Death: ಕಾಸ್ಮೆಟಿಕ್ ಸರ್ಜರಿ ವೇಳೆ ವೈದ್ಯರ ಎಡವಟ್ಟು: ಮಂಗಳೂರಿನಲ್ಲಿ ಯುವಕ ಸಾವು
ಮಂಗಳೂರು, ಸೆಪ್ಟೆಂಬರ್ 25: ವೈದ್ಯರ ಎಡವಟ್ಟಿನಿಂದ ಕಾಸ್ಮೆಟಿಕ್ ಸರ್ಜರಿ ವೇಳೆ ಯುವಕ ಮೃತಪಟ್ಟ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಬೆಂದೂರ್ ವೆಲ್‌ನಲ್ಲಿರುವ ಫ್ಲೋಂಟ್ ಕಾಸ್ಮೆಟಿಕ್ ಸರ್ಜರಿ ಮತ್ತು ಹೇರ್ ಟ್ರಾನ್ಸ್ಪ್ಲಾಂಟ್ ಕ್ಲಿನಿಕ್‌ನಲ್ಲಿ ಈ ಸರ್ಜರಿ ನಡೆದಿದ್ದು, ವೈದ್ಯರ ನಿರ್ಲಕ್ಷ್ಯದಿಂದಲೇ ಯುವಕ ಸಾವನ್ನಪ್ಪಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ.
ಉಳ್ಳಾಲದ ಅಕ್ಕರೆಕೆರೆ ನಿವಾಸಿ ಮುಹಮ್ಮದ್ ಮಾಝಿನ್ (32) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಎದೆ ಭಾಗ ಉಬ್ಬಿದೆ ಎನ್ನುವ ಕಾರಣಕ್ಕೆ ಸರ್ಜರಿ ಮಾಡಿಸಿಕೊಳ್ಳಲು ಮುಹಮ್ಮದ್ ಮಾಝಿನ್ ಮಂಗಳೂರು ನಗರದ ಕಂಕನಾಡಿಯ ಬೆಂದೂರ್ ವೆಲ್‌ನಲ್ಲಿರುವ ಫ್ಲೋಂಟ್ ಕಾಸ್ಮೆಟಿಕ್ ಸರ್ಜರಿ ಮತ್ತು ಹೇರ್ ಟ್ರಾನ್ಸ್ಪ್ಲಾಂಟ್ ಕ್ಲಿನಿಕ್‌ನಲ್ಲಿ ದಾಖಲಾಗಿದ್ದರು ಎನ್ನಲಾಗಿದೆ.

ವೈದ್ಯರ ಸಲಹೆ ಮೇರೆಗೆ ಮುಹಮ್ಮದ್ ಮಾಝಿನ್ ಗೈನ್ ಇಕೋಮಸ್ಟಿಯಾ ಮಾಡಿಸಿಕೊಳ್ಳಲು ಮುಂದಾಗಿದ್ದರು. ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಸರ್ಜರಿಗೆ ಕರೆದುಕೊಂಡು ಹೋಗಿದ್ದು, ಶಸ್ತ್ರಚಿಕಿತ್ಸೆ ಅರ್ಧ ಗಂಟೆಯಲ್ಲಿ ಮುಗಿಯಬೇಕಿತ್ತು. ಆದರೆ ಎಷ್ಟೇ ಸಮಯವಾದರೂ ಸಂಜೆಯಾದರು ಶಸ್ತ್ರಚಿಕಿತ್ಸೆ ಮುಗಿದ ಬಗ್ಗೆ ವೈದ್ಯರು ಪೋಷಕರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಇದರಿಂದ ಮಾಝಿನ್ ಪೋಷಕರು ಅನುಮಾನಗೊಂಡಿದ್ದಾರೆ.
ಬಳಿಕ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿಯನ್ನು ಪದೇ ಪದೇ ವಿಚಾರಿಸಿದಾಗ ಮುಹಮ್ಮದ್ ಮಾಝಿನ್ ಆರೋಗ್ಯದಲ್ಲಿ ಏರುಪೇರಾಗಿದ್ದು, ಪ್ರಾಣಾಪಾಯವಿರುವುದು ತಿಳಿದು ಬಂದಿದೆ. ಕೂಡಲೇ ಪೋಷಕರು ಮುಹಮ್ಮದ್ ಮಾಝಿನ್ನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ಮಾಝಿನ್ ಮೃತಪಟ್ಟಿರುವುದು ದೃಢವಾಗಿದೆ. ಖಾಸಗಿ ಆಸ್ಪತ್ರೆ ವೈದ್ಯರು ಮುಹಮ್ಮದ್ ಮಾಝಿನ್ ಮೃತಪಟ್ಟಿರುವುದನ್ನು ಧೃಡಪಡಿಸಿ ಪೋಷಕರಿಗೆ ತಿಳಿಸಿದ್ದಾರೆ.
ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಗೈನ್ ಇಕೋಮಸ್ಟಿಯಾ ಸರ್ಜರಿಯ ವೇಳೆ ಬೆಂದೂರ್ ವೆಲ್‌ನಲ್ಲಿರುವ ಫ್ಲೋಂಟ್ ಕಾಸ್ಮೆಟಿಕ್ ಸರ್ಜರಿ ಮತ್ತು ಹೇರ್ ಟ್ರಾನ್ಸ್ಪ್ಲಾಂಟ್ ಕ್ಲಿನಿಕ್‌ನ ವೈದ್ಯರು ಮಾಡಿರುವ ಎಡವಟ್ಟಿನಿಂದ ತಮ್ಮ ಮಗ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿದ್ದಾರೆ. ಮುಹಮ್ಮದ್ ಮಾಝಿನ್ ಸಾವಿನ ಸಂಬಂಧ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.












Click it and Unblock the Notifications