ಮಂಗಳೂರು-ಸಿಂಗಾಪುರ ವಿಮಾನ: ಕರಾವಳಿ ಜನರಿಗೆ ಬೇಸರದ ಸುದ್ದಿ
ಮಂಗಳೂರು, ಜನವರಿ 08: ಕರ್ನಾಟಕದ ಕರಾವಳಿ ಮತ್ತು ಸಿಂಗಾಪುರ ಸಂಪರ್ಕಿಸಲು ವಿಮಾನ ಸೇವೆ ಆರಂಭವಾಗಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಕಾರ್ಯಾಚರಣೆಯ ಕಾರಣವನ್ನು ನೀಡಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮಂಗಳೂರು-ಸಿಂಗಾಪುರ ನಡುವಿನ ವಿಮಾನ ಸೇವೆಯನ್ನು ರದ್ದು ಮಾಡಿದೆ. ಜನವರಿ 21 ರಿಂದ ಈ ಮಾರ್ಗದ ವಿಮಾನ ಸೇವೆ ಆರಂಭಿಸಲಿದ್ದೇವೆ ಎಂದು ಈ ಹಿಂದೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಘೋಷಣೆ ಮಾಡಿತ್ತು.
ಮಂಗಳೂರು-ಸಿಂಗಾಪುರ (ಚಾಂಗಿ) ವಿಮಾನ ಹಾರಾಟವನ್ನು ರದ್ದುಗೊಳಿಸುವುದಾಗಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಹೇಳಿದೆ. ಚಾಂಗಿ ಸಿಂಗಾಪುರದಲ್ಲಿನ ವಿಮಾನ ನಿಲ್ದಾಣವಾಗಿದ್ದು, ಇದು ಏಷ್ಯಾದ ಪ್ರಮುಖ ವಾಯುಯಾನ ಕೇಂದ್ರವಾಗಿದೆ. ಕರಾವಳಿಯಿಂದ ಇಲ್ಲಿಗೆ ವಿಮಾನ ಸೇವೆ ಆರಂಭ ಮಾಡುವುದಾಗಿ ಮೊದಲು ತಿಳಿಸಿ, ಬುಕ್ಕಿಂಗ್ ಸಹ ಆರಂಭಿಸಲಾಗಿತ್ತು.

ವಾರಕ್ಕೆ ಎರಡು ಬಾರಿ ಸಂಚಾರ: ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಾರಕ್ಕೆ ಎರಡು ಬಾರಿ ಮಂಗಳೂರು-ಸಿಂಗಾಪುರ ನಡುವೆ ವಿಮಾನ ಹಾರಾಟ ನಡೆಸಲಾಗುತ್ತದೆ ಎಂದು ಘೋಷಣೆ ಮಾಡಿತ್ತು. ಈ ಮಾರ್ಗದಲ್ಲಿ IX862 ಮತ್ತು IX861 ಸಂಖ್ಯೆಯ ವಿಮಾನ ಹಾರಟ ನಡೆಸಲಿದೆ ಎಂದು ಹೇಳಿತ್ತು. ಇದು ಕರಾವಳಿ ಮತ್ತು ಸಿಂಗಾಪುರ ನಡುವಿನ ಸಂಪರ್ಕ ಸುಲಭವಾಗಿಸಲಿದೆ ಎಂದು ಅಂದಾಜಿಸಲಾಗಿತ್ತು.
ಈ ಹಿಂದೆ ಘೋಷಣೆ ಮಾಡಿದಂತೆ ವಿಮಾನ ಸಂಖ್ಯೆ IX862 ಮಂಗಳೂರು ವಿಮಾನ ನಿಲ್ದಾಣದಿಂದ ಬೆಳಗ್ಗೆ 5.55ಕ್ಕೆ ಹೊರಟು, ಸಿಂಗಾಪುರವನ್ನು 1.25 (ಸ್ಥಳೀಯ ಕಾಲಮಾನ) ತಲುಪಬೇಕಿತ್ತು. IX861 ಸಂಖ್ಯೆಯ ವಿಮಾನ 2.25ಕ್ಕೆ ಸಿಂಗಾಪುರದಿಂದ ಹೊರಟು ಸಂಜೆ 4.55ಕ್ಕೆ ಮಂಗಳೂರಿಗೆ ಆಗಮಿಸಬೇಕಿತ್ತು.
ಈಗ ಮಂಗಳೂರು-ಸಿಂಗಾಪುರ ಮಾರ್ಗದ ವಿಮಾನ ಹಾರಾಟ ರದ್ದುಗೊಳಿಸಲಾಗಿದೆ. ಅಲ್ಲದೇ ವಿಮಾನಯಾನ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಟಿಕೆಟ್ ಬುಕ್ಕಿಂಗ್ ಸಹ ರದ್ದುಗೊಳಿಸಲಾಗಿದೆ. ಕಾರ್ಯಾಚರಣೆಯ ಕಾರಣಕ್ಕೆ ವಿಮಾನ ಹಾರಾಟ ನಡೆಸುವುದಿಲ್ಲ ಎಂದು ತಿಳಿಸಲಾಗಿದೆ. ಇದರಿಂದಾಗಿ ಕರಾವಳಿ ಭಾಗದ ಜನರಿಗೆ ನಿರಾಸೆಯಾಗಿದೆ.
ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮಂಗಳೂರು ವಿಮಾನ ನಿಲ್ದಾಣದಿಂದ ಜನವರಿ 4 ರಿಂದ ಮಂಗಳೂರು-ಪುಣೆ ವಿಮಾನ ಸೇವೆ ಆರಂಭಿಸಿದೆ. ಅಲ್ಲದೇ ಹೆಚ್ಚುವರಿಯಾಗಿ ಫೆಬ್ರವರಿ 1ರಿಂದ ದೆಹಲಿಗೆ ಪ್ರತಿದಿನದ ವಿಮಾನ ಸೇವೆ ಆರಂಭಿಸಲಿದೆ. ಫೆಬ್ರವರಿ 15 ರಿಂದ ಪ್ರತಿದಿನ ಮಂಗಳೂರು-ಮುಂಬೈ ವಿಮಾನವನ್ನು ಓಡಿಸಲಿದೆ.
ಮಂಗಳೂರು-ಪುಣೆ ವಿಮಾನ: 2025ರ ಹೊರ ವರ್ಷದಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮಂಗಳೂರು-ಪುಣೆ ಮಾರ್ಗದಲ್ಲಿ ನೇರ ವಿಮಾನಯಾನ ಸೇವೆಯನ್ನು ಆರಂಭಿಸಿದೆ. ಕರ್ನಾಟಕದ ಕರಾವಳಿ ಮತ್ತು ಅಕ್ಕಪಕ್ಕದ ಜಿಲ್ಲೆಗಳ ಜನರು ಮಹಾರಾಷ್ಟ್ರದ ಐಟಿ ರಾಜಧಾನಿ ಪುಣೆಗೆ ಸುಲಭವಾಗಿ ಸಂಚಾರ ನಡೆಸಬಹುದಾಗಿದೆ. ಮಂಗಳೂರು ಮತ್ತು ಪುಣೆ ನಡುವೆ ಪ್ರತಿ ಶನಿವಾರ ಎರಡು ವಿಮಾನಗಳು ಸಂಚಾರವನ್ನು ನಡೆಸಲಿವೆ.
ಮಂಗಳೂರು-ಪುಣೆ ನಡುವಿನ ವಿಮಾನಕ್ಕೆ ಇರುವ ಬೇಡಿಕೆಯನ್ನು ಪರಿಗಣಿಸಿ ಈ ವಿಮಾನ ಸೇವೆಯನ್ನು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಆರಂಭಿಸಿದೆ. ವೇಳಾಪಟ್ಟಿಯಂತೆ ಐಎಕ್ಸ್ 2236 ಸಂಖ್ಯೆಯ ವಿಮಾನ ಮಂಗಳೂರಿನಿಂದ ಸಂಜೆ 6.30ಕ್ಕೆ ಹೊರಟು ರಾತ್ರಿ 8 ಗಂಟೆಗೆ ಪುಣೆ ತಲುಪಲಿದೆ. ಪುಣೆಯಿಂದ ಐಎಕ್ಸ್ 2237 ಸಂಖ್ಯೆಯ ವಿಮಾನ ರಾತ್ರಿ 8.35ಕ್ಕೆ ಹೊರಟು ರಾತ್ರಿ 10.05ಕ್ಕೆ ಮಂಗಳೂರಿಗೆ ಆಗಮಿಸಲಿದೆ.
ಈ ವಿಮಾನ ಸೇವೆ ಮೂಲಕ ಎರಡು ತಿಂಗಳ ಬಳಿಕ ಮಂಗಳೂರು-ಪುಣೆ ವಿಮಾನ ಸೇವೆ ಆರಂಭವಾಗಿದೆ. 2022ರ ಮಾರ್ಚ್‌ನಲ್ಲಿ ಇಂಡಿಗೋ ವಿಮಾನಯಾನ ಸಂಸ್ಥೆ ಮಂಗಳೂರು-ಪುಣೆ ನಡುವೆ ವಿಮಾನ ಸೇವೆಯನ್ನು ಆರಂಭಿಸಿತ್ತು. ಆದರೆ ಎರಡು ತಿಂಗಳ ಹಿಂದೆ ತನ್ನ ಚಳಿಗಾಲದ ವೇಳಾಪಟ್ಟಿಯ ಅನ್ವಯ ಮಂಗಳೂರು-ಪುಣೆ ವಿಮಾನ ಸಂಚಾರವನ್ನು ರದ್ದುಗೊಳಿಸಿತ್ತು. ಈಗ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಈ ಮಾರ್ಗದಲ್ಲಿ ವಿಮಾನ ಸೇವೆಯನ್ನು ಆರಂಭಿಸಿದೆ.












Click it and Unblock the Notifications