Get Updates
Get notified of breaking news, exclusive insights, and must-see stories!

ಕೊಡವ ಹಾಕಿ ಉತ್ಸವದ ವೇಳೆ 'ಪಾಂಡಂಡ ಕುಟ್ಟಪ್ಪ' ನೆನಪಾಗುವುದೇಕೆ?

ಇವತ್ತು ಕೊಡಗಿನಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಹಾಕಿ ನಮ್ಮೆ(ಉತ್ಸವ)ಗೆ ಇಪ್ಪತ್ತೈದನೇ ವರ್ಷದ ಸಂಭ್ರಮ. ಈ ಬೆಳ್ಳಿ ಹಬ್ಬದ ಸಮಯದಲ್ಲಿ ಹಾಕಿ ಉತ್ಸವಕ್ಕೆ ಕಾರಣರಾದ ಕೊಡವ ಹಾಕಿ ಉತ್ಸವದ ಜನಕ ಎಂದೇ ಕರೆಯಲ್ಪಡುವ ಪಾಂಡಂಡ ಕುಟ್ಟಪ್ಪ ಅವರು ನೆನಪಾಗುತ್ತಾರೆ. ಅವರನ್ನು ನೆನಪಿಸಿಕೊಳ್ಳುತ್ತಾ ಹೋದಂತೆಯೇ ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿ ಹೇಗೆ ಹುಟ್ಟಿತು ಎಂಬ ಪ್ರಶ್ನೆಗೂ ಉತ್ತರ ಸಿಗುತ್ತಾ ಹೋಗುತ್ತದೆ.

ಹಾಗೆನೋಡಿದರೆ ಇವತ್ತು ನಮ್ಮೊಂದಿಗೆ ಕುಟ್ಟಪ್ಪ ಅವರು ಇಲ್ಲದಿರಬಹುದು. ಆದರೆ ಅವರು ಹುಟ್ಟುಹಾಕಿದ ಹಾಕಿ ಉತ್ಸವ ವರ್ಷದಿಂದ ವರ್ಷಕ್ಕೆ ಅದ್ಧೂರಿಯಾಗಿ ಮುನ್ನಡೆಯುತ್ತಿದೆ. ಕುಟ್ಟಪ್ಪ ಅವರು 7ಮೇ 2020ರಲ್ಲಿ ನಿಧನರಾಗಿದ್ದು, ಅವರಿಲ್ಲದೆ ಐದು ವರ್ಷಗಳು ಕಳೆದು ಹೋಗಿವೆ. ಇವತ್ತು ಕರಡದ ಕುಗ್ರಾಮದಲ್ಲಿ ಆರಂಭಗೊಂಡ ಪಂದ್ಯಾವಳಿ ವರ್ಷದಿಂದ ವರ್ಷಕ್ಕೆ ದಾಪುಗಾಲಿಟ್ಟು ಸಾಗುತ್ತಾ ಮುನ್ನಡೆದು ಬಂದಿದ್ದು ಲಿಮ್ಕಾ, ಗಿನ್ನೀಸ್ ದಾಖಲೆಗೆ ಬಾಜನವಾಗಿದೆ.

Kodava Hockey Festival Celebrating 25 Years and Honouring Pandanda Kuttappa

ಈ ವೇಳೆ ನಾವು ಪಾಂಡಂಡ ಕುಟ್ಟಪ್ಪ ಅವರನ್ನು ನೆನಪಿಸಿಕೊಳ್ಳಬೇಕು. ಅವರು ಹುಟ್ಟುಹಾಕಿದ ಪಂದ್ಯಾವಳಿ ದಾಖಲೆ ಮಟ್ಟಕ್ಕೆ ಬೆಳೆದು ಮುನ್ನಡೆಯುತ್ತದೆ ಎಂದು ಊಹಿಸಿದ್ದರೋ ಇಲ್ಲವೋ ಆದರೆ ಅಂತಹದೊಂದು ನಿರೀಕ್ಷೆಯಲ್ಲಿಯೇ ಪಂದ್ಯಾವಳಿಯನ್ನು ಆರಂಭಿಸಿದ್ದರು. ಆದರೆ ಇವತ್ತು ಇಡೀ, ದೇಶ ಮಾತ್ರವಲ್ಲ ವಿದೇಶಗಳು ಇತ್ತ ತಿರುಗಿ ನೋಡುತ್ತಿವೆ ಮತ್ತು ಪಂದ್ಯಾವಳಿಗೆ ಮೆಚ್ಚುಗೆ ಸೂಚಿಸುತ್ತಿವೆ ಎಂದರೆ ಅದಕ್ಕೆ ಕಾರಣ ಇಲ್ಲಿವರೆಗೆ ಪಂದ್ಯಾವಳಿಯನ್ನು ಆಯೋಜಿಸಿಕೊಂಡು ಬಂದ ಪ್ರತಿ ಕೊಡವ ಕುಟುಂಬಗಳಾಗಿವೆ. ಆ ಕುಟುಂಬಗಳಿಗೆ ಮತ್ತು ಪ್ರೋತ್ಸಾಹಿಸಿ, ಪಂದ್ಯಾವಳಿಯಲ್ಲಿ ಪಾಲ್ಗೊಂಡ ಎಲ್ಲರಿಗೂ ಸಲಾಮ್ ಎನ್ನಲೇ ಬೇಕು.

