ಮದ್ದೂರಿನ ಮಹಿಳಾ ಎಎಸ್ ಐ ವಸೂಲಿ ವೈಖರಿ ವೈರಲ್
ಮಂಡ್ಯ, ಜೂನ್ 23: ಮದ್ದೂರು ಪಟ್ಟಣದ ಸಂಚಾರ ಠಾಣೆ ವ್ಯಾಪ್ತಿಯ ಹೆದ್ದಾರಿ ಪಟ್ರೋಲ್ ಗಸ್ತು ವಾಹನದ ಕರ್ತವ್ಯದಲ್ಲಿದ್ದ ಎಎಸ್ ಐ ಶೋಭಾ ಎಂಬುವರು ವಾಹನಗಳ ಚಾಲಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎನ್ನಲಾದ ದೃಶ್ಯ ಈಗ ವೈರಲ್ ಆಗಿದೆ.
ಹೈವೇಯಲ್ಲಿ ವಾಹನಗಳಿಂದ ಮಾಮೂಲಿ ವಸೂಲಿ ಮಾಡುವುದು ಸಾಮಾನ್ಯವಾಗಿದೆ. ಪೊಲೀಸ್ ವಾಹನದಲ್ಲಿ ಕುಳಿತು ವಾಹನಗಳಿಗೆ ಇಂತಿಷ್ಟು ಎಂಬಂತೆ ಹಣ ವಸೂಲಿ ಮಾಡುತ್ತಿದ್ದು, ಲಾರಿ ಸೇರಿದಂತೆ ಇತರೆ ವಾಹನಗಳ ಚಾಲಕರು ಹಿಡಿ ಶಾಪ ಹಾಕಿಕೊಂಡು ಹಣ ನೀಡಿ ಹೋಗುತ್ತಾರೆ ಎಂಬುದು ಆರೋಪ.
ಇದೇ ರೀತಿ ವಸೂಲಿ ಮಾಡಲಾಗುತ್ತಿದ್ದರೂ ಇದೀಗ ಮಹಿಳಾ ಅಧಿಕಾರಿ ಎಎಸ್ ಐ ಶೋಭಾ ಚಾಲಕನೊಬ್ಬನಿಂದ 50 ರುಪಾಯಿ ಲಂಚ ಪಡೆಯುತ್ತಿದ್ದರು ಎನ್ನುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನ ಛಿ.. ಥೂ.. ಅನ್ನುತ್ತಿದ್ದಾರೆ.

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ತಪಾಸಣೆ ಮಾಡುತ್ತಾ ಚಾಲಕರಿಂದ ಹಣ ಪಡೆಯುವುದು ಹೊಸದೇನಲ್ಲ. ಎಂದಿನಂತೆ ಎಎಸ್ ಐ ಶೋಭಾ, ವಾಹನ ಸವಾರರಿಂದ ಹಣ ವಸೂಲಿ ಮಾಡುತ್ತಿರುವುದನ್ನು ಸೆರೆ ಹಿಡಿದ ಯಾರೋ ಮೊಬೈಲ್ ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು ಈಗ ಸುದ್ದಿಯಾಗಿದೆ.
ಸಾಮಾನ್ಯವಾಗಿ ಪುರುಷರು ಲಂಚ ಪಡೆಯುತ್ತಾರೆ, ವಸೂಲಿ ಮಾಡುತ್ತಾರೆ. ಆದರೆ ಮಹಿಳೆಯರ ಬಗ್ಗೆ ಜನ ಹೆಚ್ಚಿನ ಗೌರವ ಕೊಡುತ್ತಾರೆ. ಮತ್ತು ಅವರು ಲಂಚ ಪಡೆಯಲ್ಲ ಎಂಬ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ. ಆದರೆ ಈಗ ಮಹಿಳಾ ಅಧಿಕಾರಿಯೇ ಲಂಚ ಪಡೆದಿರುವುದು ಅಚ್ಚರಿಗೆ ಕಾರಣವಾಗಿದೆ.
ಮಂಡ್ಯ ಜಿಲ್ಲೆಯ ಎಸ್ಪಿ ರಾಧಿಕಾ ಅವರು ಲಂಚಬಾಕ ಪೊಲೀಸರ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications