ವಿಧಾನ ಪರಿಷತ್; ನೈಋತ್ಯ ಶಿಕ್ಷಕ, ಪದವೀಧರರ ಕ್ಷೇತ್ರದ ಮತದಾರರ ವಿವರ
ಮಡಿಕೇರಿ, ಡಿಸೆಂಬರ್ 31; ಕರ್ನಾಟಕ ವಿಧಾನ ಪರಿಷತ್ತಿನ ನೈಋತ್ಯ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ನಡೆಸಲು ಸಿದ್ಧತೆ ನಡೆದಿದೆ. ಮತದಾರರ ಪಟ್ಟಿಯನ್ನು ಅಂತಿಗೊಳಿಸಲಾಗಿದ್ದು, ಮತದಾರರ ಪಟ್ಟಿಯನ್ನು ರಾಜಕೀಯ ಪಕ್ಷಗಳ ಪ್ರಮುಖರಿಗೆ ಹಸ್ತಾಂತರಿಸಲಾಗಿದೆ.
ಮಡಿಕೇರಿ ನಗರದ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅಂತಿಮ ಮತದಾರರಪಟ್ಟಿಯ ಕುರಿತು ಮಾಹಿತಿ ನೀಡಿದರು. 2024 ರ ಜೂನ್ 21ಕ್ಕೆ ವಿಧಾನ ಪರಿಷತ್ ಸದಸ್ಯರ ಅವಧಿ ಪೂರ್ಣಗೊಳ್ಳಲಿದೆ ಎಂದರು.

ಕರ್ನಾಟಕ ವಿಧಾನ ಪರಿಷತ್ತಿನ ನೈಋತ್ಯ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ನಡೆಸಲು ಸಿದ್ಧತೆ ನಡೆದಿದ್ದು, ಆ ನಿಟ್ಟಿನಲ್ಲಿ ಇದುವರೆಗೆ ಹೆಸರು ನೋಂದಾಯಿಸಿರುವ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಹೇಳಿದರು.
ಒಟ್ಟು ಎಷ್ಟು ಮತದಾರರು?; ಚುನಾವಣಾ ಆಯೋಗದ ನಿರ್ದೇಶನದಂತೆ ಈಗಾಗಲೇ ನವೆಂಬರ್ 23ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ನವೆಂಬರ್ 23ರಿಂದ ಡಿಸೆಂಬರ್ 9 ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲಾಗಿದೆ. ನೈಋತ್ಯ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಮೂನೆ-18 ಮತ್ತು 19 ರ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ನಿಯಮಾನುಸಾರ ಪರಿಶೀಲಿಸಿ ವಿಲೇವಾರಿ ಮಾಡಲಾಗಿದೆ ಎಂದು ತಿಳಿಸಿದರು.
ನವೆಂಬರ್ 23ರಿಂದ ಡಿಸೆಂಬರ್ 9ರವರೆಗೆ ಕೊಡಗು ಜಿಲ್ಲೆಯಲ್ಲಿ ಒಟ್ಟು 245 ಮಂದಿಯ ಅರ್ಜಿ ಸ್ವೀಕರಿಸಿದ್ದು, 199 ಅರ್ಜಿಗಳನ್ನು ಅಂಗೀಕರಿಸಲಾಗಿದೆ. 15 ಅರ್ಜಿಗಳು ತಿರಸ್ಕೃತಗೊಂಡಿದ್ದು, 31 ಅರ್ಜಿಗಳನ್ನು ನೈಋತ್ಯ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಗೆ ವರ್ಗಾಯಿಸಲಾಗಿದೆ ಎಂದು ಮಾಹಿತಿ ನೀಡಿದರು.
ಹಾಗೆಯೇ ನೈಋತ್ಯ ಪದವೀಧರರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಈ ಅವಧಿಯಲ್ಲಿ (ನವೆಂಬರ್ 23ರಿಂದ ಡಿಸೆಂಬರ್ 9 ರವರೆಗೆ) 707 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, 616 ಅರ್ಜಿಗಳು ಅಂಗೀಕಾರವಾಗಿದೆ. 28 ಅರ್ಜಿಗಳು ತಿರಸ್ಕೃತಗೊಂಡಿದ್ದು, 63 ಅರ್ಜಿಗಳನ್ನು ಬೇರೆ ಕ್ಷೇತ್ರಕ್ಕೆ ವರ್ಗಾಯಿಸಲಾಗಿದೆ ಎಂದು ಮಾಹಿತಿ ನೀಡಿದರು.