ಹಾಕಿಯತ್ತ ಎಲ್ಲಿಲ್ಲದ ಒಲವು ಹೊಂದಿದ್ದರು

ಸುಮಾರು ಮೂವತ್ತು ವರ್ಷಗಳ ಹಿಂದಿನ ವರ್ಷಗಳಿಗೆ ಹೋದರೆ ಅವತ್ತು ಯುವ ಜನತೆ ಕ್ರಿಕೆಟ್ನತ್ತ ವಾಲುತ್ತಿದ್ದ ದಿನಗಳು.. ಹಾಕಿ ಮೂಲೆಗುಂಪಾಗುವ ಸ್ಥಿತಿಗೆ ಬಂದಿತ್ತು. ಎಲ್ಲ ಮೈದಾನಗಳಲ್ಲಿಯೂ ಬ್ಯಾಟ್ ಹಿಡಿದು ಯುವಕರು ಕ್ರಿಕೆಟ್ ಆಡುವುದಕ್ಕೆ ಶುರು ಮಾಡಿದ್ದರು. ಇದನ್ನು ಗಮನಿಸಿದ ಪಾಂಡಂಡ ಕುಟ್ಟಪ್ಪ ಅವರಿಗೆ ಇದು ಹೀಗೆಯೇ ಮುಂದುವರೆದರೆ ಕ್ರಿಕೆಟ್ ನ ಅಬ್ಬರದಲ್ಲಿ ಹಾಕಿ ಕಳೆದು ಹೊಗುವ ಭಯ ಶುರುವಾಗಿತ್ತು. ಹೀಗಾಗಿ ಇದನ್ನು ತಪ್ಪಿಸಲು ಏನಾದರೊಂದು ಮಾಡಲೇ ಬೇಕೆಂಬ ಆಲೋಚನೆ ಬಂದಿತ್ತು.

ನಿಜಹೇಳಬೇಕೆಂದರೆ ಹಾಕಿ ಕ್ರೀಡೆಯು ಕುಟ್ಟಪ್ಪ ಅವರಿಗೆ ಪ್ರಾಣವೇ ಆಗಿತ್ತು. ಬಾಲಕರಾಗಿದ್ದಾಗಲೇ ಅವರು ಹಾಕಿ ಆಟದತ್ತ ಒಲವು ಹೊಂದಿದ್ದರು. ಹೀಗಾಗಿ ಅವರು ಬಾಲ್ಯದಲ್ಲಿಯೇ ಹಾಕಿಯತ್ತ ಒಲವು ಹೊಂದಿದ್ದರು. ಅವರ ಬಗ್ಗೆ ಹೇಳಬೇಕೆಂದರೆ ಚಿಕ್ಕವರಾಗಿದ್ದಾಗ ಅವರನ್ನು ಎಲ್ಲರೂ ಪ್ರೀತಿಯಿಂದ ಕುಟ್ಟಣಿ ಎಂದೇ ಕರೆಯುತ್ತಿದ್ದರು. ಅವರಿಗೆ ಚಿಕ್ಕಂದಿನಿಂದಲೇ ಹಾಕಿ ಆಟದ ಬಗ್ಗೆ ಎಲ್ಲಿಲ್ಲದ ವ್ಯಾಮೋಹ. ಹೀಗಾಗಿ ತಮ್ಮ ವಯಸ್ಸಿನ ಹುಡುಗರನ್ನು ಒಟ್ಟುಗೂಡಿಸಿ ಕಾಡು ಮರದಿಂದ ತಾವೇ ಕೆತ್ತಿ ತಯಾರಿಸಿದ ಸ್ಟಿಕ್‌ ಹಿಡಿದು ರಬ್ಬರ್ ಚೆಂಡನ್ನು ನೂಕುತ್ತಾ ತಮ್ಮ ಹುಟ್ಟೂರು ಕುಗ್ರಾಮ ಕರಡದ ಮೈದಾನ ತುಂಬಾ ಧೂಳೆಬ್ಬಿಸುತ್ತಾ ಹಾಕಿ ಆಟವನ್ನಾಡುತ್ತಿದ್ದರು.

