ನ್ಯಾಯಾಲಯದ ಆವರಣದಲ್ಲೇ ಗಾಂಜಾ ಮಾರುತ್ತಿದ್ದ ಭೂಪನ ಬಂಧನ
ಮಂಗಳೂರು ಜೂನ್ 07 : ಮಂಗಳೂರಿನಲ್ಲಿ ಗಾಂಜಾ ಮಾರಾಟ ವ್ಯವಹಾರ ಯಾವ ಮಟ್ಟಕ್ಕೆ ಬೆಳೆದಿದೆ ಎಂದರೆ ಈ ವ್ಯವಹಾರ ಕೇವಲ ಶಾಲಾ ಕಾಲೇಜು, ಹಾಸ್ಟೆಲ್ ಗಳಿಗೆ ಮಾತ್ರ ಸೀಮಿತವಾಗಿರದೇ ಈಗ ನ್ಯಾಯಾಲಯಕ್ಕೂ ವಿಸ್ತರಿಸಿದೆ.
ಮಂಗಳೂರಿನ ಬಂದರು ಠಾಣೆಯ ಪೊಲೀಸರು ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಆದರೆ ಈ ಬಂಧಿತ ಈ ಆರೋಪಿ ಗಾಂಜಾ ಮಾರಾಟ ಮಾಡುತ್ತಿದ್ದ ಜಾಗ ಯಾವುದೆಂದು ಕೇಳಿದರೆ ನೀವು ದಂಗಾಗುತ್ತಿರಾ. ಈ ವ್ಯಕ್ತಿ ಗಾಂಜಾ ಮಾರಾಟ ಮಾಡುತ್ತಿದ್ದದ್ದು ಮಂಗಳೂರಿನ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ.
ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಬಂದರು ಪೊಲೀಸರು ಬಂಧಿಸಿರುವ ವ್ಯಕ್ತಿಯನ್ನು ಮಂಗಳೂರು ಹೊರವಲಯದ ಆಂಬ್ಲಮೊಗರು ನಿವಾಸಿ ಸಂದೀಪ್ ಎಂದು ಗುರುತಿಸಲಾಗಿದೆ. ಸಂದೀಪ್ ಮಂಗಳೂರಿನ ಜಿಲ್ಲಾ ನ್ಯಾಯಾಲಯಕ್ಕೆ ಬರುವ ವಿಚಾರಣಾಧೀನ ಕೈದಿಗಳಿಗೆ ಗಾಂಜಾ ಮಾರಾಟಮಾಡುತ್ತಿದ್ದ ಎಂದು ಹೇಳಲಾಗಿದೆ.

ಈ ಕುರಿತು ಖಚಿತ ಮಾಹಿತಿ ಪಡೆದ ಬಂದರು ಠಾಣೆಯ ಪೊಲೀಸರು ದಾಳಿ ನಡೆಸಿ ಸಂದೀಪ್ ನನ್ನು ಬಂಧಿಸಿದ್ದಾರೆ. ಬಂಧಿತನಿಂದ 38 ಪ್ಯಾಕೆಟ್ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ನ್ಯಾಯಾಲಯಕ್ಕೆ ಕೈದಿಗಳನ್ನು ಕರೆತರುವ ಪೊಲೀಸರು ಈ ವ್ಯವಹಾರದಲ್ಲಿ ಪಾಲು ಹೊಂದಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ನಿಟ್ಟಿನಲ್ಲಿಯೂ ತನಿಖೆ ನಡೆಸುವ ಅವಶ್ಯಕತೆ ಇದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.












Click it and Unblock the Notifications