ಕುಡಿದ ಮತ್ತಿನಲ್ಲಿ ಪತಿಯನ್ನೇ ಕೊಂದ ಪತ್ನಿ
ಮಂಗಳೂರು, ಜೂ. 23 : ಕುಡಿದ ಮತ್ತಿನಲ್ಲಿ ಪತ್ನಿಯೇ ಪತಿಯನ್ನು ಕೊಲೆ ಮಾಡಿರುವ ವಿಚಿತ್ರ ಘಟನೆ ಬೆಳ್ತಂಗಡಿಯ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಮೂಡುಕೋಡಿ ಬಳಿ ನಡೆದಿದೆ. ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.
ಮೂಡುಕೋಡಿ ಗ್ರಾಮದ ಪಂಜಲಬೈಲುವಿನ ನಿವಾಸಿಯಾದ ಹರೀಶ್ ನಾಯ್ಕ (44) ಮೃತಪಟ್ಟ ವ್ಯಕ್ತಿ. ಈತನ ಪತ್ನಿ ಪ್ರಶಾಂತಿನಿ (21) ಪತಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಪತಿ ಪತ್ನಿ ಇಬ್ಬರೂ ಕುಡಿತದ ದಾಸರಾಗಿದ್ದರು. ಶುಕ್ರವಾರ ಸಂಜೆ ದಂಪತಿ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ.

ಕುಡಿದ ಮತ್ತಿನಲ್ಲಿ ಆರಂಭವಾದ ದಂಪತಿಗಳ ಜಗಳ ವಿಕೋಪಕ್ಕೆ ಹೋಗಿದೆ. ಆಗ ಪ್ರಶಾಂತಿನಿ ಗಂಡನ ಹತ್ತು ಹಿಸುಕಿದ್ದಾಳೆ. ನಂತರ ಪತಿಯ ಅಕ್ಕನ ಮನೆಗೆ ಹೋಗಿ ಕುಡಿದು ಮಲಗಿದ ಗಂಡ ಎದ್ದಿಲ್ಲ ಎಂದು ಹೇಳಿದ್ದಾಳೆ. ಅವರು ವೈದ್ಯರೊಂದಿಗೆ ಮನೆಗೆ ಬಂದಾಗ, ಹರೀಶ್ ಮೃತಪಟ್ಟಿರುವ ವಿಚಾರ ಬೆಳಕಿಗೆ ಬಂದಿದೆ.
ಬಯಲಾಯಿತು ಕೊಲೆ ಸತ್ಯ : ಹರೀಶ್ ಮೃತಪಟ್ಟ ಬಗ್ಗೆ ವೇಣೂರು ಪೊಲೀಸ್ ಠಾಣೆಗೆ ಹರೀಶ್ ಅಕ್ಕ ಮಾಹಿತಿ ನೀಡುತ್ತಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಇದು ಕೊಲೆ ಎಂಬ ಅನುಮಾನ ಬಂದಿದೆ. ಕುತ್ತಿಗೆಯಲ್ಲಿನ ಗಾಯ ಮತ್ತು ಹಗ್ಗದಿಂದ ಬಿಗಿದ ಗುರುತು ಪತ್ತೆಯಾಗಿತ್ತು. ತಕ್ಷಣ ಪ್ರಶಾಂತಿನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಸತ್ಯ ಬಯಲಾಗಿದೆ.
ಹರೀಶ್ ಮತ್ತು ಪ್ರಶಾಂತಿನಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಒಂದು ಮಗುವಿದೆ. ಗಂಡ ಅಸಹಜವಾಗಿ ಸಾವನ್ನಪ್ಪಿದ್ದಾನೆ ಎಂದು ನಂಬಿಸಿದ್ದ ಪ್ರಶಾಂತಿನಿ ವಿರುದ್ಧ ಹರೀಶ್ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


Click it and Unblock the Notifications
