ಕೊಡಗು ಜಿಲ್ಲೆಯಲ್ಲಿ 546 ಮತಗಟ್ಟೆಗಳು, ಮತದಾರರು ಎಷ್ಟು?
ಮಡಿಕೇರಿ, ಜನವರಿ 23: ಕೇಂದ್ರ ಚುನಾವಣಾ ಆಯೋಗದ ಸೂಚನೆಯಂತೆ ಲೋಕಸಭಾ ಚುನಾವಣೆ 2024ರ ಹಿನ್ನೆಲೆಯಲ್ಲಿ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ 546 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ ಎಂದು ಚುನಾವಣಾಧಿಕಾರಿ ಮತ್ತು ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದ್ದಾರೆ.
ಮಡಿಕೇರಿ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ವಿಶೇಷ ಅಭಿಯಾನದ ಮೂಲಕ ಯುವ ಮತದಾರರನ್ನು ಸೇರ್ಪಡೆ ಮಾಡಲಾಗಿದೆ. ನಮೂನೆ-6, ನಮೂನೆ-7 ಮತ್ತು ನಮೂನೆ-8 ರಲ್ಲಿ ಯುವ ಮತದಾರರ ಸೇರ್ಪಡೆ ಮತ್ತಿತರ ಕಾರ್ಯಗಳನ್ನು ಬಿಎಲ್‍ಒ ಮೂಲಕ ಮನೆ ಮನೆಗೆ ತೆರಳಿ ಮತದಾರರ ಪಟ್ಟಿಯನ್ನು ತಯಾರಿಸಲಾಗಿದೆ ಎಂದು ಹೇಳಿದರು.

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ನಿರಂತರ ಪ್ರಕ್ರಿಯೆಯಾಗಿದ್ದು, ಯುವ ಮತದಾರರು ಹೆಸರು ಸೇರ್ಪಡೆ ಮಾಡಬಹುದಾಗಿದೆ. ಸದ್ಯ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಸಂಬಂಧಿಸಿದಂತೆ ವೋಟರ್ ಆಪ್ ಮೂಲಕ ತಮ್ಮ ಹೆಸರು ಇರುವುದನ್ನು ಖಾತರಿಪಡಿಸಿಕೊಳ್ಳಬಹುದಾಗಿದೆ.
ಒಟ್ಟು ಮತದಾರರು ಎಷ್ಟು?; ಅಂತಿಮ ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ 546 ಮತಗಟೆಗಳಿದ್ದು, ಒಟ್ಟು 4,63,414 ಮತದಾರರು ಇದ್ದಾರೆ. ಅದರಲ್ಲಿ 2,27,339 ಪುರುಷ ಮತದಾರರು. 2,36,059 ಮಹಿಳಾ ಮತದಾರರು ಹಾಗೂ 16 ಮಂದಿ ಇತರ ಮತದಾರರು ಇದ್ದಾರೆ.
ವಿಧಾನಸಭಾ ಕ್ಷೇತ್ರವಾರು ಗಮನಿಸಿದಾಗ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 273 ಮತಗಟ್ಟೆಗಳಿದ್ದು, ಒಟ್ಟು 2,35,139 ಮತದಾರರು ಇದ್ದಾರೆ. ಇವರಲ್ಲಿ 1,14,580 ಪುರುಷ ಮತದಾರರು, 1,20,550 ಮಹಿಳಾ ಮತದಾರರು ಹಾಗೂ 9 ಮಂದಿ ಇತರೆ ಮತದಾರರು.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 273 ಮತಗಟ್ಟೆಗಳಿದ್ದು, ಒಟ್ಟು 2,28,275 ಮಂದಿ ಮತದಾರರು ಇದ್ದಾರೆ. ಇವರಲ್ಲಿ 1,12,759 ಪುರುಷ ಮತದಾರರು, 1,15,509 ಮಹಿಳಾ ಮತದಾರರು ಹಾಗೂ 7 ಮಂದಿ ಇತರೆ ಮತದಾರರು ಇದ್ದಾರೆ. ಜನವರಿ 22ರಂದು ಪ್ರಕಟಿಸಿದ ಅಂತಿಮ ಮತದಾರರ ಪಟ್ಟಿಯನ್ನು ದಿನಾಂಕ 27/10/2023ರಂದು ಪ್ರಕಟಿಸಿದ ಕರಡು ಮತದಾರರ ಪಟ್ಟಿಗೆ ಹೊಲಿಸಿದ್ದಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳಿಂದ 3,498 ಮತದಾರರು ಹೆಚ್ಚಾಗಿದ್ದಾರೆ.
