ಕೊಡಗಿನ ಕಗ್ಗೋಡ್ಲುವಿನಲ್ಲಿ ಕೆಸರುಗದ್ದೆ ಒಲಂಪಿಕ್ಸ್: ಏನಿದರ ವಿಶೇಷ..?

ಮಡಿಕೇರಿ, ಆಗಸ್ಟ್‌ 09: ಕೊಡಗಿನಲ್ಲಿ ಈಗಾಗಲೇ ಹಲವು ಕಡೆಗಳಲ್ಲಿ ಕೆಸರುಗದ್ದೆ ಕ್ರೀಡಾಕೂಟ ನಡೆಯುತ್ತಿದ್ದು, ಐತಿಹಾಸಿಕ ರಾಜ್ಯಮಟ್ಟದ ಕೆಸರುಗದ್ದೆ ಕ್ರೀಡಾಕೂಟವು ಮಡಿಕೇರಿ ಸಮೀಪದ ಕಗ್ಗೋಡ್ಲುವಿನಲ್ಲಿ ಆ.10ರಂದು ನಡೆಯಲಿದೆ. ಹೀಗಾಗಿ ಸರ್ವ ರೀತಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಸುರಿಯುವ ಮಳೆಯಲ್ಲಿ ಮೊಣಕಾಲು ತನಕ ನೀರು ತುಂಬಿದ ಕೆಸರುಗದ್ದೆಯಲ್ಲಿ ಬಿದ್ದೇಳಲು ಕ್ರೀಡಾಪಟುಗಳು ಸಜ್ಜಾಗುತ್ತಿದ್ದಾರೆ.

ಪ್ರಕೃತಿ ರಮಣೀಯ ತಾಣವಾಗಿರುವ ಕಗ್ಗೋಡ್ಲು ಗ್ರಾಮವು ಮಡಿಕೇರಿಯಿಂದ ಎಂಟು ಕಿ.ಮೀ, ದೂರದಲ್ಲಿದೆ. ಮಡಿಕೇರಿಯಿಂದ ಮೂರ್ನಾಡು ಕಡೆಗಿನ ರಸ್ತೆಯಲ್ಲಿ ಸಾಗುವಾಗ ಈ ಊರು ಸಿಗುತ್ತದೆ. ಇದೀಗ ಕೆಸರು ಗದ್ದೆ ಕ್ರೀಡಾಕೂಟದಿಂದಾಗಿಯೇ ದೇಶವಿದೇಶಗಳಲ್ಲಿ ಗಮನಸೆಳೆಯುತ್ತಿದೆ. ಇಲ್ಲಿನ ವಿಶಾಲಗದ್ದೆ ಬಯಲು, ಸುತ್ತಲೂ ಆವರಿಸಿಕೊಂಡಿರುವ ಕಾಫಿ, ಅಡಿಕೆ ತೋಟಗಳು, ದೂರದ ಬೆಟ್ಟಗುಡ್ಡಗಳು ಪ್ರಕೃತಿ ಪ್ರಿಯರಿಗೆ ಮುದ ನೀಡುತ್ತದೆ.

What Is The Speciality Of Kodagu Kaggodlu Kesargadde Olympics

ಮಳೆಯಿರಲಿ ಬಿಸಿಲಿರಲಿ ಪ್ರತಿ ವರ್ಷದ ಸ್ವಾತಂತ್ರೋತ್ಸವದ ಹಿಂದಿನ ಶನಿವಾರ ಇಲ್ಲಿ ಕೆಸರುಗದ್ದೆ ಕ್ರೀಡಾಕೂಟವನ್ನು ನಡೆಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಆದರೆ ಜತೆಗೆ ಇಲ್ಲಿ ನಡೆಯುವ ಹತ್ತಾರು ಕ್ರೀಡೆಗಳನ್ನು ವೀಕ್ಷಿಸಲು ಯಾವುದೇ ಗ್ಯಾಲರಿಗಳಿಲ್ಲ. ಗದ್ದೆ ಏರಿ, ರಸ್ತೆ ಬದಿಯಲ್ಲಿ ನಿಂತುಕೊಂಡೇ ವೀಕ್ಷಿಸಬೇಕು. ಈ ಕ್ರೀಡಾಕೂಟ ಕೊಡಗಿನ ಮಟ್ಟಿಗೆ ಕೆಸರುಗದ್ದೆ ಒಲಂಪಿಕ್ಸ್ ಎಂದರೂ ತಪ್ಪಾಗಲಾರದು.

