈರ್ ಎಸಿ) ಮೂಲಕ ಬದಲಾವಣೆ ಮಾಡಲಾಗಿತ್ತು. ವಿಶೇಷ ರೈಲು ಮಂಗಳೂರು ಸೆಂಟ್ರಲ್ ನಿಲ್ದಾಣಕ್ಕೆ ಬಂದು ನಿಲ್ಲುತ್ತಿದ್ದಂತೆಯೇ ಕೊಂಕಣ ರೈಲ್ವೆಯ ಸಿಬ್ಬಂದಿ ಸೀಟು, ಬೋಗಿ ನಂಬರ್ ಚಾರ್ಟ್ ಅಂಟಿಸಿದರು, ಪ್ರಯಾಣಿಕರು ಯಾವುದೇ ತೊಂದರೆಯಾಗದಂತೆ ಸಂಚಾರ ನಡೆಸಿದರು.
ಅಧಿಕಾರಿಗಳು ಘಟನೆ ಕುರಿತು ಪ್ರತಿಕ್ರಿಯೆ ನೀಡಿದ್ದು, "ಶುಕ್ರವಾರ ತಡರಾತ್ರಿ ತನಕ ವಂದೇ ಭಾರತ್ ರೈಲು ಬೋಗಿಯಲ್ಲಿನ ತಾಂತ್ರಿಕ ದೋಷ ಸರಿಪಡಿಸಿ ಸಂಚಾರಕ್ಕೆ ಮುಕ್ತಗೊಳಿಸಲು ಪ್ರಯತ್ನ ನಡೆಸಿದೆವು. ಆದರೆ ಅವಕಾಶ ಆಗಲಿಲ್ಲ. ಆದ್ದರಿಂದ ಶನಿವಾರ ಬೆಳಗ್ಗೆ ಮಂಗಳೂರು ಸೆಂಟ್ರಲ್ ನಿಲ್ದಾಣಕ್ಕೆ ವಂದೇ ಭಾರತ್ ರೈಲು ಬೋಗಿ ಬದಲು ಐಸಿಎಫ್ ಕೋಚ್ ಹೊಂದಿರುವ ವಿಶೇಷ ರೈಲು ಕಳುಹಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಾಯಿತು" ಎಂದು ಹೇಳಿದ್ದಾರೆ.
ಮಂಗಳೂರು-ಮಡಗಾಂವ್ ವಂದೇ ಭಾರತ್ ರೈಲಿಗೆ ಶನಿವಾರ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ 140 ಸೀಟುಗಳು ಬುಕ್ ಆಗಿದ್ದವು. ವಿಶೇಷ ರೈಲು ಬರುತ್ತಿದ್ದಂತೆಯೇ ಗೊಂದಲಗೊಂಡ ಅವರು ಅಧಿಕಾರಿಗಳ ಬಳಿ ವಂದೇ ಭಾರತ್ ರೈಲು ಬೋಗಿ ಎಲ್ಲಿ? ಎಂದು ಪ್ರಶ್ನೆ ಮಾಡಿದರು. ಅಧಿಕಾರಿಗಳು ಆಗಿರುವ ತಾಂತ್ರಿಕ ತೊಂದರೆಯನ್ನು ವಿವರಿಸಿ, ರೈಲಿನಲ್ಲಿ ಸಂಚಾರ ಮಾಡುವಂತೆ ಮನವೊಲಿಸಿದರು.
ವಂದೇ ಭಾರತ್ ಬದಲು ಐಸಿಎಫ್ ಕೋಚ್ ಹೊಂದಿರುವ ವಿಶೇಷ ರೈಲು ಸಂಚಾರ ನಡೆಸಿದೆ. ಆದ್ದರಿಂದ ಪ್ರಯಾಣಿಕರು ಬಯಸಿದರೆ ಟಿಕೆಟ್ ಹಣ ಮರು ಪಾವತಿಗಾಗಿ ಅರ್ಜಿ ಸಲ್ಲಿಕೆ ಮಾಡಬಹುದು. ಮಂಗಳೂರು-ಮಡಗಾಂವ್ ನಡುವೆ ವಂದೇ ಭಾರತ್ ರೈಲು ಎಕ್ಸಿಕ್ಯುಟಿವ್ ಕ್ಲಾಸ್ ದರ 2,350 ರೂ. ಮತ್ತು ಚೇರ್ ಕಾರ್ ದರ 1,330 ರೂ.ಗಳು. ಅದೇ ರೀತಿ 2-ಎಸಿ ದರ 1065 ಮತ್ತು 3-ಎಸಿ ದರ 765 ರೂ.ಗಳು.












Click it and Unblock the Notifications