ಮಂಡ್ಯ: ವಿದ್ಯಾರ್ಥಿನಿಯರಿಗೆ ಅಶ್ಲೀಲ ಚಿತ್ರ ತೋರಿಸಿದ ಶಿಕ್ಷಕ
ಮಂಡ್ಯ, ಫೆಬ್ರವರಿ 08: ವಿದ್ಯೆ ಕಲಿಸುವ ಶಿಕ್ಷಕನೇ ತನ್ನ ವಿದ್ಯಾರ್ಥಿನಿಯರಿಗೆ ಅಶ್ಲೀಲ ಚಿತ್ರಗಳನ್ನು ತೋರಿಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ಕೆ.ಆರ್.ಪೇಟೆಯ ವಡ್ಡರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಭಾಸ್ಕರ್ ನಾಡಿಗೇರ್ ಎಂಬಾತ ಶಾಲೆಯ ವಿದ್ಯಾರ್ಥಿನಿಯರಿಗೆ ಅಶ್ಲೀಲ ಚಿತ್ರಗಳನ್ನು ತೋರಿಸಿದ್ದಾನೆ. ಗ್ರಾಮಸ್ಥರಿಗೆ ವಿಷಯ ತಿಳಿದು ಅವರೇ ಶಿಕ್ಷನನ್ನು ಹಿಗ್ಗಾ-ಮುಗ್ಗಾ ಥಳಿಸಿದ್ದಾರೆ.
ಶಿಕ್ಷಕ ಭಾಸ್ಕರ್ ನಾಡಿಗೇರ್ ಮಕ್ಕಳಿಗೆ ತನ್ನ ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರಗಳನ್ನು ತೋರಿಸುವ ಜೊತೆಗೆ ವಿದ್ಯಾರ್ಥಿನಿಯರ ಮೈ ಮುಟ್ಟಿ ಲೈಂಗಿಕ ದೌರ್ಜನ್ಯವನ್ನೂ ಎಸಗಿದ್ದಾನೆ.

ಶಿಕ್ಷಕನ ಕಾಮುಕ ವರ್ತನೆ ಬಗ್ಗೆ ಶಾಲಾ ಮಕ್ಕಳು ಪೋಷಕರ ಬಳಿ ದೂರಿದ್ದಾರೆ. ರೊಚ್ಚಿಗೆದ್ದ ಗ್ರಾಮಸ್ಥರು ಶಿಕ್ಷನನ್ನು ಹುಡುಕಿಕೊಂಡು ಶಾಲೆಗೆ ಬಂದಿದ್ದಾರೆ. ಇದೇ ಸಮಯದಲ್ಲಿ ಇಬ್ಬರು ವಿದ್ಯಾರ್ಥಿನಿಯರೊಂದಿಗೆ ಶಾಲಾ ಶೌಚಾಲಯದಲ್ಲಿ ಶಿಕ್ಷಕ ಸಿಕ್ಕಿಬಿದ್ದಿದ್ದಾನೆ. ಸಿಟ್ಟಿಗೆದ್ದ ಗ್ರಾಮಸ್ಥರು ಶಿಕ್ಷನನ್ನು ಹಿಗ್ಗಾ-ಮುಗ್ಗಾ ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.
ವಡ್ಡರಹಳ್ಳಿ ಸರ್ಕಾರಿ ಶಾಲೆಯಲ್ಲಿ ಇಬ್ಬರೇ ಶಿಕ್ಷಕರಿದ್ದಾರೆ. ಒಬ್ಬರು ಮುಖ್ಯ ಶಿಕ್ಷಕಿ ಮತ್ತೊಬ್ಬರು ಈ ಭಾಸ್ಕರ್ ನಾಡಿಗೇರ್. ಈ ಹಿಂದೆಯೂ ಭಾಸ್ಕರ್ ಬಗ್ಗೆ ದೂರುಗಳು ಬಂದಾಗ ಮುಖ್ಯ ಶಿಕ್ಷಕಿಗೆ ದೂರು ನೀಡಲಾಗಿತ್ತು. ಆದರೂ ಸಹ ಈತನ ಕಾಮಚೇಷ್ಟೆಗಳು ಕಡಿಮೆ ಆಗಿರಲಿಲ್ಲ.












Click it and Unblock the Notifications