ಮಂಡ್ಯ: ಶೈಕ್ಷಣಿಕ ಚಟುವಟಿಕೆ ಪ್ರಾರಂಭವಾದರೂ ಜಿಲ್ಲೆಯಲ್ಲಿ ನೀಗದ ಶಿಕ್ಷಕರ ಕೊರತೆ!
ಮಂಡ್ಯ, ಜೂನ್ 09: ಪ್ರಸಕ್ತ ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭವಾಗಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿಯೂ ಏರಿಕೆಯಾಗಿದೆ. ವಿಷಯವಾರು ತರಗತಿಗಳೂ ನಡೆಯುತ್ತಿದ್ದರೂ, ಅದಕ್ಕೆ ಶಿಕ್ಷಕರ ಕೊರತೆಯೂ ಎದ್ದು ಕಾಣುತ್ತಿದೆ. ಜಿಲ್ಲೆಯಲ್ಲಿ ಒಟ್ಟಾರೆ 1,916 ಶಿಕ್ಷಕರ ಹುದ್ದೆಗಳು ಭರ್ತಿಯಾಗಿಲ್ಲ.
ಜಿಲ್ಲೆಯಲ್ಲಿ 783 ಕಿರಿಯ ಪ್ರಾಥಮಿಕ, 818 ಹಿರಿಯ ಪ್ರಾಥಮಿಕ, 215 ಪ್ರೌಢಶಾಲೆಗಳು, 9 ಪದವಿ ಪೂರ್ವ ಕಾಲೇಜುಗಳು(ಪ್ರೌಢಶಾಲೆ ವಿಭಾಗ ಸೇರಿ) ಸೇರಿದಂತೆ 1,824 ಸರಕಾರಿ ಶಾಲೆಗಳಿವೆ. ಜೊತೆಗೆ 172 ಅನುದಾನಿತ, 423 ಅನುದಾನರಹಿತ ಖಾಸಗಿ ಶಾಲೆಗಳು, 42 ಸಮಾಜಕಲ್ಯಾಣ ಇಲಾಖೆಯ ಶಾಲೆಗಳು, ತಲಾ ಒಂದೊಂದು ಜವಾಹರ್ ನವೋದಯ ವಿದ್ಯಾಲಯ, ಕೇಂದ್ರೀಯ ವಿದ್ಯಾಲಯ, 2 ಮೌಲಾನ ಅಬ್ದುಲ್ ಆಜಾದ್ ಶಾಲೆಗಳು ಸೇರಿದಂತೆ 2,465 ಶಾಲೆಗಳಿವೆ.

ಅನುದಾನಿತ, ಅನುದಾನ ರಹಿತ ವಿದ್ಯಾಸಂಸ್ಥೆಗಳಲ್ಲಿ ಶಿಕ್ಷಣ ಸಂಸ್ಥೆಯವರೇ ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದಾರೆ. ಆದರೆ, ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರದ್ದೇ ಬಹುದೊಡ್ಡ ಸಮಸ್ಯೆಯಾಗಿದೆ. ಜಿಲ್ಲೆಯ ಸರಕಾರಿ ಪ್ರಾಥಮಿಕ, ಪ್ರೌಢಶಾಲೆಗಳಿಗೆ 7077 ಶಿಕ್ಷಕರ ಹುದ್ದೆಗಳು ಮಂಜೂರಾಗಿವೆ. ಈ ಪೈಕಿ 5,161 ಹುದ್ದೆಗಳು ಭರ್ತಿಯಾಗಿದ್ದು, 1,916 ಹುದ್ದೆಗಳು ಖಾಲಿಯಿವೆ.
