ಕೆ.ಆರ್.ಎಸ್. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಕ್ಕೆ ಕಾನೂನು ಹೋರಾಟ
ಮಂಡ್ಯ, ಜುಲೈ, 29: ಕೆಆರ್‌ಎಸ್ ಅಣೆಕಟ್ಟು ಸುತ್ತ 20 ಕಿ.ಮೀ. ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯನ್ನು ಶಾಶ್ವತವಾಗಿ ನಿಷೇಧಿಸಲು ರೈತಪರ ಸಂಘಟನೆಗಳು ಮುಂದಾಗಿವೆ. ಕಾನೂನು ಹೋರಾಟ ನಡೆಸಲು ರೈತಸಂಘ, ಪ್ರಗತಿಪರ ಸಂಘಟನೆಗಳು ಶುಕ್ರವಾರ ನಡೆಸಿದ ಸಭೆಯಲ್ಲಿ ನಿರ್ಧಾರ ಕೈಗೊಂಡವು.
ನಗರದ ಗಾಂಧಿ ಭವನದಲ್ಲಿ ಗಣಿಗಾರಿಕೆ ನಿಷೇಧಿಸಿ ಕೆಆರ್‌ಎಸ್ ಉಳಿಸಿ ಎನ್ನುವ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಅನೇಕ ರೈತ ಮುಖಂಡರು ಭಾಗಿಯಾಗಿದ್ದರು. ಗಣಿಗಾರಿಕೆ ವಿಷಯ ಬಂದಾಗ ಅಷ್ಟೇ ಹೋರಾಟ ನಡೆಸುವುದರಿಂದ ಏನು ಪ್ರಯೋಜನವಿಲ್ಲ. ಇದನ್ನು ಜನರ ಹೋರಾಟವಾಗಿ ರೂಪಾಂತರಿಸಬೇಕು. ಒಂದೆಡೆ ಕೆಆರ್‌ಎಸ್ ಉಳಿವಿಗೆ ಜನಪರವಾಗಿ ಹೋರಾಟ ನಡೆಸುತ್ತಾ, ಇನ್ನೊಂದೆಡೆ ಕಾನೂನು ಹೋರಾಟ ನಡೆಸುವುದರಿಂದ ಇದಕ್ಕೊಂದು ತಾರ್ಕಿಕ ಅಂತ್ಯ ಕಾಣಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಗಣಿಗಾರಿಕೆಯಿಂದ ಅಣೆಕಟ್ಟೆಗೆ ಅಪಾಯವಿರುವುದರ ಬಗ್ಗೆ ಮುಂಚೆಯೇ ಸೂಚನೆ ಇತ್ತು. 2018ರ ಸೆಪ್ಟೆಂಬರ್ 25ರಂದು ಸಂಭವಿಸಿದ ಗಣಿಸ್ಪೋಟ ಕುರಿತು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನೀಡಿದ ವರದಿಯಿಂದ ವೈಜ್ಞಾನಿಕವಾಗಿ ಮುನ್ಸೂಚನೆ ನೀಡಿದೆ. ಅದನ್ನು ಮತ್ತೆ ತಿಳಿಯುವ ಅಗತ್ಯವಿಲ್ಲ. ಅದಕ್ಕಾಗಿ ಟ್ರಯಲ್ ಬ್ಲಾಸ್ಟ್ ನಡೆಸಲು ಮತ್ತೆ ಜಿಲ್ಲಾಡಳಿತ ಯಾವ ಕಾರಣಕ್ಕೂ ಅನುಮತಿ ನೀಡಬಾರದು ಎಂದು ರೈತ ಮುಖಂಡರು ಒತ್ತಾಯಿಸಿದರು.