ಕೆಸರುಗದ್ದೆ ಕ್ರೀಡಾಕೂಟದ ಮೂಲ ಕಗ್ಗೋಡ್ಲು

ಇವತ್ತು ಹಲವೆಡೆಗಳಲ್ಲಿ ಕೆಸರುಗದ್ದೆ ಕ್ರೀಡಾಕೂಟ ನಡೆಯುತ್ತಿದ್ದರೆ ಅದಕ್ಕೆ ಮೂಲ ಕಗ್ಗೊಡ್ಲುವಿನ ಕೆಸರುಗದ್ದೆ ಕ್ರೀಡಾಕೂಟ ಎಂದರೆ ತಪ್ಪಾಗಲಾರದು ಕಳೆದ ಮೂರ್ನಾಲ್ಕು ದಶಕಗಳಿಂದ ಕೆಸರುಗದ್ದೆ ಕ್ರೀಡಾಕೂಟ ನಡೆಯುತ್ತಾ ಬರುತ್ತಿದೆಯಾದರೂ ಭೂಕುಸಿತ, ಕೊರೋನಾ ಕಾರಣಗಳಿಂದ ಒಂದೆರಡು ವರ್ಷಗಳ ಕಾಲ ಕ್ರೀಡಾಕೂಟ ನಡೆದಿಲ್ಲವಾದರೂ ಅದನ್ನು ಹೊರತುಪಡಿಸಿ ಉಳಿದಂತೆ ವರ್ಷದಿಂದ ವರ್ಷಕ್ಕೆ ಹಲವು ಕ್ರೀಡೆಗಳನ್ನು ಸೇರ್ಪಡೆಗೊಳಿಸುತ್ತಾ ಮುನ್ನಡೆಯುತ್ತಿದೆ. ಈ ವರ್ಷ ಮೂವತ್ತೆರಡನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟವನ್ನು ನಡೆಸಲಾಗುತ್ತಿದೆ.

ಇಲ್ಲಿವರೆಗೆ ಸುರಿದ ಮಳೆ ಇದೀಗ ಬಿಡುವುಕೊಟ್ಟಂತೆ ಕಾಣಿಸುತ್ತಿದೆ. ಹೀಗಾಗಿ ಮೈಕೊಡವಿಕೊಂಡು ಮೇಲೆದ್ದ ಜನ ದಿನನಿತ್ಯದ ಜಂಜಾಟವನ್ನು ಬದಿಗೆ ಸರಿಸಿ ಕ್ರೀಡೆಯಲ್ಲಿ ಭಾಗವಹಿಸುವ ಸಲುವಾಗಿ ಸಿದ್ಧತೆ ನಡೆಸಿದರೆ, ಇನ್ನುಳಿದವರು ಕ್ರೀಡೆಗಳನ್ನು ವೀಕ್ಷಿಸಿ ಮನರಂಜನೆ ಪಡೆಯಲು ತಯಾರಾಗುತ್ತಿದ್ದಾರೆ. ಅಲ್ಲದೆ ಎಲ್ಲೂ ಆಗಮಿಸಿ ಬೆಳಿಗ್ಗೆಯಿಂದ ಸಂಜೆವರೆಗೆ ಕ್ರೀಡಾಕೂಟಗಳನ್ನು ವೀಕ್ಷಿಸಿ ಹಿಂತಿರುಗುತ್ತಾರೆ. ಈಗಾಗಲೇ ಕ್ರೀಡಾಪಟುಗಳು ಇಲ್ಲಿ ನಡೆಯುವ ವಿವಿಧ ಸ್ಪರ್ಧೆಗಳಿಗೆ ಭಾಗವಹಿಸಿ ಗೆಲುವು ಸಾಧಿಸುವ ಸಲುವಾಗಿ ತಾಲೀಮು ಆರಂಭಿಸಿದ್ದಾರೆ.

ಸಾಂಪ್ರದಾಯಿಕ ನಾಟಿ ಓಟದ ಮುಂದುವರೆದ ಭಾಗ

ಇನ್ನು ಕೊಡಗಿನಲ್ಲಿ ವರ್ಷಪೂರ್ತಿ ಒಂದಲ್ಲ ಒಂದು ಕ್ರೀಡಾಕೂಟಗಳು ನಡೆಯುತ್ತಲೇ ಇರುತ್ತವೆ. ಇದು ಇಲ್ಲಿನವರು ವೀರರು, ಶೂರರು ಮಾತ್ರವಲ್ಲ ಕ್ರೀಡಾಪ್ರೇಮಿಗಳೂ ಕೂಡ ಹೌದು ಎಂಬುವುದಕ್ಕೆ ನಿದರ್ಶನವಾಗಿವೆ. ಬೇಸಿಗೆಯಲ್ಲಿ ಹಾಕಿ, ಫುಟ್ಭಾಲ್, ಕ್ರಿಕೆಟ್, ವಾಲಿಬಾಲ್ ಹೀಗೆ ವಿವಿಧ ಪಂದ್ಯಾವಳಿಯನ್ನು ಆಯೋಜಿಸಿ ಖುಷಿಪಡುವ ಜನ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಕೆಸರುಗದ್ದೆ ಕ್ರೀಡಾಕೂಟಗಳತ್ತ ಮುಖ ಮಾಡುತ್ತಾರೆ.

