ಎರಡೇ ವಿಧಾನಸಭಾ ಕ್ಷೇತ್ರ; ಕೊಡಗು ಜಿಲ್ಲೆಯ ಮತದಾರರು ಎಷ್ಟು?
ಬೆಂಗಳೂರು, ಮಾರ್ಚ್ 30; ಕೇಂದ್ರ ಚುನಾವಣಾ ಆಯೋಗ ಕರ್ನಾಟಕ ವಿಧಾನಸಭೆ ಚುನಾವಣೆ 2023ರ ವೇಳಾಪಟ್ಟಿ ಘೋಷಣೆ ಮಾಡಿದೆ. 224 ಕ್ಷೇತ್ರಗಳಿಗೆ ಮೇ 10ರ ಬುಧವಾರ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 13ರ ಶನಿವಾರ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ರಾಜ್ಯದಲ್ಲಿ ತಕ್ಷಣದಿಂದಲೇ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ.
ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಕೊಡಗು ಜಿಲ್ಲಾಧಿಕಾರಿ ಡಾ. ಬಿ. ಸಿ. ಸತೀಶ ಪತ್ರಿಕಾಗೋಷ್ಠಿ ನಡೆಸಿದರು. ಕೊಡಗು ಜಿಲ್ಲೆಯಲ್ಲಿ ಇರುವುದು ಮಡಿಕೇರಿ ಮತ್ತು ವಿರಾಜಪೇಟೆ ಎರಡು ವಿಧಾನಸಭಾ ಕ್ಷೇತ್ರಗಳು. ಜಿಲ್ಲೆಯಲ್ಲಿ ಒಟ್ಟು 542 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗುತ್ತದೆ ಎಂದು ಹೇಳಿದರು.

ಕೊಡಗು ಜಿಲ್ಲೆಯಲ್ಲಿ ಒಟ್ಟು 4,52,642 ಮತದಾರರಿದ್ದಾರೆ. ಇವರಲ್ಲಿ 4,51,216 ಸಾಮಾನ್ಯ ಮತದಾರರು ಮತ್ತು 1,426 ಸೇವಾ ಮತದಾರರು. ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2,30,359 ಮತದಾರರು ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 2,22,283 ಮಂದಿ ಮತದಾರರಿದ್ದಾರೆ. ಮಡಿಕೇರಿಯಲ್ಲಿ 269 ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 273 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗುತ್ತದೆ.
ಜಿಲ್ಲೆಯಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಚುನಾವಣಾ ಆಯೋಗದ ನಿರ್ದೇಶನದಂತೆ ಈಗಾಗಲೇ ವಿವಿಧ ತಂಡಗಳನ್ನು ನೇಮಕ ಮಾಡಲಾಗಿದೆ. ಎಂಸಿಸಿ ಇಬ್ಬರು ನೋಡಲ್ ಅಧಿಕಾರಿಗಳು, 41 ಸೆಕ್ಟರ್ ಅಧಿಕಾರಿಗಳು, 14 ಫ್ಲೈಯಿಂಗ್ ಸ್ಕ್ವಾಡ್, 42 ಸ್ಟಾಟಿಕ್ ಸರ್ವೆಲೆನ್ಸ್ ತಂಡ ರಚಿಸಲಾಗಿದೆ.

