ಮಂಗಳೂರು: ಪರಿಸರ ಪ್ರೇಮಿಯಿಂದ ತಯಾರಾಗಿರುವ ಪರಿಸರ ಸ್ನೇಹಿ ಪಟಾಕಿಯಿಂದ ಬೆಳೆಯುತ್ತದೆ ತರಕಾರಿ ಗಿಡ
ಮಂಗಳೂರು, ಅಕ್ಟೋಬರ್ 13: ದೀಪಗಳ ಹಬ್ಬ ದೀಪಾವಳಿಗೆ ದಿನಗಣನೆ ಆರಂಭವಾಗಿದೆ. ಪ್ರತಿವರ್ಷದಂತೆ ಈ ಬಾರಿಯೂ ದೀಪಾವಳಿಗೆ ಪಟಾಕಿಗಳ ಅಬ್ಬರ ಜೋರಾಗಲಿದೆ. ಈಗಾಗಲೇ ಮಾರುಕಟ್ಟೆಗೆ ತರಹೇವಾರಿ ಪಟಾಕಿಗಳು ಲಗ್ಗೆ ಇಡುತ್ತಿದೆ. ಜನರು ಪಟಾಕಿ ಖರೀದಿಗೆ ಸಿದ್ಧವಾಗುತ್ತಿದ್ದಂತೆಯೇ ಕಂಪೆನಿಗಳೂ ವಿನೂತನ ಪ್ರಯೋಗವನ್ನು ಪಟಾಕಿಯಲ್ಲಿ ಮಾಡಿದೆ. ಆದರೆ ಮಂಗಳೂರಿನ ಪರಿಸರ ಪ್ರೇಮಿಯೊಬ್ಬರು ಪರಿಸರ ಸ್ನೇಹಿ ಪಟಾಕಿಯನ್ನು ತಯಾರಿಸಿ ಎಲ್ಲರ ಗಮನಸೆಳೆದಿದ್ದಾರೆ.
ಮಂಗಳೂರಿನ ಮುಲ್ಕಿ ಬಳಿಕ ಪಕ್ಷಿಕೆರೆಯ ನಿತಿನ್ ವಾಸ್ ಈ ಬಾರಿ ದೀಪಾವಳಿಗೆ ಪರಿಸರ ಸ್ನೇಹಿ ಪಟಾಕಿ ಎಂಬ ಪ್ರಯೋಗವನ್ನು ಮಾಡಿದ್ದಾರೆ. ಪರಿಸರ ಸ್ನೇಹಿ ಮಾಸ್ಕ್ ತಯಾರಿಸಿ ಸುದ್ದಿಯಾಗಿದ್ದ ನಿತಿನ್ ವಾಸ್ ಈ ಬಾರಿ ಪರಿಸರ ಸ್ನೇಹಿ ಪಟಾಕಿ ತಯಾರಿಸಿದ್ದಾರೆ. ಆದರೆ ಇವರು ತಯಾರಿಸಿದ ಪಟಾಕಿ ಸಿಡಿಯೋದಿಲ್ಲ, ಸದ್ದು ಮಾಡೋದಿಲ್ಲ, ಬೆಳಕು ನೀಡೋದಿಲ್ಲ. ಪಟಾಕಿಯ ರೀತಿಯ ಆಕೃತಿ ಮಾಡಿ ಅದರೊಳಗೆ ತರಕಾರಿ ಗಿಡವನ್ನಿಟ್ಟು ದೀಪಾವಳಿ ಮುಗಿದ ಬಳಿಕ ಅದನ್ನು ನೆಡುವುದು ನಿತಿನ್ ವಾಸ್ ಅವರ ಯೋಜನೆಯಾಗಿದೆ.
ಪಕ್ಷಿಕೆರೆಯಲ್ಲಿರುವ ನಿತಿನ್ ವಾಸ್ ಅವರ ಪೇಪರ್ ಸೀಡ್ಸ್ ಸಂಸ್ಥೆಯಲ್ಲಿ ಬೀಡಿ ಪಟಾಕಿ, ಲಕ್ಷ್ಮಿ ಬಾಂಬ್, ಸುಕ್ಲಿ ಬಾಂಬ್, ರಾಕೆಟ್, ದುರ್ಸು, ನೆಲಚಕ್ರ ಪಟಾಕಿಗಳ ತಯಾರಿ ನಡೆಯುತ್ತಿದೆ. ಪಟಾಕಿಗಳಂತೆ ಕಾಣುವ ಇವುಗಳು ಸಿಡಿಯುವುದಿಲ್ಲ. ಈ ಸಿಡಿಯದ ಪಟಾಕಿಗಳನ್ನು ನೈಜ ಪಟಾಕಿಗಳ ರೀತಿಯಲ್ಲಿ ತಯಾರಿಸಲಾಗಿದೆ. ಅದರ ಬಣ್ಣ, ಗಾತ್ರ ಇವುಗಳೆಲ್ಲ ನಿಜವಾದ ಪಟಾಕಿ ರೀತಿಯಲ್ಲಿ ಇದೆ.

