ಮಂಡ್ಯ: ವಾಷಿಂಗ್ ಮೆಷಿನ್ ರಿಪೇರಿ ನೆಪದಲ್ಲಿ ವಂಚನೆ, ಹಣ ಕಳೆದುಕೊಳ್ಳುತ್ತಿರುವ ನೂರಾರು ಗ್ರಾಹಕರು
ಮಂಡ್ಯ, ನವೆಂಬರ್ 18: ವಾಷಿಂಗ್ ಮೆಷಿನ್ ರಿಪೇರಿ ಮಾಡುವುದಾಗಿ ಹೇಳಿ ವಂಚನೆ ಮಾಡುತ್ತಿರುವ ನಕಲಿ ವಂಚಕರಿಂದ ನೂರಾರು ಗ್ರಾಹಕರು ಹಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಇದರಿಂದ ಆಯಾ ಕಂಪನಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ವಾಷಿಂಗ್ ಮೆಷಿನ್ ಕಂಪನಿಯ ಹೆಸರಿನಲ್ಲಿ ರಿಪೇರಿ ಮಾಡುತ್ತೇವೆಂದು ಸುಮಾರು ನೂರಕ್ಕೂ ಹೆಚ್ಚು ಜನರಿಗೆ ನಕಲಿ ವಸ್ತುಗಳ ಮಾರಾಟ ಮಾಡಿದ್ದಾರೆ. ಮೆಷಿನ್ ರಿಪೇರಿ ಮಾಡಿದ್ದೇವೆ ಎಂದು ಸಾವಿರಾರು ರೂಪಾಯಿಯನ್ನೂ ವಸೂಲಿ ಮಾಡಿ ಪರಾರಿಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ.

ಬಟ್ಟೆ ಹೊಗೆಯುವ ವಾಷಿಂಗ್ ಮೆಷಿನ್ ಕಂಪನಿಯ ಶೋ ರೂಂ ಮೂಲಕವೇ ಖರೀದಿಸಿದ್ದು, ಈ ಜಾಡು ಹಿಡಿದ ವಂಚಕರು, ಗೂಗಲ್ ಮೂಲಕ ಗ್ರಾಹಕರ ಮೊಬೈಲ್ ನಂಬರ್ ಪತ್ತೆಮಾಡಿ ಸಂಪರ್ಕಿಸಿ ಕಂಪನಿಯವರೆಂದು ತಮ್ಮನ್ನು ಪರಿಚಯಿಸಿಕೊಂಡು, ನಂತರ ಮೆಷಿನ್ ಖರೀದಿಸಿ ಮೂರು ತಿಂಗಳಾಗಿದ್ದು ಅದನ್ನು ಸರ್ವೀಸ್ ಮಾಡಲು ಮನೆಗೆ ಬರುತ್ತೇವೆ ಎಂದು ಹೇಳಿ ವಂಚಿಸುತ್ತಿದ್ದಾರೆ.