What Is The Speciality Of Kodagu Kaggodlu Kesargadde Olympics

ಮಳೆಗಾಲದಲ್ಲಿ ಮನೆಯಿಂದ ಹೊರಬರುವುದೇ ಕಷ್ಟವಾಗಿರುವ ಸಂದರ್ಭದಲ್ಲಿಯೂ ಕೈ ಕಟ್ಟಿ ಕೂರದೆ. ಭತ್ತದ ಗದ್ದೆಯನ್ನೇ ಮೈದಾನವನ್ನಾಗಿಸಿಕೊಂಡು ಕೆಸರುಗದ್ದೆ ಕ್ರೀಡೆಗಳನ್ನು ಆಯೋಜಿಸಿ ಆನಂದಿಸುವುದು ಇಲ್ಲಿನ ವಿಶೇಷತೆಯಾಗಿದೆ. ಇನ್ನು ಈ ಕೆಸರುಗದ್ದೆ ಕ್ರೀಡಾಕೂಟ ಆರಂಭವಾಗಿದ್ದು ಕೂಡ ಆಕಸ್ಮಿಕವೇ.. ಇದು ಇಲ್ಲಿನ ಸಾಂಪ್ರದಾಯಿಕ ನಾಟಿ ಓಟದ ಮುಂದುವರೆದ ಭಾಗವಾಗಿದೆ. ಮೊದಲೆಲ್ಲ ನಾಟಿಯಾದ ಬಳಿಕ ನಾಟಿ ನೆಟ್ಟ ಗದ್ದೆಯಲ್ಲಿ ಓಟ ಏರ್ಪಡಿಸಿ ಗೆದ್ದವರನ್ನು ನಗದು, ಬಾಳೆಗೊನೆ, ತೆಂಗಿನಕಾಯಿ, ಎಲೆಅಡಿಕೆ ಮೊದಲಾದವುಗಳನ್ನು ನೀಡಿ ಪ್ರೋತ್ಸಾಹಿಸಲಾಗುತ್ತಿತ್ತು. ಇದರಲ್ಲಿ ಎಲ್ಲರಿಗೂ ಪಾಲ್ಗೊಳ್ಳಲು ಸಾಧ್ಯವಾಗುತ್ತಿರಲಿಲ್ಲ.

ವರ್ಷದಿಂದ ವರ್ಷಕ್ಕೆ ಕ್ರೀಡೆಗಳ ಸೇರ್ಪಡೆ

ತಲತಲಾಂತರದಿಂದ ಕಗ್ಗೋಡ್ಲುವಿನ ಸಿ.ಬಿ,ದೇವಯ್ಯ ಅವರ ಭತ್ತದ ಗದ್ದೆ ಬಯಲಿನಲ್ಲಿ ನಾಟಿ ಓಟ ಸಾಂಪ್ರದಾಯಿಕವಾಗಿ ನಡೆದುಕೊಂಡು ಬರುತ್ತಿತ್ತು. ಆದರೆ ನಾಟಿ ಓಟದಲ್ಲಿ ಎಲ್ಲರಿಗೂ ಭಾಗವಹಿಸಲು ಅವಕಾಶ ನೀಡುವುದು ಕಷ್ಟವಾಗುತ್ತಿತ್ತು. ನಾಟಿ ಮೇಲೆಯೇ ಓಡುವುದರಿಂದ ಗದ್ದೆಯ ಮಾಲೀಕರಿಗೆ ನಷ್ಟವಾಗುತ್ತಿತ್ತು. ಹೀಗಾಗಿ ನಾಟಿಗೆ ಮೊದಲೇ ಕೆಸರು ಗದ್ದೆಯಲ್ಲಿ ಓಟವನ್ನು ನಡೆಸುವ ತೀರ್ಮಾನ ಕೈಗೊಳ್ಳಲಾಯಿತು. ಕೆಸರುಗದ್ದೆ ಓಟಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಕ್ಕಿತ್ತು. ಹೀಗಾಗಿ ಅದನ್ನು ಮುಂದುವರೆಸಲಾಯಿತಲ್ಲದೆ, ಇದಕ್ಕೆ ಹಗ್ಗಜಗ್ಗಾಟ, ವಾಲಿಬಾಲ್, ರಿಲೇ ಮುಂತಾದವುಗಳನ್ನು ವರ್ಷದಿಂದ ವರ್ಷಕ್ಕೆ ಸೇರ್ಪಡೆ ಮಾಡಲಾಯಿತು.