ಪಟಾಕಿಗಳಲ್ಲಿ ವಿವಿಧ ತರಕಾರಿ ಬೀಜ
ಈ ಪಟಾಕಿಗಳು ಸಿಡಿಸುವ ಬದಲು ತೊಟ್ಟಿ, ಹೂ ಕುಂಡಗಳಿಗೆ ಹಾಕಿದರೆ, ಅವು ಗಿಡವಾಗಿ ಬೆಳೆಯುತ್ತವೆ. ಪೇಪರ್ ಸೀಡ್ಸ್ ಸಂಸ್ಥೆಯಿಂದ ತಯಾರಿಸಲಾದ ಪಟಾಕಿಗಳಲ್ಲಿ ವಿವಿಧ ತರಕಾರಿ ಬೀಜಗಳನ್ನು ಹಾಕಲಾಗಿದೆ. ಈ ಪಟಾಕಿಗಳ ಒಳಗಡೆ ಹಾಕಿರುವ ಬೀಜಗಳು ಮಣ್ಣಿಗೆ ಬಿದ್ದು, ಅದಕ್ಕೆ ನೀರು ಹಾಕಿದರೆ ಮೊಳಕೆಯೊಡೆದು ಗಿಡವಾಗಿ ಬೆಳೆಯಲಿದೆ.

ವಿವಿಧ ತರಕಾರಿ ಬೀಜಗಳ ಪಟಾಕಿ
ಬೀಡಿ ಪಟಾಕಿಯಲ್ಲಿ ಮೆಣಸು, ಟೊಮೆಟೊ, ಪಾಲಕ್, ಲಕ್ಷ್ಮೀ ಬಾಂಬ್ನಲ್ಲಿ ಬೀಟ್ರೋಟ್, ಸನ್ ಫ್ಲವರ್ ಸೌತೆಕಾಯಿ, ಸುಕ್ಲಿ ಬಾಂಬ್ನಲ್ಲಿ ಮೆಣಸಿನಕಾಯಿ ಟೊಮೆಟೊ, ಮೂಲಂಗಿ, ರಾಕೆಟ್ನಲ್ಲಿ ಬೀಟ್ರೋಟ್, ಸನ್ ಫ್ಲವರ್, ದುರ್ಸುನಲ್ಲಿ ಮುಳ್ಳು ಸೌತೆ, ಅಲಸಂಡೆ, ನೆಲಚಕ್ರದಲ್ಲಿ ಪಾಲಕ್, ಮೂಲಂಗಿ ಬೀಜಗಳನ್ನು ಹಾಕಲಾಗಿದೆ. ಇವುಗಳು ಮಣ್ಣಿಗೆ ಹಾಕಿ, ನೀರು ಹಾಕಿದರೆ ಗಿಡವಾಗುತ್ತವೆ.
2 ವರ್ಷಗಳ ನಂತರ ತೆರೆದ ಮಾರುಕಟ್ಟೆ, ಗರಿಗೆದರಿದ ವ್ಯಾಪಾರ

