ಪಬ್ ದಾಳಿಯ ಹೊಣೆ ಹೊತ್ತ ಭಜರಂಗದಳ ನೀಡಿದ ಸ್ಪಷ್ಟನೆ ಏನು?
ಮಂಗಳೂರು, ಜುಲೈ, 26: ನಗರದ ಬಲ್ಮಠದಲ್ಲಿರುವ ರಿಸೈಕಲ್ ಪಬ್ ಮೇಲೆ ದಾಳಿ ವಿಚಾರವಾಗಿ ಭಜರಂಗದಳ ಸ್ಪಷ್ಟನೆ ನೀಡಿದೆ. ''ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾದಂತೆ ಪಬ್ ಮೇಲೆ ದಾಳಿ ನಡೆದಿಲ್ಲ. ಭಜರಂಗದಳ ಕಾರ್ಯಕರ್ತರಿಗೆ ಪಬ್‌ನಲ್ಲಿ ಅಪ್ರಾಪ್ತರಿಗೆ ಮದ್ಯ ನೀಡಿರುವ ಬಗ್ಗೆ ಮಾಹಿತಿ ಬಂದಿದೆ. ಈ ಹಿನ್ನಲೆಯಲ್ಲಿ ಪಬ್ ಬಳಿ ಹೋಗಿ ವಿಚಾರಣೆ ಮಾಡಿದ್ದೇವೆ'' ಎಂದು ಭಜರಂಗದಳ ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿದ ಭಜರಂಗದಳ ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ, ''ಬಲ್ಮಠದಲ್ಲಿರುವ ಪಬ್‌ನಲ್ಲಿ ಮಂಗಳೂರಿನ ಖಾಸಗಿ ಕಾಲೇಜಿನ ಕಿಸ್ಸಿಂಗ್ ಪ್ರಕರಣದ ವಿದ್ಯಾರ್ಥಿಗಳು ಮತ್ತು ಅಪ್ರಾಪ್ತ ವಿದ್ಯಾರ್ಥಿಗಳು ಮೋಜು-ಮಸ್ತಿ ಮಾಡಿರುವ ಬಗ್ಗೆ ಮಾಹಿತಿ ಬಂದಿತ್ತು. ಅದಕ್ಕಾಗಿ ಕಾರ್ಯಕರ್ತರು ಸ್ಥಳಕ್ಕೆ ತೆರಳಿ ಪಬ್‌ನ ಮ್ಯಾನೇಜರ್ ಬಳಿ ಅಪ್ರಾಪ್ತ ವಿದ್ಯಾರ್ಥಿಗಳು ಪಬ್ ಒಳಗೆ ಮೋಜು ಮಾಸ್ತಿ ಮಾಡಿರುವ ಬಗ್ಗೆ ಮಾಹಿತಿಯನ್ನು ಕೇಳಿದ್ದೇವೆ.
ನಂತರ ಪಬ್‌ನ ಮ್ಯಾನೇಜರ್ ಅಲ್ಲಿ ಪರಿಶೀಲನೆ ಮಾಡಿ ಪಾರ್ಟಿಯನ್ನು ನಿಲ್ಲಿಸಿದ್ದಾರೆ. ಪೊಲೀಸರು ಬಂದ ನಂತರ ಪಬ್‌ನ ಒಳಗೆ ಸೇರಿದ್ದ ಅಪ್ರಾಪ್ತ ಯುವಕ, ಯುವತಿಯರನ್ನು ಮನೆಗೆ ಕಳುಹಿಸಿದ್ದೇವೆ. ಆದರೆ ಮಾಧ್ಯಮಗಳಲ್ಲಿ ಭಜರಂಗದಳ ಪಬ್‌ಗೆ ದಾಳಿ ಮಾಡಿದೆ'' ಎಂದು ವರದಿ ಬಂದಿದೆ. ಅಂತಹ ಯಾವುದೇ ದಾಳಿಗಳು ನಡೆದಿಲ್ಲ ಎಂದರು.

