ನ್ಯಾನೋ ಉಪಗ್ರಹ ಕುರಿತು ಆಳ್ವಾಸ್‍ನಲ್ಲಿ ಮಾಹಿತಿ ಕಾರ್ಯಾಗಾರ
ಮಂಗಳುರು, ಅಕ್ಟೋಬರ್ 14 : ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO) ಹಾಗೂ ಪ್ಲಾನೆಟ್ ಏರೋಸ್ಪೇಸ್ ಸಹಯೋಗದಲ್ಲಿ ನ್ಯಾನೋ ಉಪಗ್ರಹಗಳನ್ನು ಸಿದ್ಧಪಡಿಸುವ ಯೋಜನೆಗೆ ಆಳ್ವಾಸ್ ಸಂಸ್ಥೆ ಮುಂದಿದ್ದು, ಇದಕ್ಕೆ ಪೂರ್ವಭಾವಿಯಾಗಿ ನ್ಯಾನೋ ಉಪಗ್ರಹಗಳ ಕುರಿತು ಎರಡು ದಿನಗಳ ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ.
ಕಾರ್ಯಕ್ರಮವನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಉಪಗ್ರಹ ಕೇಂದ್ರದ ನಿವೃತ್ತ ಉಪನಿರ್ದೇಶಕ ಆರ್.ಕೆ. ರಾಜಂಗಂ ಉದ್ಘಾಟಿಸಿದರು. ಬಳಿಕ ಮಾತನಾಡಿ ಅವರು, ಹಿಂದಿನ ತಲೆಮಾರಿನ ಇಂಜಿನಿಯರ್ ಗಳಿಗೆ ಮಾಹಿತಿ ಸಂಪನ್ಮೂಲಗಳು ಕಡಿಮೆ ಇದ್ದಿದ್ದರಿಂದ ಹೆಚ್ಚಿನ ಜ್ಞಾನ ಪಡೆಯುವುದು ಅಕ್ಷರಶಃ ಸವಾಲಾಗಿತ್ತು. ಆದರೆ, ಇಂದಿನ ಇಂಜಿನಿಯರ್ ಗಳಿಗೆ ಅಂತಹ ಸವಾಲುಗಳಿಲ್ಲ ಎಂದರು.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಅಭಿವೃದ್ಧಿಯಿಂದಾಗಿ ಎಲ್ಲಾ ಮಾಹಿತಿಗಳು ಅವರ ಬೆರಳ ತುದಿಯಲ್ಲಿ ಸಿಗುವಂತಾಗುತ್ತಿವೆ. ಆದರೆ, ಸಿದ್ಧವಾಗಿ ಸಿಗುವ ಮಾಹಿತಿಗಿಂತ ಅನುಭವ ಆಧಾರಿತ ಕಲಿಕೆಗೆ ಹೆಚ್ಚಿನ ಮಹತ್ವವಿದ್ದು, ಅದನ್ನು ಇಂದಿನ ವಿದ್ಯಾರ್ಥಿಗಳು ಪಡೆದುಕೊಳ್ಳುವುದು ತುಂಬಾ ಮುಖ್ಯ' ಎಂದು ಅಭಿಪ್ರಾಯ ಪಟ್ಟರು.
ಇಂತಹ ಅನುಭವ ಆಧಾರಿತ ಶಿಕ್ಷಣವನ್ನು ನೀಡಲು ಭಾರತೀಯ ಬಾಹ್ಯಾಕಾಶ ಸಂಸ್ಥೆಯ ನಿವೃತ್ತ ಇಂಜಿನಿಯರ್ ಗಳು ಮುಂದಾಗಿದ್ದು ಈ ಕಾರ್ಯಾಗಾರದಲ್ಲಿ ಭಾಗವಹಿಸುತ್ತಿದ್ದಾರೆ.

ಉತ್ಸಾಹಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನವನ್ನು ಒದಗಿಸಲು ಮಾಹಿತಿ ಕಾರ್ಯಾಗಾರ ಯಶಸ್ವಿಯಾಗಬಲ್ಲದು. ಈ ಬಗೆಯ ಮಾಹಿತಿ ಕಾರ್ಯಾಗಾರಗಳು ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಜ್ಞಾನವನ್ನು ನೀಡುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಾಗಾರಕ್ಕೆ ಸಂಬಂಧಿಸಿದ ಸಿ.ಡಿ. ಹಾಗೂ ಪುಸ್ತಕಗಳನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇಸ್ರೋದ ನಿವೃತ್ತ ಯೋಜನಾ ಅಧಿಕಾರಿಗಳು, ಇಂಜಿನಿಯರ್ ಗಳು ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ












Click it and Unblock the Notifications