ಬಿಜೆಪಿ ಕಾರ್ಯಕರ್ತರ ಜತೆ ಶಕುಂತಳಾ ಶೆಟ್ಟಿ, ಫೋಟೋ ತಂದ ಎಡವಟ್ಟು
ಮಂಗಳೂರು, ಸೆಪ್ಟೆಂಬರ್ 5: ರಾಂಗ್ ಪರ್ಸನ್ ,ರಾಂಗ್ ಟೈಮ್ ನಲ್ಲಿ ರಾಂಗ್ ಪ್ಲೇಸ್ ನಲ್ಲಿದ್ದರೆ ಏನೆಲ್ಲಾ ಅನಾಹುತಗಳಾಗುತ್ತವೆ ಎನ್ನುವುದಕ್ಕೆ ಸ್ಪಷ್ಟ ಉದಾಹರಣೆಯೇ ಈ ಚಿತ್ರ.
ಬಿಜೆಪಿ ಯುವಮೋರ್ಚಾ ಸೆಪ್ಟೆಂಬರ್ 7 ರಂದು ಮಂಗಳೂರಿನಲ್ಲಿ ನಡೆಸಲು ಉದ್ದೇಶಿಸಿರುವ ಮಂಗಳೂರು ಚಲೋ ಬೈಕ್ ರಾಲಿಯ ಪೂರ್ವಭಾವಿಯಾಗಿ ಪ್ರತಿ ಪಂಚಾಯತ್ ಮಟ್ಟದಲ್ಲೂ ಪ್ರತಿಭಟನೆ ನಡೆಸುತ್ತಿತ್ತು. ಅಲ್ಲದೆ ರ್ಯಾಲಿಯ ಮೂಲ ಉದ್ದೇಶವಾದ ಪಿಎಫ್ಐ ಹಾಗೂ ಅದರ ಅಂಗಸಂಸ್ಥೆಗಳನ್ನು ನಿಷೇಧಿಸಬೇಕೆಂದು ಅಧಿಕಾರಿಗಳ ಮೂಲಕ ರಾಜ್ಯಪಾಲರಿಗೂ ಮನವಿ ಸಲ್ಲಿಸಲಾಗುತ್ತಿತ್ತು.

ಅದೇ ಪ್ರಕಾರ ಪುತ್ತೂರು ನಗರ ಯುವ ಮೋರ್ಚಾದಿಂದಲೂ ಪುತ್ತೂರು ಸಹಾಯಕ ಕಮಿಷನರ್ ಮುಖಾಂತರ ಸೋಮವಾರ ಮನವಿಯನ್ನು ಸಲ್ಲಿಸಲಾಯಿತು. ಆದರೆ, ಮನವಿ ಸಲ್ಲಿಸುವ ವಿಚಾರ ಹೆಚ್ಚು ಚರ್ಚೆಯಾಗದೆ ಮನವಿ ನೀಡುವ ಸಂದರ್ಭದಲ್ಲಿ ತೆಗೆದ ಫೋಟೊ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಈ ಚಿತ್ರವನ್ನು ಯುವ ಮೋರ್ಚಾ ಕಾರ್ಯಕರ್ತರು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸುತ್ತಿದ್ದ ಸಮಯದಲ್ಲಿ ತೆಗೆಯಲಾಗಿತ್ತು. ಆದರೆ, ಫೋಟೊ ತೆಗೆದ ವ್ಯಕ್ತಿ ಯುವ ಮೋರ್ಚಾದ ಪದಾಧಿಕಾರಿಗಳ ಜತೆಗೆ ಶಾಸಕಿಯನ್ನೂ ಸೇರಿಸಿ ಪೋಟೋ ತೆಗೆದಿದ್ದು ಶಾಸಕಿಯೂ ಈ ತಂಡದಲ್ಲಿ ಇದ್ದಾರೆ ಎನ್ನುವ ಅನುಮಾನವನ್ನು ಹುಟ್ಟುವಂತೆ ಮಾಡಿದೆ.
ಈ ಚಿತ್ರವೀಗ ಕಾಂಗ್ರೇಸ್, ಬಿಜೆಪಿ, ಪಿಎಫ್ಐ ಹೀಗೆ ಎಲ್ಲಾ ವಾಟ್ಸ್ಅಪ್ ಗ್ರೂಪು ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹರಿದಾಡುತ್ತಿದೆ. ಈ ಫೋಟೋಗೆ ಕೆಲವರು ರಾಜಕೀಯ ಬಣ್ಣವನ್ನೂ ಹಚ್ಚುತ್ತಿದ್ದಾರೆ.

ಜತೆಗೆ ಈ ಚಿತ್ರವೀಗ ಶಾಸಕಿ ಶಕುಂತಲಾ ಶೆಟ್ಟಿಯವರ ಕಾಂಗ್ರೇಸ್ ನಲ್ಲೇ ಇರುವ ವಿರೋಧಿ ಬಣದ ಕೈ ಗೆ ಮಾಣಿಕ್ಯವೇ ಸಿಕ್ಕಂತಾಗಿದೆ. ಚಿತ್ರವನ್ನು ಇದ್ದಬದ್ದವರಿಗೆಲ್ಲಾ ಶೇರ್ ಮಾಡಲಾಗುತ್ತಿದೆ.
ಈ ಚಿತ್ರ ಶಾಸಕಿ ಶಕುಂತಲಾ ಶೆಟ್ಟಿಯವರಿಗೆ ಪ್ರಚಾರದ ಜೊತೆಗೆ ತಲೆನೋವನ್ನೂ ತಂದಿದೆ. ವಾಸ್ತವವಾಗಿ ಶಾಸಕಿ ಶಕುಂತಲಾ ಶಟ್ಟಿ ತನ್ನ ಕಾರ್ಯ ನಿಮಿತ್ತ ಸಹಾಯಕ ಆಯುಕ್ತರ ಕಛೇರಿಗೆ ಭೇಟಿ ನೀಡಿದ ಸಂದರ್ಭ ಅದಾಗಿತ್ತು. ಈ ಸಂದರ್ಭದಲ್ಲಿ ಫೋಟೋ ತೆಗೆದವ ಮಾಡಿದ ಎಡವಟ್ಟಿನಿಂದ ಶಕುಂತಳಾ ಶೆಟ್ಟಿ ಬಿಜೆಪಿ ಯುವಮೋರ್ಚಾ ಜತೆಗೆ ಕಾಣಿಸಿಕೊಂಡಂತೆ ಭಾಸವಾಗಿತ್ತು.












Click it and Unblock the Notifications