ವರ್ಷಗಳು ಕಳೆದಂತೆ ಇದು ರಾಜ್ಯಮಟ್ಟದ ಕೆಸರುಗದ್ದೆ ಕ್ರೀಡಾಕೂಟವಾಗಿ ಹೆಸರುವಾಸಿಯಾಗಿದ್ದು, ಇದನ್ನು ಕೊಡಗು ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯೂತ್ ಹಾಸ್ಟೇಲ್ ಅಸೋಸಿಯೇಶನ್ ಆಫ್ ಇಂಡಿಯಾ (ಮಡಿಕೇರಿ ಘಟಕ), ಕೊಡಗು ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ, ವಿರಾಜಪೇಟೆ ಮತ್ತು ಸೋಮವಾರಪೇಟೆ ತಾಲ್ಲೂಕು ಯುವ ಒಕ್ಕೂಟ ಹಾಗೂ ಕಗ್ಗೋಡ್ಲು ಕಾವೇರಿ ಯುವಕ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸುತ್ತಾ ಬರುತ್ತಿವೆ.

ಕ್ರೀಡಾಕೂಟದಲ್ಲಿ ಏನೆಲ್ಲ ಕ್ರೀಡೆಗಳಿವೆ?

ಈ ಬಾರಿಯ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಸಾರ್ವಜನಿಕ ಪುರುಷ ಮತ್ತು ಮಹಿಳೆಯರ ಹಗ್ಗ ಜಗ್ಗಾಟ (9 ಜನರ ತಂಡ), ಸಾರ್ವಜನಿಕ ಪುರುಷರ ವಾಲಿಬಾಲ್ (4 ಜನರ ತಂಡ), ಸಾರ್ವಜನಿಕ ಮಹಿಳೆಯರಿಗೆ ಥ್ರೋಬಾಲ್ (6 ಜನರ ತಂಡ), ಪ್ರೌಢ ಶಾಲಾ ಬಾಲಕಿಯರಿಗೆ ಥ್ರೋಬಾಲ್ ಪಂದ್ಯಾವಳಿ (6 ಜನರ ತಂಡ), ಬಾಲಕರ ಹಗ್ಗಜಗ್ಗಾಟ ಪಂದ್ಯಾವಳಿ (7 ಜನರ ತಂಡ) ನಡೆಯಲಿದೆ.

ಇದರ ಜತೆಗೆ ಕಿರಿಯ ಪಾಥಮಿಕ ಶಾಲಾ ಬಾಲಕ, ಬಾಲಕಿಯರಿಗೆ 50ಮೀ ಓಟ, ಹಿರಿಯರ ಪ್ರಾಥಮಿಕ ಶಾಲಾ ಬಾಲಕ, ಬಾಲಕಿಯರಿಗೆ 100ಮೀ ಓಟ, ಪ್ರೌಢಶಾಲಾ ಬಾಲಕ, ಬಾಲಕಿಯರಿಗೆ 200 ಮೀ. ಓಟ, ಪದವಿ ಪೂರ್ವ ಕಾಲೇಜು ಬಾಲಕ, ಬಾಲಕಿಯರಿಗೆ 400 ಮೀ. ಓಟ, ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು ಯುವಕ, ಯುವತಿಯರಿಗೆ, ಸಾರ್ವಜನಿಕ ಪುರುಷ ಹಾಗೂ ಮಹಿಳೆಯರಿಗೆ 400 ಮೀ. ಓಟದ ಸ್ಪರ್ಧೆಯಲ್ಲದೆ, ದಂಪತಿಗಳಿಗೆ ಪ್ರತ್ಯೇಕ ಓಟವೂ ಇದೆ. ವೀಕೆಂಡ್ ನಲ್ಲಿ ಟ್ರಿಪ್ ಹೋಗುವವರು ಕೆಸರುಗದ್ದೆ ಕ್ರೀಡಾಕೂಟ ನಡೆಯುವ ಕಗ್ಗೋಡ್ಲುಗೆ ಬಂದರೆ ಮನರಂಜನೆ ಸಿಗುವುದರಲ್ಲಿ ಎರಡು ಮಾತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+