ಶಿಕ್ಷಕನ ಮನೆಯಲ್ಲಿ ಕೆಲಸಕ್ಕಿದ್ದ ಬಾಲಕಿ ರಕ್ಷಣೆ
ಮಂಗಳೂರು, ಆ, 22: ಮಕ್ಕಳಿಗೆ ಶಿಕ್ಷಣ ನೀಡಬೇಕಿದ್ದ ಶಿಕ್ಷಕ ಅವರಿಂದಲೇ ಮನೆ ಕೆಲಸ ಮಾಡಿಸಿಕೊಳ್ಳುತ್ತಿದ್ದ ಅಮಾನವೀಯ ಸಂಗತಿ ಮಂಗಳೂರಿನಲ್ಲಿ ಬಯಲಾಗಿದೆ.
ಮಂಗಳೂರಿನ ಫಳ್ನೀರ್‌ನ ಹೈಟೆಕ್ ಸೆಕ್ಯುರಿಟ್ ಲೇನ್‌ನ ಶಿಕ್ಷಕ ಎಡ್ವಿನ್ ಜಾಕೋಬ್ ಎಂಬುವರ ಮನೆಯಲ್ಲಿ ಕೆಲಸಕ್ಕಿದ್ದ 12 ವರ್ಷದ ಬಾಲಕಿಯನ್ನು ಚೈಲ್ಡ್ ಲೈನ್ ಮತ್ತು ಕಾರ್ಮಿಕ ಇಲಾಖೆಯ ಅಧಿಕಾರಿಗಳು ಗುರುವಾರ ರಕ್ಷಿಸಿದ್ದಾರೆ. ಶಿಕ್ಷಕ ಎಡ್ವಿನ್ ಜಾಕೋಬ್ ಅವರನ್ನು ಬಂಧಿಸಲಾಗಿದೆ.

ಎಡ್ವಿನ್ ಜಾಕೋಬ್ ಮನೆಯಲ್ಲಿ ಉತ್ತರ ಭಾರತದ ಗೋರಖ್‌ಪುರ ಮೂಲದ ಬಾಲಕಿ ಕೆಲಸ ಮಾಡುತ್ತಿರುವ ಬಗ್ಗೆ ಮಕ್ಕಳ ಕಲ್ಯಾಣ ಸಮಿತಿಗೆ ಮಾಹಿತಿ ಬಂದಿತ್ತು. ಎಡ್ವಿನ್ ಜಾಕೋಬ್ ಅನಾರೋಗ್ಯ ಪೀಡಿತರಾಗಿದ್ದರಿಂದ ಮನೆಗೆಲಸ ಮಾಡಲು ಬಾಲಕಿಯನ್ನು ಕರೆತಂದಿದ್ದರು.
ಜಾಕೋಬ್ ತಾಯಿ ಕೇರಳಕ್ಕೆ ತೆರಳಿದ್ದು ಮನೆ ಕೆಲಸದ ಸಂಪೂರ್ಣ ಜವಾಬ್ದಾರಿ ಬಾಲಕಿ ಮೇಲೆ ಬಿದ್ದಿತ್ತು. ಈ ಬಗ್ಗೆ ಇನ್ನು ಹೆಚ್ಚಿನ ತನಿಖೆ ನಡೆಯಬೇಕಿದೆ ಎಂದು ಕಾರ್ಮಿಕ ಇಲಾಖೆಯ ಹಿರಿಯ ನಿರೀಕ್ಷಕ ಕುಮಾರ್ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಕಾರ್ಮಿಕ ಅಧಿಕಾರಿ ಆನಂದಮೂರ್ತಿ, ಕಾರ್ಮಿಕ ಇಲಾಖಾ ನಿರೀಕ್ಷಕ ಗೋವಿಂದರಾಜು, ಪ್ರಾಜೆಕ್ಟ್ ಡೈರೆಕ್ಟರ್ ಮೈಲಾರಪ್ಪ, ಚೈಲ್ಡ್ ಲೈನ್ನ ಜಯಂತಿ, ಅಂಶಿತ, ಪಾಂಡೇಶ್ವರ್ ಮತ್ತು ಮಂಜುಳಾ ಭಾಗವಹಿಸಿದ್ದರು.












Click it and Unblock the Notifications