ಏ.1ರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ವ್ಯಾಕ್ಸಿನೇಷನ್
ಮಂಗಳೂರು, ಮಾರ್ಚ್ 31: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏ.1 (ಗುರುವಾರ)ರಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮಚಂದ್ರ ಬಾಯರಿ ಹೇಳಿದ್ದಾರೆ.
ದ.ಕ ಜಿಲ್ಲೆಯಲ್ಲಿ ಈ ವಯೋಮಾನದವರ ಪ್ರಮಾಣ ಶೇ.26.5 ಇದೆ ಎಂದು ಅಂದಾಜಿಸಲಾಗಿದೆ. ವೆನ್ಲಾಕ್, ತಾಲ್ಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕಾ ಕೇಂದ್ರಗಳಿವೆ. ಸರಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡುವುದಕ್ಕೆ ಯಾವುದೇ ಶುಲ್ಕ ಇರುವುದಿಲ್ಲ ಎಂದು ಡಾ.ರಾಮಚಂದ್ರ ಬಾಯರಿ ತಿಳಿಸಿದ್ದಾರೆ.
ಮಂಗಳವಾರ ನಡೆದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಅಗತ್ಯ ಬಿದ್ದರೆ ಆರೋಗ್ಯ ಉಪ ಕೇಂದ್ರಗಳಲ್ಲೂ ಕೋವಿಡ್ ಲಸಿಕಾ ಕೇಂದ್ರಗಳನ್ನು ತೆರೆಯಲು ಸರಕಾರ ನಿರ್ದೇಶನ ನೀಡಿದೆ. ಅಲ್ಲಿಗೆ ಬೇಕಿರುವ ನುರಿತ ವೈದ್ಯರನ್ನು ನಿಯುಕ್ತಿಗೊಳಿಸಲು ಕ್ರಮ ವಹಿಸುವಂತೆಯೂ ಸೂಚನೆಗಳು ಬಂದಿವೆ ಎಂದು ಡಿಎಚ್‌ಒ ಹೇಳಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಗೆ 250 ರೂ. ಪಾವತಿಸಬೇಕು. ಅದರಲ್ಲಿ 150 ರೂ. ಸರಕಾರಕ್ಕೆ ಸಲ್ಲಿಕೆಯಾಗುತ್ತದೆ. ರೂ.100 ಸೇವಾ ಶುಲ್ಕವಾಗಿದೆ. ಕೆಲವೊಂದು ಖಾಸಗಿ ಆಸ್ಪತ್ರೆಗಳು ಜಿಲ್ಲೆಯ ಜನತೆಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡಲು ಮುಂದೆ ಬಂದಿವೆ ಎಂದರು.
ಲಸಿಕಾ ಕೇಂದ್ರಗಳಿಗೆ ತೆರಳುವಾಗ ಪಡಿತರ ಚೀಟಿ ಅಥವಾ ಆಧಾರ್ ಕಾರ್ಡ್ ಮತ್ತು ಮೊಬೈಲ್ ಫೋನ್ ಇದ್ದರೆ ಸಾಕು. ಆನ್‌ಲೈನ್‌ನಲ್ಲಿ ಹೆಸರು ನೋಂದಾವಣೆ ಮಾಡಿಕೊಂಡು ನಿಗದಿತ ದಿನ, ಸಮಯಕ್ಕೆ ಹೋಗಿ ಲಸಿಕೆ ಪಡೆಯಬಹುದಾಗಿದೆ ಎಂದು ವಿವರಿಸಿದರು.
ಮಕ್ಕಳನ್ನು ಪೋಲಿಯೋ ಲಸಿಕೆಗಾಗಿ ಕೇಂದ್ರಗಳಿಗೆ ಒಯ್ಯುವುದು ಒಂದೆಡೆಯಾದರೆ ಇದು ಅದಕ್ಕಿಂತ ಭಿನ್ನ. ಈಗ ಮನೆಯಲ್ಲಿರುವ ೪೫ ವರ್ಷ ಮೇಲ್ಪಟ್ಟ ಹಿರಿಯರನ್ನು ಮಕ್ಕಳು ಲಸಿಕಾ ಕೇಂದ್ರಗಳಿಗೆ ಕರೆದೊಯ್ಯಬೇಕು. ಈ ಜವಾಬ್ದಾರಿಯನ್ನು ಕಿರಿಯರು ವಹಿಸಿಕೊಳ್ಳುವ ಮೂಲಕ ಕೋವಿಡ್ ನಿಯಂತ್ರಣಕ್ಕೆ ಕೊಡುಗೆ ನೀಡಬೇಕು ಎಂದು ಡಿಎಚ್‌ಒ ವಿನಂತಿಸಿದರು.
ಲಸಿಕೆ ಪಡೆದು ಜ್ವರ ಬಂದರೆ ಅಂತಹವರು ಎರಡು ಹೊತ್ತು ಕೇವಲ ಪ್ಯಾರಸಿಟಮಲ್ ಮಾತ್ರೆ ತಿಂದರೆ ಸಾಕು. ಯಾವುದೇ ಪೈನ್ ಕಿಲ್ಲರ್ ಇರಲ್ಲ. ಅರ್ಧ ದಿನ ರೆಸ್ಟ್ ಮಾಡಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸಲಹೆ ನೀಡಿದರು. ಬಾಣಂತಿ, ಹಾಲುಣಿಸುವ ತಾಯಂದಿರು, 15 ವರ್ಷಕ್ಕಿಂತ ಕೆಳಗಿನವರಿಗೆ ಇನ್ನೂ ಲಸಿಕೆ ಶಿಫಾರಸುಗೊಂಡಿಲ್ಲ ಎಂದು ಡಿಎಚ್ಒ ಡಾ.ಬಾಯರಿ ತಿಳಿಸಿದರು.












Click it and Unblock the Notifications