ಪ್ರಸ್ತುತ ಮತದಾರರ ಪಟ್ಟಿ ನಿರಂತರ ಪರಿಷ್ಕರಣೆ ನಡೆಯುತ್ತಿದ್ದು, ಈ ಅವಧಿಯಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ನಮೂನೆ-6 ರಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಮೃತ, ಸ್ಥಳಾಂತರ, ಪುನರಾವರ್ತನೆ ಆಗಿದ್ದಲ್ಲಿ ಹೆಸರುಗಳನ್ನು ತೆಗೆಯಲು ನಮೂನೆ-7 ರಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.
ಮತದಾರರ ಪಟ್ಟಿ ಮತ್ತು ಮತದಾರರ ಗುರುತಿನ ಚೀಟಿಯಲ್ಲಿನ ನಮೂದುಗಳು ತಪ್ಪಾಗಿದ್ದಲ್ಲಿ ತಿದ್ದುಪಡಿ ಮಾಡಲು ಹಾಗೂ ವಿಧಾನಸಭಾ ಕ್ಷೇತ್ರದ ಒಂದು ಮತಗಟ್ಟೆಯಿಂದ ಇನ್ನೊಂದು ಮತಗಟ್ಟೆಗೆ ವರ್ಗಾವಣೆ ಮಾಡಲು ನಮೂನೆ-8 ರಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅನಿವಾಸಿ ಭಾರತೀಯರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ನಮೂನೆ-6ಎರಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು.
ನಮೂನೆ-6, 6ಎ, 7 ಮತ್ತು 8ರ ಅರ್ಜಿಗಳನ್ನು ಭಾರತ ಚುನಾವಣಾ ಆಯೋಗವು ಅಭಿವೃದ್ಧಿ ಪಡಿಸಿರುವ ಮೊಬೈಲ್ ಅಪ್ಲಿಕೇಷನ್ ಮತದಾರರ ಸಹಾಯವಾಣಿ ಆಪ್ ಹಾಗೂ https://voters.eci.gov.in//VOTERS' SERVICE PORTAL ಮೂಲಕ ಅನ್‍ಲೈನ್‍ನಲ್ಲಿ ನೇರವಾಗಿ ಸಲ್ಲಿಸಬೇಕು.
ಮತದಾರರ ಪಟ್ಟಿ ಮತ್ತು ಚುನಾವಣೆಯ ಕುರಿತು ಮತದಾರರಿಗೆ ಮಾಹಿತಿ ನೀಡುವ ಸಲುವಾಗಿ ಭಾರತ ಚುನಾವಣಾ ಆಯೋಗವು ಮತದಾರರ ಸಹಾಯವಾಣಿ ಆಪ್ ಮೊಬೈಲ್ ಅಪ್ಲಿಕೇಷನ್ ಅಭಿವೃದ್ಧಿ ಪಡಿಸಿದ್ದು, ಎಲ್ಲಾ ಮತದಾರರು/ ನಾಗರೀಕರು ತಮ್ಮ ಮೊಬೈಲ್‍ನಲ್ಲಿ ಮತದಾರರ ಸಹಾಯವಾಣಿ ಆಪ್ ಅನ್ನು ಡೌನ್‍ಲೋಡ್ ಮಾಡಿಕೊಳ್ಳಬಹುದು.
ಭಾರತ ಚುನಾವಣಾ ಆಯೋಗ ನಿರ್ದೇಶನದಂತೆ ಭಾವಚಿತ್ರವಿರುವ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್-2023 ತಿಂಗಳಿನಲ್ಲಿ ಕೈಗೊಳ್ಳಲಾಗಿತ್ತು. ಕೊಡಗು ಜಿಲ್ಲೆಯ 208-ಮಡಿಕೇರಿ ಮತ್ತು 209-ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಲೋಕಸಭಾ ಸಾರ್ವತ್ರಿಕ ಚುನಾವಣೆ ಇರುವುದರಿಂದ ಅಂತಿಮ ಮತದಾರರ ಪಟ್ಟಿಯನ್ನು ಮತದಾರರು ಪರಿಶೀಲಿಸಿಕೊಂಡು, ಹೆಸರು ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಿರುವ ಬಗ್ಗೆ ಖಚಿತ ಪಡಿಸಿಕೊಳ್ಳಲು ಕೋರಲಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ಅವಧಿಯಲ್ಲಿ ನಮೂನೆ-06, 7 ಮತ್ತು 8 ರ ಅರ್ಜಿ ಸ್ವೀಕರಿಸಲಾಗಿದ್ದು, ನಿಯಮಾನುಸಾರ ಪರಿಶೀಲಿಸಿ ವಿಲೇವಾರಿ ಮಾಡಲಾಗಿದೆ.












Click it and Unblock the Notifications