ಕಳೆದ ಹಲವಾರು ವರ್ಷಗಳಿಂದ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಡ್ರಗ್ಸ್ ಗಾಂಜಾ ಮಾಫಿಯಾ ವಿರುದ್ಧ ಹೋರಾಟವನ್ನು ನಡೆಸಿಕೊಂಡು ಬಂದಿದೆ. ನಿನ್ನೆ ನಾವು ಹೋಗುವಾಗಲೂ ಪೊಲೀಸರಿಗೆ ಮಾಹಿತಿ ನೀಡಿ ಹೋಗಿದ್ದೇವೆ. ಪಬ್‌ನಲ್ಲಿ ಯಾವುದೇ ಹಲ್ಲೆಗಳು ಆಗಿಲ್ಲ. ಕಾನೂನಿನ ಮುಖಾಂತರವೇ ಪಾರ್ಟಿಯನ್ನು ನಿಲ್ಲಿಸುವ ಕೆಲಸವನ್ನು ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಮೊನ್ನೆ ವಿಡಿಯೋ ವೈರಲ್ ಆದ ವಿದ್ಯಾರ್ಥಿಗಳೇ ಸೇರಿ ಪಾರ್ಟಿಯನ್ನು ಮಾಡುತ್ತಿದ್ದಾರೆ ಎಂಬ ಮಾಹಿತಿ ನಮಗೆ ಬಂದಿತ್ತು. ಆ ಮಾಹಿತಿ ಮೇರೆಗೆ ನಮ್ಮ ಕಾರ್ಯಕರ್ತರು ಅಲ್ಲಿಗೆ ಹೋಗಿದ್ದಾರೆ. ಮಂಗಳೂರಿನ ಎಲ್ಲಾ ಪಬ್‌ಗಳಲ್ಲಿ ಅಪ್ರಾಪ್ತರಿಗೆ ಪ್ರವೇಶ ಮತ್ತು ಮದ್ಯ ನೀಡುತ್ತಿರುವ ಬಗ್ಗೆ ನಮಗೆ ಸಂಶಯವಿದೆ.

ಹೆಣ್ಣು ಮಕ್ಕಳು ಪಬ್‌ಗೆ ಬಂದು ಗಾಂಜಾ ಡ್ರಗ್ಸ್ ಪದಾರ್ಥಗಳನ್ನು ಸೇವಿಸುವ ಬಗ್ಗೆಯೂ ಕೂಡ ಮಾಹಿತಿ ಬಂದಿದೆ. ಪಬ್‌ಗಳನ್ನು ನಡೆಸೋಕೆ ನಮ್ಮ ಯಾವುದೇ ಅಭ್ಯಂತರ ಇಲ್ಲ. ಕಾನೂನಿಗೆ ಬೆಲೆ ಕೊಟ್ಟು ನಡೆಸುವುದಾದರೆ ನಡೆಸಲಿ. ಕಾನೂನು ಮೀರಿ ನಡೆಸುವುದಾದರೆ ಅದನ್ನು ನಿಲ್ಲಿಸುವಂತಹ ಕೆಲಸವನ್ನು ಭಜರಂಗದಳ ಮಾಡುತ್ತದೆ. ಮಂಗಳೂರಿನಲ್ಲಿ ಡ್ರಗ್ಸ್, ಮಾದಕ ವಸ್ತುಗಳ ಸಾಗಾಟ ಮತ್ತು ಸೇವನೆ ಪ್ರಕರಣ ಜಾಸ್ತಿ ಆಗುತ್ತಿವೆ. ಈ ಬಗ್ಗೆ ಪೊಲೀಸರು ಕಠಿಣ ಕ್ರಮವನ್ನು ಕೈಗೊಳ್ಳಬೇಕು ಎಂದು ಹೇಳಿದರು.
2009ರ ಪಬ್ ದಾಳಿಗೂ, ನಿನ್ನೆಯ ಘಟನೆಗೂ ಯಾವುದೇ ಸಂಬಂಧ ಇಲ್ಲ. ನಾವು ಆ ರೀತಿಯ ಯಾವುದೇ ದಾಳಿ ನಡೆಸುವುದಾದರೆ ಯಾರಿಗೂ ಮಾಹಿತಿ ನೀಡುತ್ತಿರಲಿಲ್ಲ. ಪೊಲೀಸರಿಗೂ ಮಾಹಿತಿ ನೀಡುತ್ತಿರಲಿಲ್ಲ. ನಾವು ಹಿಂದೂ ಸಮಾಜವನ್ನು ಜಾಗೃತಿಗೊಳಿಸುವ ಕೆಲಸವನ್ನು ಮಾಡುತ್ತಿದ್ದೇವೆ ಎಂದು ಪುನೀತ್ ಅತ್ತಾವರ ಹೇಳಿದರು.












Click it and Unblock the Notifications