ಎರಡು ವಿಧಾನಸಭಾ ಕ್ಷೇತ್ರಕ್ಕೆ ತಲಾ ಒಬ್ಬರಂತೆ ಇಬ್ಬರು ಸಹಾಯಕ ವೆಚ್ಚ ವೀಕ್ಷಕರು, ಇಬ್ಬರು ಲೆಕ್ಕ ತಂಡದವರು, ನಾಲ್ಕು ಮಂದಿ ವಿಡಿಯೋ ಸರ್ವಿಲೆನ್ಸ್ ತಂಡ, ಹಾಗೆಯೇ ಇಬ್ಬರು ವಿಡಿಯೋ ವಿವಿಂಗ್ ತಂಡವನ್ನು ರಚಿಸಲಾಗಿದೆ. ಚುನಾವಣಾ ವೆಚ್ಚಗಳ ಮೇಲೆ ಈ ತಂಡ ಕಣ್ಗಾವಲು ಇಡಲಿದೆ.
ಅಭಿಯಾನ ಆರಂಭಿಸಲಾಗಿದೆ; ಕೊಡಗು ಜಿಲ್ಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಡಿಮೆ ಮತದಾನವಾಗಿದ್ದ 65 ಮತಗಟ್ಟೆಗಳನ್ನು ಗುರುತಿಸಲಾಗಿದೆ. ಈ ಬಾರಿ ಹೆಚ್ಚಿನ ಮತದಾನ ಆಗುವಂತೆ ಮಾಡಲು ಅಭಿಯಾನ ಕೈಗೊಳ್ಳಲಾಗಿದೆ. ಸಹಾಯವಾಣಿ ಮತ್ತು ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕವೂ ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಬಗ್ಗೆ ಖಾತರಿ ಪಡಿಸಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.
ಕೊಡಗು ಬೇರೆ ರಾಜ್ಯಗಳ ಜೊತೆ ಗಡಿಯನ್ನು ಹಂಚಿಕೊಂಡಿದೆ. ಕುಟ್ಟ, ಮಾಕುಟ್ಟ, ಕರಿಕೆ ಸೇರಿ 3 ಅಂತರ ರಾಜ್ಯ ಚೆಕ್‍ಪೋಸ್ಟ್‌ಗಳನ್ನು ಸ್ಥಾಪನೆ ಮಾಡಲಾಗಿದೆ. ಹಾಗೆಯೇ 11 ಅಂತರ್ ಜಿಲ್ಲಾ ಚೆಕ್ ಪೋಸ್ಟ್‌ಗಳನ್ನು ತೆರೆಯಲಾಗಿದೆ. ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗುತ್ತದೆ. ಶಾಂತಿಯುತ ಚುನಾವಣೆಗೆ ಪೊಲೀಸ್ ಇಲಾಖೆ ಎಲ್ಲಾ ರೀತಿಯ ಕ್ರಮಗಳನ್ನು ಸಹ ಕೈಗೊಂಡಿದೆ.
ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ವ್ಯಾಪ್ತಿಯಲ್ಲಿ 151 ಹಾಡಿಗಳಿಗೆ ಎರಡು ಬಾರಿ ಭೇಟಿ ನೀಡಿ ಸುಮಾರು 1002 ಮಂದಿ ಆದಿವಾಸಿಗಳ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ, ಕೋವಿಡ್ 19 ಸೋಂಕಿತ ಅಥವಾ ಬಾಧಿತ ವ್ಯಕ್ತಿಗಳಿಗೆ ಹಾಗೂ ಅಗತ್ಯ ಸೇವೆಗಳ ಮೇಲಿರುವ ಅಂದರೆ ಗೈರು ಹಾಜರಿ ಮತದಾರರಿಗೆ ಅಂಚೆ ಮತಪತ್ರಗಳನ್ನು ವಿತರಣೆ ಮಾಡಲಾಗುತ್ತದೆ. 80 ವರ್ಷ ಮೇಲ್ಪಟ್ಟವರು ಮನೆಯಿಂದಲೇ ಮತದಾನ ಮಾಡಲು ಅವಕಾಶ ನೀಡಲಾಗಿದೆ.
ಅಂಚೆ ಮತದಾರನು ಒಂದು ಬಾರಿ ಅಂಚೆ ಮತಪತ್ರದ ಮೂಲಕ ಮತ ಚಲಾಯಿಸುವುದಾಗಿ ಆಯ್ಕೆ ಮಾಡಿಕೊಂಡಲ್ಲಿ ಯಾವುದೇ ಕಾರಣಕ್ಕೂ ಮತಗಟ್ಟೆಗೆ ಹೋಗಿ ಮತಚಲಾಯಿಸಲು ಆಗುವುದಿಲ್ಲ. ಚುನಾವಣೆಗೆ ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕದಂದು ಆ ಮತದಾರರ ಪಟ್ಟಿಯನ್ನು ಅಂತಿಮಗೊಳಿಸಲಾಗುವುದು ಹಾಗೂ ಚುನಾವಣೆಯು ಮುಕ್ತಾಯಗೊಳ್ಳುವವರೆಗೂ ಆ ಪಟ್ಟಿಯಲ್ಲಿ ಯಾವುದೇ ಹೆಚ್ಚುವರಿ ಸೇರ್ಪಡೆ ಅಥವಾ ತೆಗೆದುಹಾಕಲು ಅವಕಾಶವಿಲ್ಲ.












Click it and Unblock the Notifications