ಮಂಗಳೂರು : ಆಟೋ ರಿಕ್ಷಾ ದರ 25 ರೂ.ಇರಲಿ
ಮಂಗಳೂರು, ಫೆ.9 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಟೋ ರಿಕ್ಷಾ ಪ್ರಯಾಣ ದರದ ಬಗ್ಗೆ ಚರ್ಚೆ ಇನ್ನೂ ಮುಂದುವರೆದಿದೆ. ಪ್ರಯಾಣದರ 25 ರೂ.ಇರಲಿ ಅದನ್ನು ಪರಿಷ್ಕರಣೆ ಮಾಡಬೇಡಿ ಎಂದು ಆಟೋ ರಿಕ್ಷಾ ಡ್ರೈವರ್‌ಗಳ ಯೂನಿಯನ್ ಒತ್ತಾಯಿಸಿದೆ.
ಪೆಟ್ರೋಲಿಯಂ ಉತ್ಪನ್ನಗಳ ದರ ಇಳಿಕೆಯಾಗಿದೆ ಎಂಬ ಒಂದೇ ಕಾರಣಕ್ಕಾಗಿ ಪ್ರಯಾಣದರವನ್ನು ಕಡಿಮೆ ಮಾಡುವುದು ಸರಿಯಲ್ಲ. ರಿಕ್ಷಾದ ಬಿಡಿ ಭಾಗಗಳು, ತೆರಿಗೆ, ಮನೆ ಬಾಡಿಗೆ , ವಿಮೆ, ನಿರ್ವಹಣೆ ವೆಚ್ಚ ಇವೆಲ್ಲವನ್ನೂ ಲೆಕ್ಕ ಹಾಕಿದಾಗ ಕನಿಷ್ಠ 17.10 ರೂ. ನಿರ್ವಹಣಾ ವೆಚ್ಚ ಚಾಲಕರಿಗೆ ಆಗುತ್ತದೆ ಎಂದು ಯೂನಿಯನ್ ಹೇಳಿದೆ. [ಮಂಗಳೂರು : ರಸ್ತೆಗಿಳಿಯದ ಆಟೋಗಳು]
ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ಫೆಡರೇಶನ್‌ನ ರಾಜ್ಯಾಧ್ಯಕ್ಷ ಮೀನಾಕ್ಷಿ ಸುಂದರಂ, ರಿಕ್ಷಾ ಚಾಲಕರು ಬಡವರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಡಳಿತ ನಿರ್ಧರಿಸಿದಂತೆ 20 ರೂ. ಕನಿಷ್ಠ ದರದಲ್ಲಿ ಆಟೋಗಳನ್ನು ಓಡಿಸಿದರೆ ಚಾಲಕರಿಗೆ ನಷ್ಟ ಉಂಟಾಗುತ್ತದೆ ಎಂದು ಹೇಳಿದರು. [ಮಂಗಳೂರು : ಆಟೋ ದರ ಇಳಿಕೆ, ಡಿಸಿ ಸಮರ್ಥನೆ]

ರಿಕ್ಷಾ ಚಾಲಕರ ವರ್ತನೆ ಕುರಿತು ಸಾರ್ವಜನಿಕರ ದೂರುಗಳ ಬಂದಿವೆ. ಫೆಡರೇಶನ್ ಮೂಲಕ ಆಟೋ ಚಾಲಕರನ್ನು ಸರಿದಾರಿಗೆ ತರಲು ಮನವೊಲಿಸಲಾಗುತ್ತಿದೆ ಎಂದರು. ಚಾಲಕರು ಪಾಲಿಸಬೇಕಾದ ನಿಯಮಾವಳಿಗಳ ಬಗ್ಗೆ, ಅವರ ವರ್ತನೆಗಳ ಬಗ್ಗೆ ಸರ್ಕಾರ ಮಾರ್ಗದರ್ಶಿ ಸೂತ್ರಗಳನ್ನು ನೀಡಿದೆ ಎಂದರು.
ಸರಿಯಾದ ಮೀಟರ್ ವ್ಯವಸ್ಥೆ, ಚಾಲಕರ ಹೆಸರು, ದೂರವಾಣಿ ಸಂಖ್ಯೆ ಮತ್ತು ವಿಳಾಸವನ್ನು ರಿಕ್ಷಾದಲ್ಲಿ ಪ್ರದರ್ಶಿ ಸುವಂತಹ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು. ಯೂನಿಯನ್ ಜಿಲ್ಲಾಧ್ಯಕ್ಷ ಸುನಿಲ್ ಕುಮಾರ್ ಬಜಾಲ್, ನಗರಾಧ್ಯಕ್ಷ ಕೃಷ್ಣಪ್ಪ ಗೌಡ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವಿವಾದವೇನು? : ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಜ. 12ರಂದು ಆಟೋ ರಿಕ್ಷಾ ದರಗಳನ್ನು ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿತ್ತು. ಅದರಂತೆ ಆಟೋಗಳ ಕನಿಷ್ಠ ದರದಲ್ಲಿ 5 ರೂ. ಕಡಿಮೆ ಮಾಡಲಾಗಿದೆ. ರೂ.25 ಇದ್ದ ದರವನ್ನು 20 ರೂ.ಗಳಿಗೆ ಇಳಿಕೆ ಮಾಡಲಾಗಿದೆ. ಇದಕ್ಕೆ ಆಟೋ ಚಾಲಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.











Click it and Unblock the Notifications