Monsoon Rain: ಕೊಡಗಿನಲ್ಲಿ ವಾಹನ ಸಂಚಾರ ನಿಷೇಧ, ವಿವರಗಳು

ಮಡಿಕೇರಿ, ಜೂನ್ 30: ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆಯ ಅಬ್ಬರ ಹೆಚ್ಚಾಗಿದೆ. ಜನವರಿಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಸುರಿದ ಮಳೆ 775 ಮಿ. ಮೀ. ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 260.71 ಮಿ. ಮೀ. ಮಳೆಯಾಗಿತ್ತು ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಮಳೆ ಹೆಚ್ಚಾಗುವ ಮುನ್ಸೂಚನೆ ಇದೆ. ಮಳೆಯಿಂದಾಗಿ ರಸ್ತೆಯ ಪರಿಸ್ಥಿತಿ ಹದಗೆಡುತ್ತಿದೆ. ಅಧಿಕ ಭಾರ ತುಂಬಿದ ಭಾರೀ ಸರಕು ಸಾಗಾಣೆ ವಾಹನಗಳು ದಿನನಿತ್ಯ ಸಂಚರಿಸುವುದರಿಂದ ರಸ್ತೆಯ ಬದಿಗಳ ಮಣ್ಣು ಕುಸಿತದಿಂದಾಗಿ ರಸ್ತೆಯ ಮೇಲೆ ಮಣ್ಣು ಬಿದ್ದು, ರಸ್ತೆ ಸಂಚಾರಕ್ಕೆ ತೊಂದರೆಯಾಗಿ ಸಾಕಷ್ಟು ಅಪಘಾತಗಳಿಗೆ ಕಾರಣವಾಗುತ್ತಿರುತ್ತದೆ.

Monsoon Rain Ban On Heavy Vehicles In Kodagu District

ಈ ಹಿನ್ನಲೆಯಲ್ಲಿ ಕೊಡಗು ಜಿಲ್ಲಾಡಳಿತ ಮಳೆಗಾಲದಲ್ಲಿ ಜಿಲ್ಲೆಯಲ್ಲಿ ವಾಹನಗಳ ಸಂಚಾರ ನಿಷೇಧಿಸಿದೆ. ವಾಹನದ ನೋಂದಣಿ ತೂಕ 18,500 ಕೆಜಿಗಿಂತ ಹೆಚ್ಚಿನ ತೂಕದ ಸರಕು ಸಾಗಾಣಿಕೆ ವಾಹನ, ಮಲ್ಟಿ ಆಕ್ಸೆಲ್ ಟ್ರಕ್‍ಗಳ ಸಂಚಾರ ಮತ್ತು ಭಾರೀ ವಾಹನಗಳಾದ ಬುಲೆಟ್ ಟ್ಯಾಂಕರ್ಸ್, ಶಿಪ್ ಕಾರ್ಗೋ ಕಂಟೈನರ್ಸ್, ಲಾಂಗ್ ಚಾಸಿಸ್ (ಮಲ್ಟಿ ಆಕ್ಸೆಲ್), ಆರ್ಟಿಕ್ಯೂಲೇಟೆಡ್ ವಾಹನಗಳು ಮತ್ತು ಮರಳು ಸಾಗಾಣಿಕೆ, ಮರದ ದಿಮ್ಮಿಗಳನ್ನು ಸಾಗಿಸುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ಕೊಡಗು ಜಿಲ್ಲೆಯಲ್ಲಿ ಮಳೆಗಾಲ ಮುಗಿಯುವವರೆಗೆ ನಿರ್ಬಂಧಿಸಲಾಗಿದೆ.

