ಮತದಾರರ ಪಟ್ಟಿ ಪ್ರಕಟ: ಚಿಕ್ಕ ಜಿಲ್ಲೆ ಕೊಡಗು ಜಿಲ್ಲೆಯ ಒಟ್ಟು ಮತದಾರರು ಎಷ್ಟು?
ಮಡಿಕೇರಿ, ಅಕ್ಟೋಬರ್ 30: ಕೇಂದ್ರ ಚುನಾವಣಾ ಆಯೋಗವು ಪ್ರತೀ ವರ್ಷ ಜನವರಿ 1 ಅನ್ನು ಅರ್ಹತಾ ದಿನಾಂಕವಾಗಿ ನಿಗದಿಪಡಿಸಿಕೊಂಡು ಭಾವಚಿತ್ರವಿರುವ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣಾ ಕಾರ್ಯವನ್ನು ಕೈಗೊಳ್ಳಲು ವೇಳಾಪಟ್ಟಿ ಪ್ರಕಟಿಸಿದೆ. ಕರ್ನಾಟಕದ ಅತಿ ಚಿಕ್ಕ ಜಿಲ್ಲೆಯಾದ ಕೊಡಗು ಜಿಲ್ಲೆಯ ಒಟ್ಟು ಮತದಾರರ ಘೋಷಣೆಯಾಗಿದೆ. ಅಕ್ಟೋಬರ್ 29ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ನವೆಂಬರ್ 9, 10, 23 ಮತ್ತು 24 ರಂದು ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ವಿಶೇಷ ಅಭಿಯಾನ ನಡೆಯಲಿದೆ.
ಮಡಿಕೇರಿ ನಗರದ ಹೆಚ್ಚುವರಿ ಜಿಲ್ಲಾಧಿಕಾರಿ ಕಛೇರಿಯಲ್ಲಿ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಸಂಬಂಧ ವಿವಿಧ ರಾಜಕೀಯ ಪಕ್ಷಗಳ ಪ್ರಮುಖರ ಜೊತೆ ಸಭೆ ನಡೆಯಿತು. ಡಿಸೆಂಬರ್ 24ರಂದು ಮನವಿ/ ಆಕ್ಷೇಪಣೆಗಳ ಸರಿಪಡಿಸುವ ಕಾರ್ಯ ನಡೆಯಲಿದೆ. 2025ರ ಜನವರಿ 1ರಂದು ಅಂತಿಮ ಮತದಾರರ ಪಟ್ಟಿ ಪರಿಶೀಲನಾ ಕಾರ್ಯ ನಡೆಯಲಿದೆ. 2025 ಜನವರಿ 6ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ.

ಕೊಡಗು ಜಿಲ್ಲೆಯಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 2 ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ 4 ಮತಗಟ್ಟೆಗಳು ಒಟ್ಟು 6 ಮತಗಟ್ಟೆಗಳು ಹೆಚ್ಚಳವಾಗಿದ್ದು, ಮಡಿಕೇರಿ ವಿಧಾನಸಭಾ ಕ್ಷೇತ್ರದ ಗದ್ದೆಹಳ್ಳ, ಗುಮ್ಮನಕೊಲ್ಲಿ, ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಾಡಗ ಬಾನಂಗಾಲ(ಹುಂಡಿ), ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕುಶಾಲಪ್ಪ ಮೆಮೋರಿಯಲ್ ಬಳಿಯ ಶಿಶು ವಿಹಾರ ಕೇಂದ್ರ, ಗೋಣಿಕೊಪ್ಪ ರಸ್ತೆ ಹಾಗೂ ಪಂಜರಪೇಟೆಯ ಉರ್ದುಶಾಲೆ ಇಲ್ಲಿ ಹೊಸ ಮತಗಟ್ಟೆಗಳು ಸ್ಥಾಪನೆ ಆಗಿವೆ.
ಜಿಲ್ಲೆಯ ಒಟ್ಟು ಮತದಾರರು: ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಭಾವಚಿತ್ರವಿರುವ ಮತದಾರರ ಪಟ್ಟಿಯನ್ನು ಎಲ್ಲಾ ಮತಗಟ್ಟೆಗಳಲ್ಲಿ, ತಾಲ್ಲೂಕು ಕಚೇರಿಗಳಲ್ಲಿ, ಉಪ ವಿಭಾಗಾಧಿಕಾರಿಗಳ ಕಚೇರಿ ಮತ್ತು ಜಿಲ್ಲಾ ಚುನಾವಣಾಧಿಕಾರಿಯವರ ಕಚೇರಿಯಲ್ಲಿ ಪ್ರಕಟಿಸಲಾಗಿದೆ. ಜನರು ಕರಡು ಮತದಾರರ ಪಟ್ಟಿಯನ್ನು https://ceo.karnataka.gov.in ಮತ್ತು https://kodagu.nic.in website ನಲ್ಲಿಯೂ ಸಹ ಪರಿಶೀಲಿಸಬಹುದು.