ಇದರಿಂದ ಶೈಕ್ಷಣಿಕ ಚಟುವಟಿಕೆಗಳು ಮತ್ತು ಪಾಠ ಪ್ರವಚನಗಳಿಗೆ ತೊಂದರೆಯಾಗಿದೆ. ಒಂದೆಡೆ ಶಾಲಾ ಪ್ರಾರಂಭೋತ್ಸವದ ಬೆನ್ನಲ್ಲೇ ಮಕ್ಕಳ ದಾಖಲಾತಿ ನಡೆಯುತ್ತಿದೆ. ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಪ್ರಯತ್ನವೂ ನಡೆಯಬೇಕಿದೆ. ಮತ್ತೊಂದೆಡೆ ತರಗತಿಗಳಲ್ಲಿ ಪಾಠ ಪ್ರವಚನಗಳ ಆಗಬೇಕಿದೆ. ಆದರೆ, ಶಿಕ್ಷಕರ ಕೊರತೆಯಿಂದಾಗಿ ಇದ್ಯಾವ ಕಾರ್ಯವೂ ಸರಿಯಾಗಿ ನಡೆಯುತ್ತಿಲ್ಲ. ಇದು ಮಕ್ಕಳ ಶೈಕ್ಷಣಿಕ ಪ್ರಗತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯನ್ನು ತಳ್ಳಿಹಾಕಲಾಗದು.
ಸಹ ಶಿಕ್ಷಕರ ಕೊರತೆಯೇ ಹೆಚ್ಚು
ಪ್ರಾಥಮಿಕ ಶಾಲೆಗಳಲ್ಲಿ ಇರುವ ಸಹ ಶಿಕ್ಷಕರೇ ಹೇಗೋ ವಿಷಯವಾರು ಪಾಠಗಳನ್ನು ಮಾಡಿ, ಶೈಕ್ಷಣಿಕ ಚಟುವಟಿಕೆಗಳನ್ನು ಮುಗಿಸುತ್ತಾರೆ. ಆದರೆ, ಪ್ರೌಢಶಾಲೆಗಳಿಗೆ ವಿಷಯವಾರು ಶಿಕ್ಷಕರೇ ಬೇಕಿದೆ. ಜಿಲ್ಲೆಯ ಪ್ರೌಢಶಾಲೆಗಳಲ್ಲಿ ಒಟ್ಟಾರೆ 411 ಶಿಕ್ಷಕರ ಕೊರತೆಯಿದೆ. ಇದರಲ್ಲಿ 13 ಮುಖ್ಯಶಿಕ್ಷಕರ ಹುದ್ದೆಗಳಷ್ಟೇ ಖಾಲಿ ಇವೆ. ಇದರಿಂದ ಅಷ್ಟೇನೂ ಸಮಸ್ಯೆಯಿಲ್ಲ. ಸಹ ಶಿಕ್ಷಕರೇ ಪ್ರಭಾರ ಮುಖ್ಯಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಾರೆ.

ಆದರೆ, 326 ಮಂದಿ ಸಹ ಶಿಕ್ಷಕರ ಹುದ್ದೆಗಳು ಖಾಲಿಯಿವೆ. ಜೊತೆಗೆ, ಖಾಲಿ ಇರುವ 72 ಮಂದಿ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳು ಭರ್ತಿಯಾಗಬೇಕಿದೆ. 326 ಸಹ ಶಿಕ್ಷಕರ ವಿಷಯವಾರು ಶಿಕ್ಷಕರೂ ಸೇರಿದ್ದಾರೆ. ಪ್ರತಿ ಪ್ರೌಢಶಾಲೆಯಲ್ಲೂ ಒಂದೊಂದು ವಿಷಯಕ್ಕೆ ಒಬ್ಬೊಬ್ಬರು ಶಿಕ್ಷಕರಿರಬೇಕಿದೆ. ಆದರೆ, ಜಿಲ್ಲೆಯಲ್ಲಿ ಆ ಪರಿಸ್ಥಿತಿಯಿಲ್ಲ.