ಹಾಕಿ ಕ್ರೀಡೆಯನ್ನು ಉತ್ತೇಜಿಸುವ ಆಲೋಚನೆ

ಆದರೆ ಅವತ್ತು ಮುಂದೊಂದು ದಿನ ಇದೇ ಬಾಲಕ ಕೊಡಗಿನಲ್ಲಿ ಕೊಡವ ಕುಟುಂಬಗಳ ನಡುವಿನ 'ಹಾಕಿನಮ್ಮೆ(ಉತ್ಸವ)'ಯ ಹುಟ್ಟಿಗೆ ಕಾರಣನಾಗಿ 'ಹಾಕಿನಮ್ಮೆಯ ಜನಕ' ಎಂದೇ ಹೆಸರು ಮಾಡುತ್ತಾನೆ ಎಂಬುವುದು ಯಾರಿಗೂ ಗೊತ್ತಿರಲಿಲ್ಲ. ಹಾಕಿ ಆಟದ ಬಗ್ಗೆ ಉತ್ಸಾಹ ಹೊಂದಿದ್ದ ಅವರು ಮುಂದೆ ಬೆಳೆದು ದೊಡ್ಡವರಾದಾಗ ಕೊಡಗಿನಲ್ಲಿ ಹಾಕಿ ಕ್ರೀಡೆಯನ್ನು ಶಾಶ್ವತವಾಗಿ ಉಳಿಸಿ ಬೆಳೆಸಲು ಕಂಕಣತೊಟ್ಟು ನಿಂತರು. ಕೊಡಗಿನಲ್ಲಿ ಅಡ್ಡಾಡುವಾಗಲೆಲ್ಲಾ ಮೈದಾನದಲ್ಲಿ ಯುವಕರು ಬ್ಯಾಟ್ ಹಿಡಿದು ಕ್ರಿಕೆಟ್ ಆಡುತ್ತಿದ್ದ ದೃಶ್ಯಗಳು ಕಂಡು ಬರುತ್ತಿತ್ತು.

ಈ ಸಂದರ್ಭ ಅವರ ತಲೆಯಲ್ಲಿ ಆಲೋಚನೆಯೊಂದು ಸುಳಿದಾಡ ತೊಡಗಿತ್ತು. ಇದು ಹೀಗೆಯೇ ಮುಂದುವರೆದರೆ ಹಾಕಿ ಮೂಲೆ ಗುಂಪಾಗಿ ಎಲ್ಲೆಲ್ಲೂ ಕ್ರಿಕೆಟ್ ಆವರಿಸಲಿದೆ. ಇದರಿಂದ ಹಾಕಿ ಆಟ ಮಂಕಾಗುವ ಸಾಧ್ಯತೆಯಿದೆ. ಇದಕ್ಕೊಂದು ಏನಾದರೂ ಮಾಡಲೇ ಬೇಕೆಂದು ಆಲೋಚಿಸಿದರು. ಆ ವೇಳೆಗೆ ಕೊಡಗಿನಲ್ಲಿ ಕೊಡವ ಕುಟುಂಬಗಳಲ್ಲಿ ಹಲವಾರು ಮಂದಿ ಹಾಕಿ ಕ್ರೀಡೆಯತ್ತ ಒಲವು ಹೊಂದಿದ್ದಲ್ಲದೆ, ದೇಶವನ್ನು ಹಾಕಿ ತಂಡಗಳ ಮೂಲಕ ಪ್ರತಿನಿಧಿಸುತ್ತಿದ್ದರು.

1997ರಲ್ಲಿ ಹಾಕಿ ಉತ್ಸವ ಆರಂಭ

ಹೀಗಾಗಿ ಅಂತಹವರನ್ನು ಸೇರಿಸಿಕೊಂಡು ಕೊಡವರಲ್ಲಿರುವ ಉತ್ಸಾಹಿ, ಯುವಕ, ಯುವತಿಯರು ಸೇರಿಸಿ ಪ್ರತಿ ಕುಟುಂಬಗಳ ತಂಡವನ್ನು ಹುಟ್ಟುಹಾಕಿ ಅವರಿಗೆ ತರಬೇತಿ ನೀಡಿ ಅವರಿಗಾಗಿ ಹಾಕಿ ಪಂದ್ಯಾವಳಿಯನ್ನು ಏರ್ಪಡಿಸಿ ಪ್ರೋತ್ಸಾಹ ನೀಡಿದರೆ ಹೇಗೆ ಎಂದು ತಮ್ಮನ್ನು ತಾವೇ ಪ್ರಶ್ನಿಸಿಕೊಂಡರಲ್ಲದೆ, ಅದನ್ನು ಕಾರ್ಯರೂಪಕ್ಕೆ ತರಲು ಟೊಂಕ ಕಟ್ಟಿ ನಿಂತು ಬಿಟ್ಟರು.