30 ಮಂದಿಗೆ ಉದ್ಯೋಗ
ಈ ಪರಿಸರ ಸ್ನೇಹಿ ಪಟಾಕಿಗಳನ್ನು ಸುಮಾರು 30 ಮಂದಿ ತಯಾರಿಸುತ್ತಿದ್ದಾರೆ. ಈ ಮೂಲಕ ಅಷ್ಟು ಮಂದಿಗೆ ಉದ್ಯೋಗವು ಸಿಕ್ಕಿದೆ. ಪಟಾಕಿಗಳಂತೆ ಕಾಣುವ ಈ ಆರು ಬಗೆಯ ಪರಿಸರ ಸ್ನೇಹಿ ಪಟಾಕಿಗಳನ್ನು ಒಂದು ಬಾಕ್ಸ್ನಲ್ಲಿ ಹಾಕಿ ಮಾರಾಟಕ್ಕೆ ತಯಾರು ಮಾಡಲಾಗುತ್ತಿದೆ.

ದೇಶಾದ್ಯಂತ ಪಟಾಕಿಗಾಗಿ ಬೇಡಿಕೆ
ತಮ್ಮ ವಿನೂತನ ಪ್ರಯೋಗದ ಬಗ್ಗೆ ಮಾತನಾಡಿರುವ ಪರಿಸರ ಪ್ರೇಮಿ ನಿತಿನ್ ವಾಸ್, ಸುಮಾರು ಆರು ಬಗೆಯ ತರಕಾರಿ ಪಟಾಕಿಗಳನ್ನು ರಚಿಸಿದ್ದೇವೆ. ಈಗಾಗಲೇ ದೇಶಾದ್ಯಾಂತ ಈ ಪಟಾಕಿಗೆ ಬೇಡಿಕೆ ಬರುತ್ತಿದೆ. ಎನ್‌ಜಿಒ ಸಂಸ್ಥೆಗಳು ಪಟಾಕಿಗಾಗಿ ಬೇಡಿಕೆಯನ್ನು ಇಡುತ್ತಿದೆ. ಎಲ್ಲರಿಗೂ ಇದನ್ನು ತಲುಪಿಸುತ್ತೇವೆ. ಹಲವು ಮಂದಿ ಇಂತಹ ಸುಡದೇ ಇರುವ ಪಟಾಕಿಗಳನ್ನು ಬಯಸುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಈ ಪಟಾಕಿಗಳನ್ನು ತಯಾರು ಮಾಡಲಾಗಿದೆ.
ಈ ಪರಿಸರ ಸ್ನೇಹಿ ಪಟಾಕಿಗಳು ನೋಡಲು ಪಟಾಕಿಗಳಂತೆ ಕಾಣುತ್ತವೆಯಾದರು ಪಟಾಕಿಯಂತೆ ಸಿಡಿಯಲ್ಲ, ಶಬ್ದ ಮಾಡಲ್ಲ, ಬೆಳಕು ನೀಡಲ್ಲ. ಆದರೆ, ಇದು ಗಿಡವಾಗಿ ಬೆಳೆಯುತ್ತದೆ. ಹಲವು ಪರಿಸಾರಸಕ್ತರು ಇಂತಹ ಪಟಾಕಿಗಳನ್ನು ನಿರೀಕ್ಷಿಸುತ್ತಿದ್ದು, ಪೇಪರ್ ಸೀಡ್ಸ್ ಸಂಸ್ಥೆ ಈ ಹೊಸ ಪ್ರಯೋಗ ಮಾಡಿದೆ ಎಂದು ಹೇಳಿದ್ದಾರೆ.












Click it and Unblock the Notifications