ಕ್ಯಾಮೆರಾವನ್ನು ಕೋವಿಯೆಂದು ಭ್ರಮಿಸಿ ಓಡಿತೆ ಸಾಕಾನೆ?
ಮಡಿಕೇರಿ, ಏಪ್ರಿಲ್ 7: ಫೋಟೋ ಕ್ಲಿಕ್ಕಿಸಲು ಮುಂದಾದಾಗ ಕ್ಯಾಮೆರಾವನ್ನು ನೋಡಿದ ಸಾಕಾನೆ ಬೆಚ್ಚಿ ಓಡಿದ ಘಟನೆ ಕುಶಾಲನಗರ ಬಳಿಯ ಆನೆಕಾಡು ಅರಣ್ಯದಲ್ಲಿ ನಡೆದಿದೆ. ಕೋವಿಯಿಂದ ಗುಂಡು ಹಾರಿಸುವ ಮೂಲಕ ಅರಿವಳಿಕೆ ನೀಡಿ, ಸೆರೆ ಹಿಡಿದಿದ್ದ ಕಾಡಾನೆಯನ್ನು ಆ ಬಳಿಕ ಪಳಗಿಸಿ, ತರಬೇತಿ ನೀಡಲಾಗಿತ್ತು. ಆ ನಂತರ ಅದು ಮಾವುತ ಮತ್ತು ಕಾವಾಡಿಗಳ ಮಾತನ್ನು ಕೇಳುತ್ತಾ ಸಾಕಾನೆಗಳ ಮಧ್ಯೆ ಹೊಂದಿಕೊಂಡು ಸಾಗುತ್ತಿದೆ.
ಇಂತಹ ಸಾಕಾನೆ ಕ್ಯಾಮೆರಾ ಕಂಡು ಓಡಿದ್ದರಿಂದ ಅದರೊಂದಿಗಿದ್ದ ಮಾವುತ ಮತ್ತು ಕಾವಾಡಿಗಳಿಗೆ ದಿಕ್ಕೇ ತೋಚದಂತಾಗಿತ್ತು. ಇಷ್ಟಕ್ಕೂ ಈ ಆನೆ ಓಡಿದ್ದಾದರೂ ಏಕೆಂದರೆ, ಫೋಟೋಗ್ರಾಫರ್ ಕ್ಯಾಮೆರಾವನ್ನು ಅದರ ಮುಂದೆ ಹಿಡಿದಿದ್ದರಿಂದ ಗಾಬರಿಯಾಗಿ ಓಡಿದೆ.[ರಾಮನಗರ: ರೈತರ ಬದುಕು ಬರಡಾಗಿಸಿದ ಕಾಡಾನೆಗಳು]

ಕೆಲವು ಸಮಯದ ಹಿಂದೆ ಆನೆಕಾಡಿಗೆ ಬೆಂಕಿ ಬಿದ್ದು, ಅರಣ್ಯವೇ ನಾಶವಾಗಿ ಹೋಗಿತ್ತು. ಅಲ್ಲಿನ ಪರಿಸ್ಥಿತಿ ಹೇಗಿದೆ ಎಂದು ತಿಳಿದು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಆನೆ ಕಾಡಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ಎದುರಿನಿಂದ ಬರುತ್ತಿದ್ದ ಆನೆಯನ್ನು ಕಂಡಿದ್ದಾರೆ. ಇದರ ಮೇಲೆ ಮಾವುತ ಹಾಗೂ ಕಾವಾಡಿಗರು ಕುಳಿತು ಬರುತ್ತಿರುವ ದೃಶ್ಯ ಒಂದು ರೀತಿಯಲ್ಲಿ ಸ್ವಲ್ಪ ವಿಭಿನ್ನವಾಗಿರುವಂತೆ ಕಂಡಿದೆ.

ಹಾಗಾಗಿ ತಮ್ಮ ಬ್ಯಾಗ್ ನಲ್ಲಿದ್ದ ಕ್ಯಾಮೆರಾವನ್ನು ತೆಗೆದು, ಅದರ ಮುಂದೆ ಹಿಡಿದು ಇನ್ನೇನು ಕ್ಲಿಕ್ಕಿಸಬೇಕು ಎಂದುಕೊಳ್ಳುವಾಗಲೇ ಎದುರಿನಿಂದ ಬರುತ್ತಿದ್ದ ಆನೆಗೆ ಕ್ಯಾಮೆರಾ ಬಹುಶಃ ಬಂದೂಕಿನಂತೆ ಕಂಡಿರಬೇಕು. ತಕ್ಷಣ ಅದು ಬೆಚ್ಚಿದ್ದಲ್ಲದೆ ಓಡಲು ಮುಂದಾಗಿದೆ. ಈ ಸಂದರ್ಭದಲ್ಲಿ ಆನೆ ಮೇಲಿದ್ದ ಮಾವುತ ಮತ್ತು ಕಾವಾಡಿಗರು ಕೆಳಕ್ಕಿಳಿದು ಬಚಾವಾಗಿದ್ದಾರೆ.[ಕಬಿನಿ ಹಿನ್ನೀರಲ್ಲಿ 4 ಅಡಿ ಉದ್ದದ ದಂತವಿರುವ ದೈತ್ಯ ಗಾತ್ರದ ಆನೆ]
ಅಷ್ಟೇ ಅಲ್ಲ, ಫೋಟೋಗ್ರಾಫರ್ ಜತೆಗೆ ವಾಗ್ವಾದಕ್ಕಿಳಿದಿದ್ದಾರೆ. ಆ ನಂತರ ಆನೆ ಹೋದ ದಿಕ್ಕಿನತ್ತ ಕಾಡಿಗೆ ಹೋಗಿ, ಅದನ್ನು ತಡೆದು ನಿಲ್ಲಿಸಿದ್ದಾರೆ.












Click it and Unblock the Notifications