ರೈತರ ಹಿತಕ್ಕೆ ಕುತ್ತು ತಂದ್ರಾ ಅಧಿಕಾರಿಗಳು?
ಗಣಿ ಧಣಿಗಳು ನೀಡುವ ಕಮಿಷನ್ ಹಣದ ಆಸೆಗೆ ಅಕಾರಿಗಳು ಬಲಿಯಾಗಿದ್ದಾರೆ. ಅಣೆಕಟ್ಟೆಗೆ ಅಪಾಯವಿರುವ ಬಗ್ಗೆ ಸತ್ಯ ಸಂಗತಿಗಳನ್ನು ನ್ಯಾಯಾಲಯಕ್ಕೆ ನೀಡದೆ ಮರೆಮಾಚಿದ್ದಾರೆ. ಕೆಳಹಂತದ ನ್ಯಾಯಾಲಯ ನಿಷೇಧಾಜ್ಞೆ ಅರ್ಜಿಯನ್ನು ವಜಾಗೊಳಿಸಿದ್ದರೂ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬಹುದಿತ್ತು. ಅಧಿಕಾರಿಗಳು ಆ ಕೆಲಸ ಮಾಡದೆ ಗಣಿ ಮಾಲೀಕರ ಹಿತ ಕಾಪಾಡುವುದಕ್ಕೆ ಹೆಚ್ಚಿನ ಒಲವು ತೋರುತ್ತಿದ್ದಾರೆ. ಅಣೆಕಟ್ಟು ರಕ್ಷಣೆ ಮಾಡುವ ಬಗ್ಗೆ ಎಳ್ಳಷ್ಟೂ ಕಾಳಜಿ ಇಲ್ಲ ಎಂದು ರೈತ ಮುಖಂಡ ಪ್ರಸನ್ನಗೌಡ ಆರೋಪಿಸಿದರು.

ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ
ಪಾಂಡವಪುರ ತಾಲೂಕು ಅಧ್ಯಕ್ಷ ಹರೀಶ್ ಕೈಕುಳಿಯಲ್ಲಿ ಗಣಿ ಕಲಸ ಮಾಡುವವರಿಗೆ ನಾವು ಯಾವತ್ತೂ ತೊಂದರೆ ಕೊಟ್ಟಿಲ್ಲ. ಈಗಲೂ ನಾವು ಅವರ ಪರವಾಗಿದ್ದೇವೆ. ಹೋರಾಟದ ದಿಕ್ಕು ತಪ್ಪಿಸಲು, ಹೋರಾಟಗಾರರಿಗೆ ಮಸಿ ಬಳಿಯಲು ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾದ ಕೂಲಿ ಕಾರ್ಮಿಕನ ಶವವನ್ನು ಮರಕ್ಕೆ ನೇತು ಹಾಕಿ ಚಿಲ್ಲರೆ ರಾಜಕಾರಣ ಮಾಡಿದ್ದಾರೆ. ನಮ್ಮದು ಸ್ವಾರ್ಥದ ಹೋರಾಟವಲ್ಲ. ಅಣೆಕಟ್ಟು ಉಳಿವಿಗೆ ನಮ್ಮ ಮೊದಲ ಆದ್ಯತೆ. ಕೈಕುಳಿ ಕೆಲಸ ಮಾಡುವ ಕಾರ್ಮಿಕರಿಗೆ ಸರ್ಕಾರ ಬದಲಿ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.

ಗಣಿಗಾರಿಗೆ ನಿಷೇಧಕ್ಕೆ ಒತ್ತಾಯ
ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯಿಂದ ಗಣಿಗಾರಿಕೆಯಿಂದ ಕೆಆರ್‌ಎಸ್‌ಗೆ ಅಪಾಯವಿರುವುದನ್ನು ತಿಳಿಯಬಹುದು. ಬೇಬಿ ಬೆಟ್ಟ ಮಹಾರಾಜರ ಆಸ್ತಿ. ಅಧಿಕಾರಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ಗೊಂದಲ ಮೂಡಿಸಿದ್ದಾರೆ. ಗಣಿ ಮಾಲೀಕರು ಈ ಪ್ರದೇಶದಲ್ಲಿ ಕ್ರಷರ್, ಗಣಿಗಾರಿಕೆಗೆ ಅನುಮತಿ ಪಡೆದು, ಬ್ಯಾಂಕ್ ಸಾಲದ ಜೊತೆಗೆ ಸರ್ಕಾರದಿಂದ ಸಬ್ಸಿಡಿಯನ್ನೂ ಪಡೆದುಕೊಂಡಿದ್ದಾರೆ. ಕೆಆರ್‌ಎಸ್ ಮಾತ್ರವಲ್ಲದೆ ಕನಗನಮರಡಿ ಬಳಿ ನಡೆಯುತ್ತಿರುವ ಗಣಿಗಾರಿಕೆಯೂ ನಿಲ್ಲಬೇಕು. ಅಲ್ಲಿಂದ 5 ಕಿ.ಮೀ. ವ್ಯಾಪ್ತಿಯಲ್ಲಿ ವಿಶ್ವೇಶ್ವರಯ್ಯ ನಾಲೆ, ಅಕ್ವಿಡೆಕ್ ನಾಲೆ, ಹುಲಿಕೆರೆ ಸುರಂಗ ಮಾರ್ಗವಿದ್ದು, ಅವುಗಳಿಗೂ ಅಪಾಯವಿದೆ ಎಂದು ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಹೇಳಿದರು.

