ಕೊಡಗು ಜಿಲ್ಲೆಯಲ್ಲಿ ಹೊಸ ತಾಲೂಕು; ಅಧಿಕೃತ ಆದೇಶ
ಮಡಿಕೇರಿ, ಜುಲೈ 07 : ದಶಕಗಳ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಿದೆ. ಕೊಡಗು ಜಿಲ್ಲೆಯಲ್ಲಿ ಹೊಸ ತಾಲೂಕು ರಚನೆಯಾಗಲಿದೆ. ಕರ್ನಾಟಕ ಸರ್ಕಾರ ಪೊನ್ನಂಪೇಟೆ ತಾಲೂಕು ರಚನೆ ಮಾಡಲು ಅಧಿಕೃತ ಆದೇಶ ಹೊರಡಿಸಿದೆ.
ಪೊನ್ನಂಪೇಟೆ ತಾಲೂಕು ಹೋರಾಟ ಸಮಿತಿಯ ದಶಕಗಳ ಹೋರಾಟಕ್ಕೆ ಫಲ ಸಿಕ್ಕಿದೆ. ತಾಲೂಕು ರಚನೆಗೆ ಕರ್ನಾಟಕ ಸರ್ಕಾರ ಕರಡು ಆದೇಶ ಪ್ರಕಟ ಮಾಡಿತ್ತು. ಯಾವುದೇ ಆಕ್ಷೇಪಣೆ ಬರದ ಹಿನ್ನಲೆಯಲ್ಲಿ ಅಧಿಕೃತ ಆದೇಶ ಹೊರಡಿಸಲಾಗಿದೆ.

ವಿರಾಜಪೇಟೆ ತಾಲೂಕಿನ ಪೊನ್ನಂಪೇಟೆ ಸರ್ಕಲ್ ಅನ್ನು ಹೊಸ ತಾಲೂಕು ಆಗಿ ರಚನೆ ಮಾಡಲು ಒಪ್ಪಿಗೆ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಹೊಸ ತಾಲೂಕಿನ ವ್ಯಾಪ್ತಿಗೆ ಬರುವ ಹೋಬಳಿ, ಗ್ರಾಮಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಒಟ್ಟು 21 ಗ್ರಾಮ ಪಂಚಾಯಿತಿಗಳು ನೂತನ ತಾಲೂಕು ರಚನೆಯಾಗಬೇಕು ಎಂದು ನಿರ್ಣಯವನ್ನು ಮಂಡನೆ ಮಾಡಿದ್ದವು. ಆಹಾರ ನಿಗಮದ ಕಟ್ಟಟದ ಕಚೇರಿಯಲ್ಲಿ ನೂತನ ತಾಲೂಕು ಕೇಂದ್ರ ಸದ್ಯಕ್ಕೆ ಕಾರ್ಯ ನಿರ್ವಹಣೆ ಮಾಡುವ ಸಾಧ್ಯತೆ ಇದೆ.
ಏಪ್ರಿಲ್‌ನಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನೂತನ ತಾಲೂಕು ಕೇಂದ್ರವನ್ನು ಉದ್ಘಾಟನೆ ಮಾಡಬೇಕಿತ್ತು. ಈ ಕುರಿತು ಪೊನ್ನಂಪೇಟೆ ತಾಲೂಕು ಹೋರಾಟ ಸಮಿತಿ ಸಭೆಯನ್ನು ನಡೆಸಿತ್ತು. ಆದರೆ, ಕೊರೊನಾ ವೈರಸ್ ಸೋಂಕಿನ ಕಾರಣ ಕಾರ್ಯಕ್ರಮ ನಡೆಯಲಿಲ್ಲ.












Click it and Unblock the Notifications