ನಕಲಿ ಕೋವಿಡ್ ನೆಗೆಟಿವ್ ವರದಿ ಕೊಡುತ್ತಿದ್ದ ಪತ್ರಕರ್ತನ ಬಂಧನ
ಮಡಿಕೇರಿ, ಮೇ 25; ಕೋವಿಡ್ ಮಹಾಮಾರಿ ರಣಕೇಕೆ ಹಾಕುತ್ತಿರಬೇಕಾದರೆ ರೋಗ ಹರಡದಂತೆ ತಡೆಯಲು ಸಮಾಜಮುಖಿ ಕೆಲಸವನ್ನು ಪತ್ರಕರ್ತ ಮಾಡಬೇಕು. ಕೊರೊನಾ ಫ್ರಂಟ್ ಲೈನ್ ವಾರಿಯರ್ ಆಗಿ ಕೆಲಸ ಮಾಡಬೇಕಾದ ಪತ್ರಕರ್ತ ನಕಲಿ ಕೋವಿಡ್ ನೆಗೆಟಿವ್ ವರದಿ ತಯಾರಿಸಿ ಮಾರಾಟ ಮಾಡಿ, ಸಿಕ್ಕಿಬಿದ್ದಿದ್ದಾನೆ.
ಕರ್ನಾಟಕದಿಂದ ಕೇರಳಕ್ಕೆ ಹೋಗುವವರಿಗೆ ಕೋವಿಡ್ ನೆಗಟಿವ್ ವರದಿ ಕಡ್ಡಾಯವಾಗಿದೆ. ವೀರಾಜಪೇಟೆ ತಾಲೂಕು ಸಿದ್ಧಾಪುರದ ಪತ್ರಿಕೆಯೊಂದರ ವರದಿಗಾರ ಅಬ್ದುಲ್ ಅಜೀಜ್ ಕೇರಳಕ್ಕೆ ಗಿಡ ತಗೊಂಡು ಹೋಗುವವರಿಗೆ ಮತ್ತು ಕೇರಳಕ್ಕೆ ಪ್ರಯಾಣಿಸುವವರಿಗೆ ತನ್ನ ಸ್ಟುಡಿಯೋದಲ್ಲಿಯೇ ನಕಲಿ ವರದಿ ತಯಾರಿಸಿ ಕೊಡುತ್ತಿದ್ದ.
ಯಾವುದೇ ಟೆಸ್ಟ್ ಮಾಡಿಸದೇ ಹಣವನ್ನು ಪಡೆದು ನಕಲಿ ವರದಿ ಕೊಡುತ್ತಿದ್ದ ಅಬ್ದುಲ್ ಅಜೀಜ್ ಮಾಧ್ಯಮದ ಘನತೆಯನ್ನು ಹಾಳು ಮಾಡಿದ್ದು, ಮಡಿಕೇರಿ ಸರ್ಕಲ್ ಇನ್ಸ್‌ಪೆಕ್ಟರ್ ಅನೂಪ್ ಮಾದಪ್ಪ ಅಬ್ದುಲ್ ಬಂಧಿಸಿದ್ದಾರೆ.

ಕೊಡಗಿನಿಂದ ಕೇರಳಕ್ಕೆ ತೆರಳುವ ವಾಹನಗಳನ್ನು ಗಡಿಯಲ್ಲಿ ತಪಾಸಣೆ ಮಾಡುವಾಗ ನಕಲಿ ನೆಗೆಟಿವ್ ವರದಿ ಪತ್ತೆಯಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ನಡೆಸಿದಾಗ ನಕಲಿ ವರದಿ ತಯಾರು ಮಾಡುವವ ಸಿಕ್ಕಿಬಿದ್ದಿದ್ದಾನೆ.
ಇದುವರೆಗೂ ಹಲವಾರು ಜನರಿಗೆ ನಕಲಿ ವರದಿ ತಯಾರಿಸಿಕೊಟ್ಟಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಆದರೆ ಎಷ್ಟು ಜನರಿಗೆ ಈ ರೀತಿ ನಕಲಿ ವರದಿ ನೀಡಿದ್ದಾನೆ ಎಂದು ಖಚಿತವಾಗಿ ತಿಳಿದು ಬಂದಿಲ್ಲ.
ಅಬ್ದುಲ್ ಅಜೀವ್ ವಿರುದ್ದ ಕುಟ್ಟ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಜಿಲ್ಲೆಯಲ್ಲಿ ನಕಲಿ ವರದಿ ತಯಾರಿಕೆ ಕುರಿತು ಆರೋಪಿಯನ್ನು ಬಂಧಿಸಿದ ಮೊದಲ ಪ್ರಕರಣ ಇದಾಗಿದೆ.












Click it and Unblock the Notifications