2024ರ ಅಕ್ಟೋಬರ್ 29ರ ಪ್ರಕಟಣೆಯಂತೆ ಜಿಲ್ಲೆಯಲ್ಲಿ 552 ಮತಗಟ್ಟೆಗಳಲ್ಲಿ 4,74,097 ಮತದಾರರು ಇದ್ದಾರೆ. ಇದರಲ್ಲಿ 2,32,041 ಪುರುಷರು, 2,42,041 ಮಹಿಳಾ ಮತದಾರರು ಹಾಗೂ 15 ಇತರ ಮತದಾರರು. ವಿಧಾನಸಭಾ ಕ್ಷೇತ್ರವಾರು ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 275 ಮತಗಟ್ಟೆಯಲ್ಲಿ 2,40,247 ಮತದಾರರು ಇದ್ದು, ಇದರಲ್ಲಿ 1,16,787 ಪುರುಷ ಮತದಾರರು, 1,23,452 ಮಹಿಳಾ ಮತದಾರರು ಮತ್ತು 8 ಇತರ ಮತದಾರರು.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 277 ಮತಗಟ್ಟೆಗಳಿದ್ದು, 2,33,850 ಮತದಾರರು ಇದ್ದಾರೆ. ಇದರಲ್ಲಿ 1,15,254 ಪುರುಷ ಮತದಾರರು, 1,18,589 ಮಹಿಳಾ ಮತದಾರರು, 7 ಮಂದಿ ಇತರೆ ಮತದಾರರು ಇದ್ದಾರೆ.
ಅಕ್ಟೋಬರ್ 29 ರಿಂದ ನವೆಂಬರ್, 28 ರವರೆಗೆ 2025ರ ಜನವರಿ 1, 2025ರ ಏಪ್ರಿಲ್ 1, 2025ರ ಜುಲೈ 1 ಮತ್ತು 2025ರ ಅಕ್ಟೋಬರ್ 1ಕ್ಕೆ 18 ವರ್ಷ ಪೂರ್ಣಗೊಳ್ಳುವ ಯುವಕ, ಯುವತಿಯರು ಮತ್ತು 18 ವರ್ಷ ಮೇಲ್ಪಟ್ಟ ನಾಗರಿಕರು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ನಮೂನೆ-6 ರಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಿರುವ ಮತದಾರರು ಮೃತ, ಸ್ಥಳಾಂತರ, ಪುನರಾವರ್ತನೆ ಆಗಿದ್ದಲ್ಲಿ ಹೆಸರುಗಳನ್ನು ತೆಗೆಯಲು ನಮೂನೆ-7ರಲ್ಲಿ ಆಕ್ಷೇಪಣೆ ಅರ್ಜಿಯನ್ನು ವೇಳಾಪಟ್ಟಿ ದಿನಾಂಕದಲ್ಲಿ ಪಡೆದುಕೊಳ್ಳಲಾಗುತ್ತದೆ.
ಮತದಾರರ ಗುರುತಿನ ಚೀಟಿಯಲ್ಲಿನ ನಮೂದುಗಳು ತಪ್ಪಾಗಿದ್ದಲ್ಲಿ ತಿದ್ದುಪಡಿ ಮಾಡಲು ಹಾಗೂ ವಿಧಾನಸಭಾ ಕ್ಷೇತ್ರದ ಒಂದು ಮತಗಟ್ಟೆಯಿಂದ ಇನ್ನೊಂದು ಮತಗಟ್ಟೆಗೆ ವರ್ಗಾವಣೆ ಮಾಡಲು ನಮೂನೆ-8ರಲ್ಲಿ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ಅನಿವಾಸಿ ಭಾರತೀಯರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ನಮೂನೆ-6ಎ ರಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ನವೆಂಬರ್, 9, 10, 23 ಮತ್ತು 24 ರಂದು ಮತಗಟ್ಟೆಗಳಲ್ಲಿ ವಿಶೇಷ ನೋಂದಣಿ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿದ್ದು, ನಾಗರಿಕರು ಇದರ ಉಪಯೋಗವನ್ನು ಪಡೆದುಕೊಂಡು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಿರುವ ಬಗ್ಗೆ ಖಚಿತ ಪಡಿಸಿಕೊಳ್ಳಬಹುದು.
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 1500ಕ್ಕಿಂತ ಹೆಚ್ಚು ಮತದಾರರು ಇರುವ ಕೊಡಗು ಜಿಲ್ಲೆಯ ಎರಡು ವಿಧಾನ ಸಭಾ ಕ್ಷೇತ್ರಗಳಿಂದ ಒಟ್ಟು 6 ಮತಗಟ್ಟೆಗಳನ್ನು ಪುನರ್ ವಿಂಗಡಣೆ ಮಾಡಿ ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು, ಭಾರತ ಚುನಾವಣಾ ಆಯೋಗವು ಪ್ರಸ್ತಾವನೆಗೆ ಅನುಮೋದನೆ ನೀಡಿದೆ.












Click it and Unblock the Notifications