ಮನೆಗೆ ಬಂದ ಈ ವಂಚಕರ ತಂಡವು, ರಿಪೇರಿ ಮಾಡುವ ನೆಪದಲ್ಲಿ 7ರಿಂದ 8 ಸಾವಿರ ಹಣವನ್ನು ಗ್ರಾಹಕರಿಂದ ಪಡೆಯುತ್ತಾರೆ. ಮೆಷಿನ್‌ಗೆ ಬಳಸುವ ನಕಲಿ ಟೂಲ್ಸ್‌ಗಳನ್ನು ಮೆಷಿನಿಗೆ ಅಳವಡಿಸುವುದಲ್ಲದೇ ಮೆಷಿನ್‌ನಲ್ಲಿರುವ ಒರಿಜಿನಲ್ ಟೂಲ್ಸ್‌ಗಳನ್ನು ಕಳ್ಳತನ ಮಾಡಿ ಪರಾರಿಯಾಗುತ್ತಿರುವ ಬಗ್ಗೆಯೂ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿದೆ. ಪಟ್ಟಣದ ಹಲವು ಮನೆಗಳಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ವಂಚಕರು ಮೊದಲು ಮನೆಗೆ ಪ್ರವೇಶಿಸಿ ವಾಷಿಂಗ್ ಮೆಷಿನ್ ಪರೀಕ್ಷಿಸುವ ನಾಟಕವಾಡಿ, ನಿಮ್ಮ ಮನೆಯಲ್ಲಿ ನೀರು ಉಪ್ಪಾಗಿರುವುದರಿಂದ ಇದನ್ನು ಬಳಸಿದರೆ ಏನೂ ಆಗುವುದಿಲ್ಲ. ನಾವು ತಂದಿರುವ ನಕಲಿ ಪೌಡರ್ ಬಳಸಿ ಎಂದು ಹೇಳುವುದು ಹಾಗೂ ಸ್ವಲ್ಪ ಮೈನರ್ ರಿಪೇರಿ ಎಂದು ಮೋಸ ಮಾಡಲೆಂದು ರಿಪೇರಿ ನಾಟಕವಾಡಿ ಹಣ ಪಡೆದು ಇಲ್ಲಿಂದ ಕಾಲು ಕೀಳುತ್ತಿದ್ದಾರೆ. ಯಾರು ಸಹ ಇವರನ್ನು ನಂಬಬಾರದು ಎಂದು ಉದ್ಯಮಿ ಫಣಿಕಿರಣ್ ಮನವಿ ಮಾಡುತ್ತಾರೆ.
ಪಟ್ಟಣದಲ್ಲಿ ಇಂತಹ ಪ್ರಕರಣವು ಕಳೆದ ಮೂರು ತಿಂಗಳಿನಿಂದಲೂ ನಡೆಯುತ್ತಿದೆ. ಈ ವಂಚಕರ ಜಾಲವು ವಾಷಿಂಗ್ ಮೆಷಿನ್ ರಿಪೇರಿ ಮಾಡಿದ ಮೇಲೆ ಮತ್ತೆ ರಿಪೇರಿಗೆ ಬರುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಇದರ ಬಗ್ಗೆ ಮೋಸ ಹೋದವರು ತಾವು ಖರೀದಿಸಿದ ವಾಷಿಂಗ್ ಮೆಷಿನ್ ಕಂಪನಿಯವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆದರೆ ಅವರು ನಾವು ಯಾರನ್ನೂ ರಿಪೇರಿಗೆ ಕಳುಹಿಸಿಲ್ಲ. ನೀವು ಮೋಸ ಹೋಗಿದ್ದೀರಾ ಎಂದು ಹೇಳುತ್ತಿದ್ದಾರೆ ಎಂದು ರವಿಕುಮಾರ್ ಮತ್ತು ರಾಜು ಅಳಲು ತೋಡಿಕೊಂಡರು.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಿಂದ ದೂರುಗಳು ಬರುತ್ತಿದ್ದು, ಕಂಪನಿಯ ಗುರುತಿನ ಚೀಟಿಯಿಲ್ಲದೇ ಯಾರನ್ನು ಒಳಗೆ ಬಿಟ್ಟುಕೊಳ್ಳಬಾರದು ಹಾಗೂ ತಕ್ಷಣವೇ ಪೊಲೀಸರಿಗೆ ದೂರು ನೀಡಿ ಎಂದು ಕಂಪನಿ ಗ್ರಾಹಕರ ಸೇವಾ ಕೇಂದ್ರದವರು ಹೇಳುತ್ತಾರೆ. ಹಾಗಾಗಿ ಗ್ರಾಹಕರು ಎಚ್ಚರಿಕೆಯಿಂದ ಇರಬೇಕೆಂದು ಕಂಪನಿಯ ವ್ಯವಸ್ಥಾಪಕರು ತಿಳಿಸುತ್ತಾರೆ.












Click it and Unblock the Notifications