ಡೆಂಗ್ಯೂ ನಿಯಂತ್ರಣಕ್ಕೆ ಮಂಗಳೂರಿನಲ್ಲಿ ಡೆಂಗ್ಯೂ ಡ್ರೈವ್ ಡೇ
ಮಂಗಳೂರು, ಜುಲೈ 26: ದಕ್ಷಿಣ ಕನ್ನಡ ಜಿಲ್ಲೆಯನ್ನು ಕಾಡುತ್ತಿರುವ ಡೆಂಗ್ಯೂ ನಿಯಂತ್ರಣಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಡೆಂಗ್ಯೂ ಸಂಪೂರ್ಣ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸೊಳ್ಳೆಗಳ ಲಾರ್ವಾ ನಾಶಕ್ಕೆ ವಿಶೇಷ ಒತ್ತು ನೀಡಿರುವ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ನಗರದಲ್ಲಿ ಇದೇ ಬರುವ ಜುಲೈ 28ರಂದು 'ಡ್ರೈವ್ ಡೇ' ಆಚರಿಸಲು ನಿರ್ಧರಿಸಿದ್ದಾರೆ.
ಜುಲೈ 28ರಂದು ಭಾನುವಾರ ಬೆಳಿಗ್ಗೆ 10 ಗಂಟೆಯಿಂದ 11ರವರೆಗೆ ಸಾರ್ವಜನಿಕರೆಲ್ಲರೂ ತಮ್ಮ ಮನೆ ಹಾಗೂ ಸುತ್ತಮುತ್ತಲಿನಲ್ಲಿ ತೆರೆದ ಪ್ರದೇಶ ಹಾಗೂ ವಸ್ತುಗಳಲ್ಲಿ ಸಂಗ್ರಹವಾಗಿರುವ ಎಲ್ಲಾ ನೀರನ್ನು ಬರಿದು ಮಾಡಿ ಸ್ವಚ್ಛಗೊಳಿಸುವ ಜತೆಗೆ ಆ ಸ್ಥಳಗಳಲ್ಲಿರುವ ಸೊಳ್ಳೆ ಲಾರ್ವಾವನ್ನು ಪತ್ತೆ ಹಚ್ಚಿ ನಾಶ ಮಾಡುವಂತೆ ಜಿಲ್ಲಾಧಿಕಾರಿ ಕರೆ ನೀಡಿದ್ದಾರೆ.
ಈ ಕಾರ್ಯದಲ್ಲಿ ಸಾರ್ವಜನಿಕರೆಲ್ಲರೂ ಪಾಲ್ಗೊಂಡು ಮನೆಯನ್ನು ಸೊಳ್ಳೆಮುಕ್ತಗೊಳಿಸಲು ಸಹಕಾರ ನೀಡಬೇಕೆಂದು ಮನವಿ ಮಾಡಿದ್ದಾರೆ.

ಮೊದಲ ಹಂತವಾಗಿ ಮಂಗಳೂರು ನಗರದಲ್ಲಿ ಡ್ರೈವ್ ಡೇ ನಡೆಸಲು ತೀರ್ಮಾನಿಸಲಾಗಿದ್ದು ಮುಂದೆ ತಾಲೂಕು ಮಟ್ಟದಲ್ಲೂ ಅಭಿಯಾನವನ್ನು ಮುಂದುವರಿಸಲು ನಿರ್ಧರಿಸಲಾಗಿದೆ.
ಡೆಂಗ್ಯೂ ರೋಗವನ್ನು ಹರಡುವ ಸೊಳ್ಳೆಗಳ ನಾಶಕ್ಕೆ ಫಾಗಿಂಗ್ ಪರಿಹಾರವಲ್ಲ. ಡೆಂಗ್ಯೂ ನಿಯಂತ್ರಣಕ್ಕೆ ಮುಖ್ಯವಾಗಿ ಸೊಳ್ಳೆಗಳ ಲಾರ್ವಾ ನಾಶವೊಂದೇ ಸದ್ಯದ ಪರಿಹಾರ. ಅದಕ್ಕಾಗಿ ಈ ನಿಟ್ಟಿನಲ್ಲಿ ಹೆಚ್ಚಿನ ಆದ್ಯತೆ ಹಾಗೂ ಗಮನಹರಿಸಿ ಎಂದು ಜನರಲ್ಲಿ ಆಗ್ರಹಿಸಿದ್ದಾರೆ.












Click it and Unblock the Notifications