ಆದೇಶದ ವಿವರಗಳು: ವಾಹನಗಳ ಸಂಚಾರ ನಿರ್ಬಂಧದ ಕುರಿತು ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಆದೇಶ ಹೊರಡಿಸಿದ್ದಾರೆ. ಕರ್ನಾಟಕ ಪೊಲೀಸ್ ಕಾಯ್ದೆ 1961ರ ವಿಧಿ 11 ಡಿಸಾಸ್ಟರ್ ಮ್ಯಾನೇಜ್‍ಮೆಂಟ್ ಆಕ್ಟ್ 2005ರ ಕಲಂ 33, ಮೋಟಾರು ವಾಹನಗಳ ಕಾಯ್ದೆ 1988ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಗಳು 1989ರ (ತಿದ್ದುಪಡಿ ನಿಯಮಾವಳಿ 1990) ನಿಯಮ 221-ಎ(5) ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 144 ರಡಿ ದತ್ತವಾದ ಅಧಿಕಾರದಂತೆ ಸ್ಥಳೀಯರು ವಾಹನ ಸವಾರರ ಹಾಗೂ ಸಾರ್ವಜನಿಕರ ಆಸ್ತಿಪಾಸ್ತಿಗಳ ಸುರಕ್ಷತೆಯ ಹಿತದೃಷ್ಟಿಯಿಂದ ಕೊಡಗು ಜಿಲ್ಲೆಯಾದ್ಯಂತ ಜುಲೈ 1ರಿಂದ ಜುಲೈ 30ರ ವರೆಗೆ ಸಂಚಾರ ವ್ಯವಸ್ಥೆಯನ್ನು ನಿರ್ವಹಿಸಲು ಜಿಲ್ಲಾ ದಂಡಾಧಿಕಾರಿ ಮತ್ತು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಾದ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ಎಲ್ಲಾ ರೀತಿಯ ಮರದ ದಿಮ್ಮಿ ಮತ್ತು ಮರಳು ಸಾಗಾಣಿಕೆ ವಾಹನಗಳು, ವಾಹನದ ನೋಂದಣಿ ತೂಕ 18,500 ಕೆಜಿಗಿಂತ ಹೆಚ್ಚಿನ ಸರಕು ಸಾಗಾಣೆ ಮಾಡುವ ಸರಕು ಸಾಗಾಣಿಕೆ ವಾಹನಗಳು, ಭಾರೀ ವಾಹನಗಳಾದ ಬುಲೆಟ್ ಟ್ಯಾಂಕರ್ಸ್, ಶಿಪ್ ಕಾರ್ಗೋ ಕಂಟೈನರ್ಸ್, ಲಾಂಗ್ ಚಾಸಿಸ್ (ಮಲ್ಟಿ ಆಕ್ಸೆಲ್) ವಾಹನಗಳು/ ಆರ್ಟಿಕ್ಯೂಲೇಟೆಡ್ ವಾಹನಗಳನ್ನು ನಿರ್ಬಂಧಿಸಲಾಗಿದೆ.

ವಿನಾಯಿತಿ ನೀಡಿದ ವಾಹನಗಳು: ಆದರೆ ಈ ಆದೇಶದಿಂದ ಅಡುಗೆ ಅನಿಲ ಮತ್ತು ಇಂಧನ ಪೂರೈಕೆ ವಾಹನಗಳು, ಹಾಲು ಪೂರೈಕೆ ವಾಹನಗಳು, ಸರ್ಕಾರಿ ಕೆಲಸದ ನಿಮಿತ್ತ ಉಪಯೋಗಿಸಲ್ಪಡುವ ವಾಹನಗಳು, ಶಾಲಾ ಕಾಲೇಜು ಮತ್ತು ಸಾರ್ವಜನಿಕ ಪ್ರಯಾಣಿಕರ ವಾಹನಗಳು (ಮಲ್ಟಿ ಆಕ್ಸೆಲ್ ಬಸ್‍ಗಳು ಸೇರಿದಂತೆ) ವಿನಾಯಿತಿ ನೀಡಲಾಗಿದೆ. ಈ ಬಗ್ಗೆ ಮೋಟಾರು ವಾಹನ ಕಾಯ್ದೆ 1988ರ ಕಲಂ 116ರಂದು ಅವಶ್ಯವಿರುವ ಸಂಜ್ಞೆ/ ಸೂಚನಾ ಫಲಕಗಳನ್ನು ಅಳವಡಿಸಲು ಜಿಲ್ಲಾ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ, ಮಡಿಕೇರಿ ಇವರಿಗೆ ಅನುಮತಿಸಲಾಗಿದೆ.

ಕೊಡಗು ಜಿಲ್ಲೆಯ ಮುಖಾಂತರ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 275ರ ಜಿಲ್ಲೆಯ ಗಡಿಭಾಗಗಳಾದ ಕುಶಾಲನಗರ ಮತ್ತು ಸಂಪಾಜೆಯಲ್ಲಿ ವ್ಯವಸ್ಥಿತ ಚೆಕ್‍ಪೋಸ್ಟ್ ನಿರ್ಮಿಸಿ, ದಿನದ 24 ಗಂಟೆಯೂ ನಿಗಾ ವಹಿಸಲು ಸಿಬ್ಬಂದಿಗಳನ್ನು ನಿಯೋಜಿಸಲು, ಮೊಬೈಲ್ ಪ್ಯಾಟ್ರೋಲಿಂಗ್ ನಡೆಸಲು ಹಾಗೂ ಈ ಆದೇಶ ಉಲ್ಲಂಘನೆಯಾಗದಂತೆ ಮತ್ತು ಆದೇಶ ಉಲ್ಲಂಘಿಸಿದವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಪೊಲೀಸ್ ಹಾಗೂ ಸಾರಿಗೆ ಇಲಾಖೆಗೆ ಸೂಚಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+