ಕೊಕ್ಕರೆ ಬೆಳ್ಳೂರಲ್ಲಿ ನಕಲಿ ವೈದ್ಯೆ ಪತ್ತೆ:ದಾಳಿ ವಿಷಯ ತಿಳಿದು ಪರಾರಿ
ಮದ್ದೂರು, ಸೆಪ್ಟೆಂಬರ್.28:ತಾನು ವೈದ್ಯೆ ಎನ್ನುತ್ತಾ ಮನೆಯಲ್ಲೇ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ನಕಲಿ ವೈದ್ಯೆ ಮನೆ ಮೇಲೆ ತಹಸೀಲ್ದಾರ್ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳ ದಾಳಿ ನಡೆಸಿರುವ ಘಟನೆ ತಾಲೂಕಿನ ಕೊಕ್ಕರೆ ಬೆಳ್ಳೂರಿನಲ್ಲಿ ನಡೆದಿದೆ.
ಆದರೆ ದಾಳಿಯ ವಿಷಯ ತಿಳಿಯುತ್ತಿದ್ದಂತೆಯೇ ವೈದ್ಯೆ ನಾಪತ್ತೆಯಾಗಿದ್ದಾರೆ. ಭಾರತಿ ಎಂಬಾಕೆಯೇ ನಕಲಿ ವೈದ್ಯೆಯಾಗಿದ್ದು, ಈಕೆ ಕೊಕ್ಕರೆ ಬೆಳ್ಳೂರಿನ ತನ್ನ ಮನೆಯಲ್ಲಿ ಗ್ರಾಮದ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಳು ಎನ್ನಲಾಗಿದೆ.
ಆದರೆ ಕಳೆದ ಐದು ವರ್ಷಗಳಿಂದ ಈಕೆ ಚಿಕಿತ್ಸೆ ನೀಡುತ್ತಿದ್ದರೂ ಯಾರಿಗೂ ಆಕೆ ನಕಲಿ ವೈದ್ಯೆ ಎಂಬ ಸಂಶಯವೇ ಬಂದಿರಲಿಲ್ಲ. ಈ ನಡುವೆ ಆಕೆ ವೈದ್ಯೆ ಅಲ್ಲ ನಕಲಿ ವೈದ್ಯೆ ಎಂಬುದು ಕೆಲವರ ಗಮನಕ್ಕೆ ಬಂದಿದೆ. ಹೀಗಾಗಿ ಆರೋಗ್ಯ ಇಲಾಖೆ ಹಾಗೂ ತಹಸೀಲ್ದಾರ್ ಕಚೇರಿಗೆ ಮಾಹಿತಿ ನೀಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಮದ್ದೂರು ತಹಸೀಲ್ದಾರ್ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಮನೆ ಮೇಲೆ ದಾಳಿ ಮಾಡಿದ್ದಾರೆ. ಆದರೆ ಅದು ಹೇಗೋ ದಾಳಿಯ ಸುಳಿವು ದೊರೆತ ಹಿನ್ನಲೆಯಲ್ಲಿ ಭಾರತಿ ನಾಪತ್ತೆಯಾಗಿದ್ದಾರೆ.

ಆದರೆ ದಾಳಿ ನಡೆಸಿದ ಅಧಿಕಾರಿಗಳು ಮನೆ ಪರಿಶೀಲನೆ ನಡೆಸಿದಾಗ ವೈದ್ಯಕೀಯ ಪರಿಕರಗಳು, ಅವಧಿ ಮೀರಿದ ಔಷಧ ಮತ್ತು ಮಾತ್ರೆಗಳು ಪತ್ತೆಯಾಗಿವೆ. ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆ ಮರೆಸಿಕೊಂಡಿರುವ ನಕಲಿ ವೈದ್ಯೆ ಭಾರತಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.












Click it and Unblock the Notifications