Breaking: ನೂಪುರ್ ಶರ್ಮಾ ಹತ್ಯೆಗೆ ಸ್ಕೆಚ್ ಹಾಕಿದ್ದ ಉಗ್ರ ಅರೆಸ್ಟ್
ಲಕ್ನೋ, ಆಗಸ್ಟ್ 12: ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಹತ್ಯೆಗಾಗಿ ಹೊಂಚು ಹಾಕಿದ್ದ ಎನ್ನಲಾದ ಜೈಶ್-ಎ-ಮೊಹಮ್ಮದ್ ಸಂಘಟನೆ ಉಗ್ರನನ್ನು ಉತ್ತರ ಪ್ರದೇಶ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಬಂಧಿತನಾದ ಭಯೋತ್ಪಾದಕನಿಗೆ ಪಾಕಿಸ್ತಾನದ ಜೈಶ್-ಎ-ಮೊಹಮ್ಮದ್ ಸಂಘಟನೆ ನಂಟಿದೆ. ಬಂಧಿಸಲ್ಪಟ್ಟ ಭಯೋತ್ಪಾದಕನು ಸಹರಾನ್‌ಪುರದ ಗಂಗೋಹ್ ಗ್ರಾಮದ ಮೊಹಮ್ಮದ್ ನದೀಮ್ ಎಂದು ಗುರುತಿಸಲಾಗಿದೆ. ನೂಪುರ್ ಶರ್ಮಾ ಹತ್ಯೆಯ ಹೊಣೆಯನ್ನು ಈತನಿಗೇ ವಹಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರವಾದಿ ಮೊಹಮ್ಮದ್ ವಿರುದ್ಧ ನೂಪುರ್ ಶರ್ಮಾ ನೀಡಿದ ವಿವಾದಾತ್ಮಕ ಹೇಳಿಕೆಗಳು ಭಾರತದಲ್ಲಿ ತೀವ್ರ ವಿರೋಧ ಮತ್ತು ಪ್ರತಿಭಟನೆಗೆ ಕಾರಣವಾಗಿತ್ತು. ಅಲ್ಲದೇ ಗಲ್ಭ್ ರಾಷ್ಟ್ರಗಳಿಂದಲೂ ಸಹ ತೀವ್ರ ಟೀಕೆಯನ್ನು ಎದುರಿಸಬೇಕಾಯಿತು. ಈ ಬೆಳವಣಿಗೆ ಬೆನ್ನಲ್ಲೇ ನೂಪುರ್ ಶರ್ಮಾರನ್ನು ಬಿಜೆಪಿಯಿಂದ ವಜಾಗೊಳಿಸಲಾಗಿತ್ತು.

ಪೊಲೀಸರ ಎದುರು ಸತ್ಯ ಒಪ್ಪಿಕೊಂಡ ಉಗ್ರ: ಭಾರತದಲ್ಲಿ ಪ್ರವಾದಿಗಳ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ನೂಪುರ್ ಶರ್ಮಾರನ್ನು ಕೊಲ್ಲುವುದಕ್ಕಾಗಿಯೇ ಪಾಕಿಸ್ತಾನದ ಜೈಶ್-ಎ-ಮೊಹಮ್ಮದ್ ಸಂಘಟನೆಯು ತನ್ನನ್ನು ನಿಯೋಜಿಸಿದೆ ಎಂದು ಸ್ವತಃ ಭಯೋತ್ಪಾದಕನೇ ಪೊಲೀಸರ ಎದುರಿಗೆ ಒಪ್ಪಿಕೊಂಡಿದ್ದಾನೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉಗ್ರನ ಮೊಬೈಲ್ ನೀಡಿದ ಸಾಕ್ಷಿಗಳು: ಉಗ್ರ ಮೊಹಮ್ಮದ್ ನದೀಮ್ ಶಸ್ತ್ರಾಸ್ತ್ರ ತರಬೇತಿಗಾಗಿ ಪಾಕಿಸ್ತಾನಕ್ಕೆ ತೆರಳಲು ಸಿದ್ಧನಾಗಿದ್ದು, ಫೋನ್ ದಾಖಲೆಗಳು ಮತ್ತು ಸಂದೇಶಗಳಿಂದ ಬಹಿರಂಗವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈತನ ಫೋನ್ ದಾಖಲೆಗಳು ಸುಧಾರಿತ ಸ್ಫೋಟಕ ಸಾಧನ ಅಥವಾ IED ಅನ್ನು ಹೇಗೆ ನಿರ್ಮಿಸುವುದು ಎಂಬುದರ ಸಂಪೂರ್ಣ ಕೋರ್ಸ್ ಅನ್ನು ತೋರಿಸುತ್ತವೆ. ಇದರ ಜೊತೆಗೆ ಜೈಶ್ ಮತ್ತು ಥರೀಕ್-ಎ-ತಾಲಿಬಾನ್ ಜೊತೆಗಿನ ಚಾಟ್ ಮತ್ತು ಧ್ವನಿ ಸಂದೇಶಗಳನ್ನು ಮೊಹಮ್ಮದ್ ನದೀಮ್ ಫೋನ್‌ನಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.












Click it and Unblock the Notifications