ವಿಡಿಯೋ: ರಸ್ತೆ ಡಿವೈಡರ್ ಹಾರಿ ಮಹಿಳೆ ಮೇಲೆ ಹರಿದ BMW ಕಾರು; 4 ವಾಹನಗಳಿಗೆ ಹಾನಿ
ಮಂಗಳೂರು, ಏಪ್ರಿಲ್ 9: ಮಂಗಳೂರು ನಗರ ಮತ್ತೆ ಭೀಕರ ಅಪಘಾತಕ್ಕೆ ಸಾಕ್ಷಿಯಾಗಿದೆ. ಶುಕ್ರವಾರ ನಡು ರಸ್ತೆಯಲ್ಲೇ ಬಸ್ ಹೊತ್ತಿ ಉರಿದರೆ, ಶನಿವಾರ ಚಾಲಕನ ವೇಗದ ಚಾಲನೆಗೆ ಕಾರು ಡಿವೈಡರ್ ಹಾರಿ ಮಹಿಳೆಗೆ ಡಿಕ್ಕಿಯಾಗಿದೆ. ಕುಡಿದ ಅಮಲಿನಲ್ಲಿ ಶನಿವಾರ ಮಧ್ಯಾಹ್ನ ಕಾರು ಚಾಲಕ ಅವಾಂತರ ಮೆರೆದಿದ್ದು, ಸಾರ್ವಜನಿಕರು ಕಾರು ಚಾಲಕನನ್ನು ಅಟ್ಟಾಡಿಸಿ ಹೊಡೆದಿದ್ದಾರೆ.
ಅತಿವೇಗದ ಚಾಲನೆಯಿಂದ ಬಿಎಂಡಬ್ಲ್ಯು ಕಾರು ರಸ್ತೆ ವಿಭಜಕ ದಾಟಿ ಮತ್ತೊಂದು ಬದಿಯಲ್ಲಿ ಸಂಚರಿಸುತ್ತಿದ್ದ ಸ್ಕೂಟರ್ ಹಾಗೂ ಕಾರಿಗೆ ಡಿಕ್ಕಿ ಹೊಡೆದ ಭೀಕರ ಅಪಘಾತ ಮಂಗಳೂರಿನ ಬಳ್ಳಾಲ್ ಭಾಗ್‌ನಲ್ಲಿ ನಡೆದಿದೆ. ಘಟನೆಯಲ್ಲಿ ಸ್ಕೂಟರ್ ಸವಾರ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಕಾರಿನಲ್ಲಿದ್ದ ಏಳು ವರ್ಷದ ಮಗುವಿಗೆ ಗಾಯವಾಗಿದೆ.
ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿ ಸ್ಕೂಟರ್ ಸವಾರೆಯ ಮೇಲೆ ಹರಿಸಿರುವ ಘಟನೆ ಮಂಗಳೂರಿನ ಬಳ್ಳಾಲ್ ಭಾಗ್‌ನಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. #Mangaluru #MangaluruNews #Accident pic.twitter.com/VzXrSNlhhF
— oneindiakannada (@OneindiaKannada) April 9, 2022
ಎಚ್.ಆರ್ 26 ಬಿ 9454 ನಂಬರ್ ಬಿಎಂಡಬ್ಲ್ಯೂ ಕಾರ್ ಇದಾಗಿದ್ದು, ಇಂಟೀರಿಯರ್ ಡೆಕೋರೇಟ್ ಬ್ಯುಸಿನೆಸ್ ಮಾಡುತ್ತಿದ್ದ ಶ್ರವಣ್ ಕುಮಾರ್ ಕಾರು ಚಾಲಕನಾಗಿದ್ದಾನೆ. ಮಧ್ಯಾಹ್ನ ಸುಮಾರು 1.20 ಗಂಟೆ ವೇಳೆಗೆ ಬಳ್ಳಾಲ್ ಭಾಗ್ ರಸ್ತೆಯಲ್ಲಿ ಕುಡಿದ ಮತ್ತಿನಲ್ಲಿದ್ದ ಕಾರು ಚಾಲಕ ಶ್ರವಣ್ ಕುಮಾರ್, ಅತಿವೇಗದಿಂದ ಬಿಎಂಡಬ್ಲ್ಯು ಕಾರು ಚಲಾಯಿಸಿಕೊಂಡು ಬಂದಿದ್ದಾನೆ. ಪರಿಣಾಮ ಆತನ ನಿಯಂತ್ರಣಕ್ಕೆ ತಪ್ಪಿ ಕಾರು ರಸ್ತೆ ಡಿವೈಡರ್ ದಾಟಿ ಮತ್ತೊಂದು ಕಡೆಯಲ್ಲಿ ಬರುತ್ತಿದ್ದ ಸ್ಕೂಟರ್ ಹಾಗೂ ಕಾರುಗಳಿಗೆ ಸರಣಿ ಅಪಘಾತ ನಡೆಸಿದೆ.

ಅಪಘಾತದದಲ್ಲಿ ಎರಡು ಕಾರುಗಳ ಮಧ್ಯೆ ಸಿಲುಕಿದ ಸ್ಕೂಟರ್ ಸವಾರೆ 47ರ ಹರೆಯ ಪ್ರೀತಿ ಎಂಬುವವರು ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಮಂಗಳೂರು ನಗರ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರು ಡಿಕ್ಕಿಯಾದ ರಭಸಕ್ಕೆ ಇನ್ನೊಂದು ಕಾರಿನಲ್ಲಿದ್ದ ಏಳು ವರ್ಷದ ಅಮೈ ಜಯದೇವನ್ ಎಂಬ ಬಾಲಕಿಗೂ ಗಾಯವಾಗಿದೆ.

ಅಪಘಾತ ನಡೆದ ಸ್ಥಳದಲ್ಲಿ ತಕ್ಷಣ ಜನ ಜಮಾಯಿಸಿದ್ದು, ಅಪಘಾತಕ್ಕೆ ಕಾರಣನಾದ ಬಿಎಂಡಬ್ಲ್ಯು ಕಾರು ಚಾಲಕ ಶ್ರವಣ್ ಕುಮಾರ್‌ನನ್ನು ಕಾರಿನಿಂದ ಎಳೆದು ಹಾಕಿ ಮಾರ್ಗದಲ್ಲಿ ಹೊರಳಾಡಿಸಿ ಥಳಿಸಿದ್ದಾರೆ. ಅಪಘಾತದ ಸಂದರ್ಭದ ಭೀಕರ ದೃಶ್ಯ ಹಾಗೂ ಜನರು ಕಾರು ಚಾಲಕ ಯುವಕನನ್ನು ಥಳಿಸುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಬರ್ಕೆ ಠಾಣಾ ಪೊಲೀಸರು ಕಾರು ಚಾಲಕ ಶ್ರವಣ್‌ನನ್ನು ವಶಕ್ಕೆ ಪಡೆದಿದ್ದಾರೆ. ಚಾಲಕ ಮದ್ಯಪಾನ ಮಾಡಿದ್ದನಾ ಅಥವಾ ಮಾದಕ ವಸ್ತು ಸೇವನೆ ಮಾಡಿದ್ದನಾ ಅನ್ನುವುದರ ಬಗ್ಗೆ ಯುವಕನನ್ನು ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ. ಘಟನೆಯಲ್ಲಿ ಎರಡು ಕಾರು, ಎರಡು ದ್ವಿಚಕ್ರ ವಾಹನಗಳಿಗೆ ಹಾನಿಯಾಗಿದೆ.












Click it and Unblock the Notifications