ನಮೂನೆ-18 ಮತ್ತು ನಮೂನೆ-19ರ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ಡಾಟಾ ಎಂಟ್ರಿ ಮಾಡಿದ್ದು, ಭಾರತ ಚುನಾವಣಾ ಆಯೋಗದ ವೇಳಾಪಟ್ಟಿಯ ಅನುಸಾರ ಶನಿವಾರ (ಡಿಸೆಂಬರ್ 30, 2023ರಂದು) ಅಂತಿಮ ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ಕಛೇರಿಯಲ್ಲಿ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ವಿವರಿಸಿದರು.
ಒಟ್ಟಾರೆ ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಒಟ್ಟು ಇದುವರೆಗೆ 1174 ಮಂದಿ ಮತದಾರರು ಇದ್ದು, ಇವರಲ್ಲಿ 392 ಪುರುಷ ಮತದಾರರು, 782 ಮಹಿಳಾ ಮತದಾರರು ಇದ್ದಾರೆ. ತಾಲ್ಲೂಕುವಾರು ಗಮನಿಸಿದಾಗ ಮಡಿಕೇರಿ 391, ಸೋಮವಾರಪೇಟೆ 124, ವಿರಾಜಪೇಟೆ 175, ಕುಶಾಲನಗರ 244 ಮತ್ತು ಪೊನ್ನಂಪೇಟೆಯಲ್ಲಿ 240 ಮತದಾರರು ಇದ್ದಾರೆ.
ಹಾಗೆಯೇ ನೈಋತ್ಯ ಪದವೀಧರರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಟ್ಟು 3616 ಮತದಾರರು ಇದ್ದು, 1549 ಪುರುಷ ಮತದಾರರು, 2066 ಮಹಿಳಾ ಮತದಾರರು ಇದ್ದಾರೆ. ಇತರೆ ಒಬ್ಬರು ಮತದಾರರು ಇದ್ದಾರೆ. ತಾಲ್ಲೂಕುವಾರು ಗಮನಿಸಿದಾಗ ಮಡಿಕೇರಿ 1100, ಸೋಮವಾರಪೇಟೆ 732, ವಿರಾಜಪೇಟೆ 580, ಕುಶಾಲನಗರ 713, ಪೊನ್ನಂಪೇಟೆಯಲ್ಲಿ 491 ಮಂದಿ ಮತದಾರರು.
ಮತದಾರರ ಪಟ್ಟಿಯಲ್ಲಿ ಇನ್ನು ಹೆಸರು ನೋಂದಾಯಿಸದೆ ಇರುವವರು ನಿರಂತರ ಪರಿಷ್ಕರಣೆ ಅವಧಿಯಲ್ಲಿ ನಮೂನೆ-18 ಮತ್ತು ನಮೂನೆ-19ರ ಅರ್ಜಿಗಳನ್ನು ಸಲ್ಲಿಸಿ, ನೋಂದಾಯಿಸಿಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗೆ ಜಿಲ್ಲಾಧಿಕಾರಿಗಳ, ಉಪ ವಿಭಾಗಾಧಿಕಾರಿಗಳ ಮತ್ತು ಸಂಬಂಧಪಟ್ಟ ತಾಲ್ಲೂಕು ಕಚೇರಿಗಳನ್ನು ಸಂಪರ್ಕಿಸಬಹುದು. ಹಾಗೂ www.ceokarnataka.kar.nic.in ವೆಬ್‍ಸೈಟ್‍ನಲ್ಲಿಯೂ ಮಾಹಿತಿ ಲಭ್ಯವಿದ್ದು, ಮಾಹಿತಿಯನ್ನು ಪಡೆಯಬಹುದು.
ವಿಧಾನ ಪರಿಷತ್ತಿನ ನೈಋತ್ಯ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಜೊತೆ ಅಂತಿಮ ಮತದಾರರ ಪಟ್ಟಿಯ ಸಂಬಂಧ ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾಹಿತಿ ನೀಡಿದರು, ಪಟ್ಟಿಯನ್ನು ಹಸ್ತಾಂತರ ಮಾಡಿದರು.












Click it and Unblock the Notifications