ಅನುಮಾನಕ್ಕೆ ಕಾರಣವಾದ ದೇವೇಗೌಡರ ಮೌನ
ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಮಾತನಾಡಿ, ಆಳುವ ಸರ್ಕಾರಗಳು ಜನಾಭಿಪ್ರಾಯಕ್ಕೆ ಮನ್ನಣೆಯನ್ನೇ ನೀಡುತ್ತಿಲ್ಲ. ತಜ್ಞರಿಂದ ಸಲಹೆ-ಮಾರ್ಗದರ್ಶನ ಪಡೆದು ಕೆಆರ್‌ಎಸ್ ಸುತ್ತ ಗಣಿಗಾರಿಕೆ ನಿಷೇಧಕ್ಕೆ ಮುಂದಾಗುತ್ತಿಲ್ಲ. ಈ ವಿಷಯವಾಗಿ ಮುಖ್ಯಮಂತ್ರಿಗಳನ್ನು ನಾವೇ ಭೇಟಿಯಾಗಿ ವೈಜ್ಞಾನಿಕ ಅಂಶಗಳನ್ನು ಮನವರಿಕೆ ಮಾಡಿಕೊಡಬೇಕು. ವಾಸ್ತವ ವಿಚಾರವನ್ನು ಅವರಿಗೆ ತಿಳಿಸಿಕೊಟ್ಟು ಗಣಿಗಾರಿಕೆ ಶಾಶ್ವತ ನಿಷೇಧಕ್ಕೆ ಪ್ರಯತ್ನಿಸಬೇಕಿದೆ.
ನಾನು ಮಣ್ಣಿನ ಮಗ, ರೈತಪರ, ಜನಪರ ರಾಜಕಾರಣಿ ಎಂದು ಹೇಳಿಕೊಳ್ಳುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹೋರಾಟಕ್ಕಿಳಿಯದಿರುವುದು ಹಲವು ಅನುಮಾನಗಳನ್ನು ಮೂಡಿಸಿದೆ. ಹಾಸನಕ್ಕೆ ವಿಮಾನ ನಿಲ್ದಾಣ ಮಂಜೂರಿಗೆ ಪ್ರಧಾನಿ ಮೋದಿ ಅವರನ್ನು ಭೇಟಿಯಾಗುವ ದೇವೇಗೌಡರು, ಕೆಆರ್‌ಎಸ್ ಅಣೆಕಟ್ಟು ರಕ್ಷಣೆ ಮಾಡುವಂತೆ ಗಮನ ಸೆಳೆಯುತ್ತಿಲ್ಲ ಏಕೆ? ಗಣಿಗಾರಿಕೆ ಸ್ಥಳದಲ್ಲಿ ಪ್ರತಿದಿನ ಜಿಲಿಟಿನ್ ಕಡ್ಡಿಗಳ ಸ್ಫೋಟದ ಮಾಹಿತಿಯನ್ನು ಡಿವೈಎಸ್‌ಪಿಗೆ ನೀಡಬೇಕು. ಅದನ್ನು ನೀಡಲಾಗುತ್ತಿದೆಯೇ ಇಲ್ಲವೇ ಎನ್ನುವುದನ್ನು ಪರಿಶೀಲಿಸಬೇಕು ಎಂದು ಮೇಳಾಪುರ ಸ್ವಾಮಿಗೌಡ ಒತ್ತಾಯಿಸಿದರು. ಸಭೆಯಲ್ಲಿ ಕೆ.ಆರ್.ಪೇಟೆ ರೈತ ಮುಖಂಡರಾದ ಕೆ.ಆರ್.ಜಯರಾಂ, ರಾಜೇಗೌಡ, ಮಂಡ್ಯದ ಎಸ್.ಸಿ.ಮಧುಚಂದನ್, ಬೋರೇಗೌಡ, ಸೇರಿದಂತೆ ಮತ್ತಿತರರು ಭಾಗಿಯಾಗಿದ್ದರು.











Click it and Unblock the Notifications