ಹೆಚ್ಚುವರಿ ವಿಶೇಷ ಶಿಕ್ಷಕರು
ಚಿತ್ರಕಲೆ, ಸಂಗೀತ, ಸಾಹಿತ್ಯ, ನೃತ್ಯ, ಹೊಲಿಗೆ, ವೃತ್ತಿ ತರಬೇತಿಗಾಗಿ ಜಿಲ್ಲೆಗೆ 40 ವಿಶೇಷ ಶಿಕ್ಷಕರ ಹುದ್ದೆಗಳು ಮಂಜೂರಾಗಿವೆ. ಕನಿಷ್ಠ 240 ವಿದ್ಯಾರ್ಥಿಗಳಿರುವ ಶಾಲೆಗಳಲ್ಲಿ ಒಬ್ಬೊಬ್ಬ ವಿಶೇಷ ಶಿಕ್ಷಕರು ಇರಬೇಕಿದೆ. ಆದರೆ, ಜಿಲ್ಲೆಯಲ್ಲಿ 97 ಮಂದಿ ವಿಶೇಷ ಶಿಕ್ಷಕರಿದ್ದು, ಹೆಚ್ಚುವರಿಯಾಗಿ 57 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪ್ರಾಥಮಿಕ ಶಾಲೆಗಳಿಗೆ 1,562 ಶಿಕ್ಷಕರ ಕೊರತೆ
ಜಿಲ್ಲೆಯಲ್ಲಿ ಸರಕಾರಿ ಪ್ರಾಥಮಿಕ ಶಾಲೆಗಳಿಗೆ 5,183 ಶಿಕ್ಷಕರ ಹುದ್ದೆಗಳು ಮಂಜೂರಾಗಿವೆ. ಆದರೆ, ಈ ಪೈಕಿ 3,621 ಹುದ್ದೆಗಳಷ್ಟೇ ಭರ್ತಿಯಾಗಿದ್ದು, 1,562 ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿವೆ.
ಜಿಲ್ಲೆಯಲ್ಲಿ ಬರೋಬ್ಬರಿ 1,916 ಶಿಕ್ಷಕರ ಹುದ್ದೆಗಳು ಖಾಲಿ ಇರುವ ಹಿನ್ನೆಲೆಯಲ್ಲಿ 1,046 ಮಂದಿ ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಅನುಮತಿ ನೀಡಿದ್ದಾರೆ. ಪ್ರೌಢಶಾಲೆಗಳಲ್ಲಿ ಖಾಲಿ ಇರುವ ವಿಷಯವಾರು ಶಿಕ್ಷಕರ ಹುದ್ದೆಗಳಿಗೆ 218 ಹಾಗೂ ಪ್ರಾಥಮಿಕ ಶಾಲೆಗಳಿಗೆ 827 ಅತಿಥಿ ಶಿಕ್ಷಕರ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ಜಿಲ್ಲೆಯಲ್ಲಿ 326 ಸಹ ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ಈ ಪೈಕಿ 218 ಅತಿಥಿ ಶಿಕ್ಷಕರ ತಾತ್ಕಾಲಿಕ ನೇಮಕಕ್ಕೆ ಸರಕಾರ ಅನುಮತಿ ನೀಡಿದೆ. ಹಾಗೆಯೇ ಸರಕಾರಿ ಪ್ರಾಥಮಿಕ ಶಾಲೆಗಳಿಗೆ 827 ಅತಿಥಿ ಶಿಕ್ಷಕರನ್ನು ಸರಕಾರ ಹಂಚಿಕೆ ಮಾಡಿದ್ದು, ಅಷ್ಟು ಶಿಕ್ಷಕರ ನೇಮಕ ನೇಮಕಕ್ಕೆ ಮಂಜೂರಾತಿ ದೊರೆತಿದೆ. ಶಿಕ್ಷಕರ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಮಂಡ್ಯ ಜಿಲ್ಲೆಯ ಡಿಡಿಪಿಐ ಎಸ್.ಟಿ.ಜವರೇಗೌಡ ಹೇಳಿದ್ದಾರೆ.












Click it and Unblock the Notifications