ಮಂಗಳೂರಿನಲ್ಲಿ ವರುಣನ ಆರ್ಭಟದ ಚಿತ್ರಗಳು
ಮಂಗಳೂರು, ಜು.13 : ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದೆ. ದಕ್ಷಿಣ ಕನ್ನಡ, ಮಲೆನಾಡು, ಕೊಡಗಿನ ಹಲವೆಡೆ ಉತ್ತಮ ಮಳೆಯಾಗುತ್ತಿದೆ. ಪಶ್ಚಿಮ ಘಟ್ಟದ ತಪ್ಪಲಿನಲ್ಲಾಗುತ್ತಿರುವ ನಿರಂತರ ಮಳೆಯಿಂದ ಕುಮಾರಧಾರಾ ಉಕ್ಕಿ ಹರಿಯುತ್ತಿದೆ. ಶುಕ್ರವಾರ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಮತ್ತು ಮೂಲ್ಕಿಯಲ್ಲಿ ರಾಜ್ಯದಲ್ಲೇ ಅತ್ಯಧಿಕ ತಲಾ 9 ಸೆಂ.ಮೀ. ಮಳೆ ಸುರಿದಿದೆ.
ರಾಜಧಾನಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಶನಿವಾರ ಸಂಜೆಯಿಂದ ಮಳೆಯಾಗುತ್ತಿದೆ. ಕೊಡಗಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕಾವೇರಿಯ ಉಗಮ ಸ್ಥಾನ ತಲಕಾವೇರಿಗೆ ಸಾಗುವ ರಸ್ತೆಗೆ ಭಾರೀ ಗಾತ್ರದ ಬಂಡೆಗಳು ಉರುಳಿವೆ. ಮೂರು ದಿನಗಳ ಕಾಲ ತಲಕಾವೇರಿ ರಸ್ತೆ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಪುತ್ತೂರು, ಸುಳ್ಯ, ಮೂಡಬಿದಿರೆ, ಬೆಳ್ತಂಗಡಿ, ಸುಬ್ರಹ್ಮಣ್ಯ ಸೇರಿದಂತೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ. ಉಳ್ಳಾಲದಲ್ಲಿ ಗುಡ್ಡ ಕುಸಿದು ಮದರಸವೊಂದಕ್ಕೆ ಭಾಗಶಃ ಹಾನಿಯಾಗಿದೆ. ಮಲ್ಪೆ ಬಳಿ ಉದ್ಯಾವರ ಕನಕೊಡ ಪಡುಕರೆಯಲ್ಲಿ ಕಡಲ್ಕೊರೆತ ತೀವ್ರವಾಗಿದೆ.
ಇನ್ನು ಬೀದರ್ ಜಿಲ್ಲೆಯಾದ್ಯಂತ ಮಳೆಯಾಗಿದ್ದು ಔರಾದ್‌ನಲ್ಲಿ ಹಟ್ಟಿಯ ಗೋಡೆ ಕುಸಿದು ಐದು ಕುರಿಗಳು ಮೃತಪಟ್ಟಿವೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಶಿವಮೊಗ್ಗ ಜಿಲ್ಲೆಯ ಸಾಗರ, ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ಉತ್ತಮ ಮಳೆಯಾಗಿದೆ. ಮಂಗಳೂರಿನ ಮಳೆಯ ಚಿತ್ರಗಳು

ಮಂಗಳೂರಿನಲ್ಲಿ ಮಳೆಯ ಅಬ್ಬರ
ಮಂಗಳೂರು ಮತ್ತು ಉಡುಪಿಯಲ್ಲಿ ಮಳೆಯ ಅಬ್ಬರ ಜೋರಾಗಿದೆ. ಶುಕ್ರವಾರ ಬೆಳಗ್ಗೆಯಿಂದ ಆರಂಭವಾದ ಮಳೆ ಬಿಡುವು ನೀಡದಂತೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ನಗರದಲ್ಲಿ ವರುಣನ ಆರ್ಭಟ
ಮಂಗಳೂರು ನಗರದ ಸುತ್ತಮುತ್ತ ಉತ್ತಮ ಮಳೆಯಾಗುತ್ತಿದೆ. ಪುತ್ತೂರು, ಬಂಟ್ವಾಳ, ಕಿನ್ನಿಗೋಳಿ, ಸುಬ್ರಹ್ಮಣ್ಯದಲ್ಲಿ ವರುಣನ ಆರ್ಭಟ ಜೋರಾಗಿದೆ. ನಗರದ ತುಂಬಾ ಕಪ್ಪನೆಯ ಮೋಡಗಳ ಛಾಯೆ ಆವರಿಸಿದೆ.

ರಸ್ತೆಯ ತುಂಬಾ ನೀರು
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಂಗಳೂರಿನಲ್ಲಿ ರಸ್ತೆಗಳ ನೀರಿನಿಂದ ಆವೃತವಾಗಿವೆ ವಲಿಚಿಲ್, ಮೇರಲದವು ಮುಂತಾದ ಕಡೆ ನೀರು ರಸ್ತೆಯ ಮೇಲೆ ನಿಂತಿದ್ದು ಜನರು ಪರದಾಡುತ್ತಿದ್ದಾರೆ.

ವಾಹನ ಸವಾರರ ಪರದಾಟ
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ವಾಹನ ಸವಾರರು ಪರದಾಡುತ್ತಿದ್ದಾರೆ. ದ್ವಿಚಕ್ರ ವಾಹನ ಸವಾರರಂತೂ ಸಂಚರಿಸುವುದು ಕಷ್ಟವಾಗಿದೆ.

ಮಳೆಯ ಜೊತೆಗೆ ಗಾಳಿ
ಬಿರುಸಾಗಿ ಸುರಿಯುತ್ತಿರುವ ಮಳೆಯ ಜೊತೆಗೆ ವೇಗವಾಗಿ ಗಾಳಿ ಬೀಸುತ್ತಿದ್ದು ಪಡೀಲ್ ಜಂಕ್ಷನ್ ಬಳಿ ಜಾಹೀರಾತು ಫಲಕಗಳು ಗಾಳಿಯಿಂದ ಹಾನಿಗೊಳಗಾಗಿವೆ.

ನಗರದಲ್ಲಿ ಕವಿದ ಕಾರ್ಮೋಡ
ಬಿರುಸಾಗಿ ಸುರಿಯುತ್ತಿರುವ ಮಳೆಯ ಜೊತೆ ವೇಗವಾಗಿ ನಗರದಲ್ಲಿ ಕಾರ್ಮೋಡ ಆವರಿಸಿದೆ.


Click it and Unblock the Notifications
