ನನ್ನ ಸೋಲಿಗೆ ಮಂಡ್ಯ ಸಂಸದೆ ಸುಮಲತಾ ಕಾರಣ: ಮೇಲುಕೋಟೆ ಬಿಜೆಪಿ ಅಭ್ಯರ್ಥಿ ಗಂಭೀರ ಆರೋಪ
ಮೇಲುಕೋಟೆ, ಮೇ 23: ಮಂಡ್ಯ ಜಿಲ್ಲೆಯ ಮೇಲುಕೋಟೆ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿರುವ ಬಿಜೆಪಿ ಅಭ್ಯರ್ಥಿ ಡಾ.ಇಂದ್ರೇಶ್ ಅವರು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಸೋಲಿಗೆ ಸುಮಲತಾ ಅವರೇ ಕಾರಣವೆಂದು ಹೇಳಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿರುವ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಂಸದೆ ಸುಮಲತಾ ಅವರು ಸಹಾಯ ಮಾಡಿದ್ದಾರೆ ಎಂದು ಇಂದ್ರೇಶ್ ಆರೋಪಿಸಿದ್ದಾರೆ.

' ಚುನಾವಣೆಗೂ ಮುನ್ನ ಸುಮಲತಾ ಅಂಬರೀಶ್ ಬಿಜೆಪಿಗೆ ಬೆಂಬಲ ನೀಡಿದ್ದರು. ಆದರೆ, ಚುನಾವಣೆಗೆ ಕೇವಲ 6-7 ದಿನ ಇರುವಾಗಲೇ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಗೆಲ್ಲಿಸಬೇಕು ಎಂದು ಹೇಳಿಕೆ ನೀಡಿದ್ದರು. ಅವರ ಹೇಳಿಕೆಯನ್ನು ಪಕ್ಷದ ಕಾರ್ಯಕರ್ತರೊಂದಿಗೆ ನಾನು ವಿರೋಧಿಸುತ್ತೇನೆ. ಮುಂದಿನ ದಿನಗಳಲ್ಲಿ ಪಕ್ಷದ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸುತ್ತೇನೆ' ಎಂದೂ ಹೇಳಿದ್ದಾರೆ.
ಗುಪ್ತಚರ ವರದಿ ಪ್ರಕಾರ ನನಗೆ 38,000 ಮತಗಳು ಬರಬೇಕಿತ್ತು. ಪಾಂಡವಪುರದಲ್ಲಿ ಸುಮಲತಾ ಹೇಳಿಕೆ ಬಳಿಕ ನನ್ನ ಕ್ಷೇತ್ರದಲ್ಲಿ ದಿಢೀರ್ ಬದಲಾವಣೆಯಾಗಿದೆ. ಸಿ.ಎಸ್.ಪುಟ್ಟರಾಜು ಮತ್ತೆ ಆಯ್ಕೆಯಾಗಬಹುದು ಎಂಬ ಭಯ ಜನರಲ್ಲಿತ್ತು. ಹಾಗಾಗಿ ನನ್ನ ಮತಗಳ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ ಎಂದು ಇಂದ್ರೇಶ್ ಹೇಳಿದರು.

ಸುಮಲತಾ ಈ ವರ್ಷದ ಮಾರ್ಚ್‌ನಲ್ಲಿ ಬಿಜೆಪಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದರು ಮತ್ತು ಪಕ್ಷದ ಅಭ್ಯರ್ಥಿಗಳ ಪರವಾಗಿ ಮಂಡ್ಯದ ಕೆಲವು ಭಾಗಗಳಲ್ಲಿ ಪ್ರಚಾರ ಮಾಡಿದ್ದರು.
ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸರ್ವೋದಯ ಕರ್ನಾಟಕ ಪಕ್ಷ (ಎಸ್‌ಕೆಪಿ) ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರು ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಅವರನ್ನು 10,862 ಮತಗಳ ಅಂತರದಿಂದ ಸೋಲಿಸಿದ್ದಾರೆ. ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಕಾಂಗ್ರೆಸ್ ಬೆಂಬಲ ನೀಡಿತ್ತು.
ಸುಮಲತಾ ಅವರು 2019 ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ ಎಸ್‌ಕೆಪಿ ಅವರನ್ನು ಬೆಂಬಲಿಸಿತ್ತು. ಇಂದ್ರೇಶ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸುಮಲತಾ ಆಪ್ತ ಬೇಳೂರು ಸೋಮಶೇಖರ್, ಸುಮಲತಾ ವಿರುದ್ಧ ಪಿತೂರಿ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಸುಮಲತಾ ಬಿಜೆಪಿಗೆ ಬೆಂಬಲ ನೀಡುವ ಮುನ್ನ ಕೆಲವು ಷರತ್ತುಗಳನ್ನು ಹಾಕಿದ್ದರು. ರೈತ ಸಂಘಟನೆಗಳು ಬೆಂಬಲ ನೀಡಿದ್ದರಿಂದ ದರ್ಶನ್ ಪುಟ್ಟಣ್ಣಯ್ಯ ವಿರುದ್ಧ ಪ್ರಚಾರ ಮಾಡುವುದಿಲ್ಲ ಎಂದು ಹೇಳಿದ್ದರು. ಅವರು ದರ್ಶನ್ ಪುಟ್ಟಣ್ಣಯ್ಯನವರ ಪರವಾಗಿ ಎಲ್ಲಿಯೂ ನೇರವಾಗಿ ಪ್ರಚಾರ ಮಾಡಿಲ್ಲ. ಅವರು ಪ್ರಚಾರ ಮಾಡಿದ್ದರೆ ಹೆಚ್ಚು ಅಂತರದಿಂದ ಗೆಲ್ಲುತ್ತಿದ್ದರು. ಈ ಬಗ್ಗೆ ಇಂದ್ರೇಶ್ ಮಾತನಾಡುವುದು ಸರಿಯಲ್ಲ. ಇಂದ್ರೇಶ್ ಹೇಳಿಕೆ ಹಿಂದೆ ಕೆಲವರ ಕೈವಾಡವಿದೆ ಎಂದು ಸೋಮಶೇಖರ್ ಹೇಳಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ 5, ಜೆಡಿಎಸ್ 1 ಹಾಗೂ ಎಸ್‌ಕೆಪಿ 1 ಸ್ಥಾನ ಗೆದ್ದಿವೆ.












Click it and Unblock the Notifications