ಅದರಂತೆ ಕೊಡವ ಕುಟುಂಬಗಳ ಆಟಗಾರರಿಗಾಗಿ ಹಾಕಿ ಉತ್ಸವ ನಡೆಸುವ ಬಗ್ಗೆ ಕುಟುಂಬಗಳ ಹಿರಿಯರ, ಉತ್ಸಾಹಿ ಆಟಗಾರರೊಂದಿಗೆ ಚರ್ಚೆ ನಡೆಸಿ ಪ್ರತಿವರ್ಷ ಒಂದೊಂದು ಕುಟುಂಬ ಉತ್ಸವದ ಸಾರಥ್ಯ ವಹಿಸುವಂತೆಯೂ, ಯಾವ ಕುಟುಂಬಗಳು ಪಂದ್ಯಾವಳಿಯ ಸಾರಥ್ಯ ವಹಿಸುತ್ತವೆಯೋ ಆ ಕುಟುಂಬದ ಹೆಸರಿನ ಕಪ್ ನ್ನು ವಿಜೇತ ತಂಡಕ್ಕೆ ನೀಡುವ ತೀರ್ಮಾನ ಮಾಡಿದರು.

1997ರಲ್ಲಿ ವೀರಾಜಪೇಟೆ ತಾಲೂಕಿನ ಪುಟ್ಟ ಗ್ರಾಮ ಪಾಂಡಂಡ ಕುಟ್ಟಪ್ಪರವರ ಹುಟ್ಟೂರಾದ ಕರಡದ ಮೈದಾನದಲ್ಲಿಯೇ 'ಹಾಕಿನಮ್ಮೆ (ಉತ್ಸವ)' ಯನ್ನು ಆರಂಭಿಸಲಾಯಿತು. ಪಾಂಡಂಡ ಕುಟುಂಬವೇ ಸಾರಥ್ಯ ವಹಿಸಿಕೊಂಡಿತು. ಆರಂಭದ ವರ್ಷ ಸುಮಾರು 60 ಕುಟುಂಬಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ಕಲಿಯಂಡ ಕುಟುಂಬದ ತಂಡ ಕಪ್ ಒಡೆತನ ಸಾಧಿಸಿತು. ಆರಂಭದ ಪಂದ್ಯಾವಳಿಯಿಂದ ಇಲ್ಲಿಯವರೆಗೆ ಗಮನಿಸಿದರೆ ಮೊದಲು ಕೇವಲ ಪಂದ್ಯಾವಳಿಯಾಗಿದ್ದದ್ದು, ನಂತರದ ವರ್ಷಗಳಲ್ಲಿ ಅದೊಂದು ಉತ್ಸವವಾಗಿ ಮಾರ್ಪಾಡಾಯಿತಲ್ಲದೆ, ಅಭಿವೃದ್ಧಿಯ ಪಥದಲ್ಲಿ ಸಾಗತೊಡಗಿತು.

ಹಲವು ದಾಖಲೆಗೆ ಸಾಕ್ಷಿಯಾದ ಪಂದ್ಯಾವಳಿ

1997ರಲ್ಲಿ ವೀರಾಜಪೇಟೆ ತಾಲೂಕಿನ ಕುಗ್ರಾಮ ಕರಡದಲ್ಲಿ ಆರಂಭಗೊಂಡ ಹಾಕಿನಮ್ಮೆ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಾ 'ಲಿಮ್ಕಾ ಬುಕ್ ಆಫ್ ರೆಕಾರ್ಡ್ ನಲ್ಲಿ ಮಾತ್ರವಲ್ಲದೆ ಗಿನ್ನಿಸ್ ದಾಖಲೆಯನ್ನು ಬರೆಯುವಂತಾಗಿದೆ. ಜತೆಗೆ ಎಲ್ಲ ಕೊಡವ ಕುಟುಂಬಗಳ ಮನೆಯಲ್ಲಿ ಹಾಕಿಸ್ಟಿಕ್, ಬಾಲ್ ಕಾಣುವಂತಾಗಿದೆ. ಅಷ್ಟೇ ಅಲ್ಲದೆ ಪಂದ್ಯಾವಳಿಯಲ್ಲಿ ಹುಡುಗ, ಹುಡುಗಿ ಎನ್ನುವ ಯಾವ ಲಿಂಗಬೇಧವಿಲ್ಲದೆ ಎಲ್ಲರೂ ಒಟ್ಟಾಗಿ ಆಟ ಆಡುವಂತಾಗಿದೆ. ಇದು ವಿಶೇಷದಲ್ಲಿ ವಿಶೇಷವಾಗಿದೆ. ಇದಲ್ಲೆದಕ್ಕೆ ಕಾರಣವಾಗಿರುವುದು ಮತ್ಯಾರೂ ಅಲ್ಲ ಪಾಡಂಡ ಕುಟ್ಟಪ್ಪರವರೇ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+