ಮಂಡ್ಯಕ್ಕೆ ನೂತನ ಜಿಲ್ಲಾಧಿಕಾರಿ ನೇಮಕ; ಸರ್ಕಾರದಿಂದ ಆದೇಶ
ಮಂಡ್ಯ, ಅಕ್ಟೋಬರ್, 21: ಮಂಡ್ಯ ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ ಡಾ. ಎಚ್.ಎನ್. ಗೋಪಾಲಕೃಷ್ಣ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಈ ಮೊದಲು ಜಿಲ್ಲಾಧಿಕಾರಿಯಾಗಿದ್ದ ಎಸ್. ಅಶ್ವತಿ ಅವರನ್ನು ವರ್ಗಾವಣೆ ಮಾಡಿರುವ ಸರ್ಕಾರ, ಅವರ ಸ್ಥಾನಕ್ಕೆ ಗೋಪಾಲಕೃಷ್ಣನನ್ನು ನೇಮಕ ಮಾಡಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತರಾಗಿದ್ದ ಡಾ. ಗೋಪಾಲಕೃಷ್ಣ ಅವರನ್ನು ಮಂಡ್ಯ ಜಿಲ್ಲಾಧಿಕಾರಿಯನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಎಸ್. ಅಶ್ವತಿ ಅವರನ್ನು ಪಶು ಸಂಗೋಪಾನಾ ಇಲಾಖೆ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ ಎಂದು ಸರ್ಕಾರದ ಆಡಳಿತ ಸುಧಾರಣಾ ಇಲಾಖೆ ಅಧೀನ ಕಾರ್ಯದರ್ಶಿ ಜೇಮ್ಸ್ ತರಕನ್ ಆದೇಶ ಹೊರಡಿಸಿದ್ದಾರೆ.
ಒಂದೇ ವರ್ಷದಲ್ಲಿ ಜಿಲ್ಲಾಧಿಕಾರಿ ವರ್ಗಾವಣೆ
ಇಂದು ಸರ್ಕಾರ ಹಲವಾರು ಜಿಲ್ಲೆಗಳಲ್ಲಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ಚಾಮರಾಜನಗರ ಜಿಲ್ಲಾಧಿಕಾರಿ ಆಗಿದ್ದ ಚಾರುಲತಾ ಸೋಮಲ್ ಅವರನ್ನು ಒಂದು ವರ್ಷದೊಳಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.ಚಾರುಲತಾ ಸೋಮಲ್ ಸ್ಥಾನಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರಾಗಿದ್ದ ಡಿ.ಎಸ್. ರಮೇಶ್ ಅವರನ್ನು ನೂತನ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇವರು 2010 ಬ್ಯಾಚ್‌ನ ಐಎಎಸ್ ಅಧಿಕಾರಿ ಆಗಿದ್ದಾರೆ. ಚಾರುಲತಾ ಸೋಮಲ್ ಅವರು 2021ರ ನವೆಂಬರ್ 16ರಿಂದ ಚಾಮರಾಜನಗರದ ಜಿಲ್ಲಾಧಿಕಾರಿಯಾಗಿ ಸೇವೆಯನ್ನು ಆರಂಭಿಸಿದ್ದರು. ಇದೀಗ ಅವರನ್ನು ಒಂದು ವರ್ಷದೊಳಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ದಕ್ಷಿಣ ಕನ್ನಡಕ್ಕೆ ನೂತನ ಜಿಲ್ಲಾಧಿಕಾರಿ
ಇನ್ನು ಆಡಳಿತದ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಜನರ ಮನಸ್ಸನ್ನು ಗೆದ್ದಿದ್ದ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅವರನ್ನು ಇದೀಗ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಡಾ.ರಾಜೇಂದ್ರ ಕೆ.ವಿ ಅವರನ್ನು ಮೈಸೂರು ಜಿಲ್ಲಾಧಿಕಾರಿಯಾಗಿ ತಕ್ಷಣದಿಂದಲೇ ಅಧಿಕಾರವಹಿಸುವಂತೆ ರಾಜ್ಯ ಸರ್ಕಾರ ಆದೇಶ ಮಾಡಿದೆ. ಮೈಸೂರು ಜಿಲ್ಲಾಧಿಕಾರಿ ಗೌತಮ್ ಬಗಾದಿ ಸ್ಥಾನವನ್ನು ಡಾ.ರಾಜೇಂದ್ರ ಕೆ.ವಿ ಅವರು ತುಂಬಲಿದ್ದಾರೆ. ಡಾ.ರಾಜೇಂದ್ರ ಕೆ.ವಿ ಅವರಿಂದ ತೆರವಾದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸ್ಥಾನವನ್ನು ತುಂಬಲು ಐಎಎಸ್ ಅಧಿಕಾರಿ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ತುಂಬಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ 130ನೇ ಜಲ್ಲಾಧಿಕಾರಿಯಾಗಿ ಡಾ.ರಾಜೇಂದ್ರ ಕೆ.ವಿ ಜುಲೈ 30, 2020ರಲ್ಲಿ ಅಧಿಕಾರ ವಹಿಸಿಕೊಂಡಿದ್ದರು. ಬಳಿಕ ಕೋವಿಡ್ ಸಂಕಷ್ಟದ ಕಾಲ, ಜಲಪ್ರಳಯ, ಗಲಭೆಯಂತಹ ಸಂದಿಗ್ಧ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಯಂತ್ರಿಸಿದ ಹೆಗ್ಗಳಿಕೆ ಡಾ.ರಾಜೇಂದ್ರ ಕೆ.ವಿ ಅವರದ್ದಾಗಿದೆ.











Click it and Unblock the Notifications