ಹತ್ರಾಸ್ ಸಂತ್ರಸ್ತೆ ಕುಟುಂಬಕ್ಕೆ ಸುಳ್ಳು ಹೇಳಲು 50 ಲಕ್ಷ ರೂ.!
ಲಕ್ನೋ, ಅಕ್ಟೋಬರ್.05: ಉತ್ತರ ಪ್ರದೇಶ ಹತ್ರಾಸ್ ಅತ್ಯಾಚಾರ ಪ್ರಕರಣದ ಬೆನ್ನಲ್ಲೇ ಪೊಲೀಸರು ದಾಖಲಿಸಿಕೊಂಡಿರುವ 19 ಎಫ್ಐಆರ್ ಗಳ ಪೈಕಿ ಒಂದರಲ್ಲಿ ಅಪರಿಚಿತ ವ್ಯಕ್ತಿಗಳು ದೇಶದ್ರೋಹ ಮತ್ತು ಪಿತೂರಿ ನಡೆಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ನಾಲ್ವರು ದುಷ್ಕರ್ಮಿಗಳು ನಡೆಸಿದ ಅತ್ಯಾಚಾರ ಮತ್ತು ಹಲ್ಲೆಯಿಂದ ಮೃತಪಟ್ಟ ಸಂತ್ರಸ್ತೆಯ ಕುಟುಂಬಸ್ಥರು ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡಿದ್ದಲ್ಲಿ 50 ಲಕ್ಷ ರೂಪಾಯಿ ನೀಡುವುದಾಗಿ ಆಮಿಷವೊಡ್ಡಿದ್ದರು ಎಂದು ಎಫ್ಐಆರ್ ನಲ್ಲಿ ಆರೋಪಿಸಲಾಗಿದೆ.
ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಅಪರಿಚಿತ ವ್ಯಕ್ತಿಗಳು ಪಿತೂರಿ ನಡೆಸುತ್ತಿದ್ದಾರೆ. ಹತ್ರಾಸ್ ಪ್ರಕರಣವನ್ನೇ ತಮ್ಮ ಲಾಭಕ್ಕೆ ಬಳಸಿಕೊಳ್ಳುವ ಯತ್ನ ನಡೆಯುತ್ತಿದೆ ಎಂಬ ಆರೋಪವೂ ಕೇಳಿ ಬರುತ್ತಿದೆ. ಈ ಬಗ್ಗೆ ಹತ್ರಾಸ್ ಸಬ್ ಇನ್ಸ್ ಪೆಕ್ಟರ್ ನೀಡುವ ಹೇಳಿಕೆ ಆಧರಿಸಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.

ಇನ್ಸ್ ಪೆಕ್ಟರ್ ಹೇಳಿಕೆಯನ್ನು ಆಧರಿಸಿ ಒಂದು ಎಫ್ಐಆರ್
ಹತ್ರಾಸ್ ನಲ್ಲಿ ದಾಖಲಾಗಿರುವ ಆರು ಎಫ್ಐಆರ್ ಗಳ ಪೈಕಿ ಒಂದು ಎಫ್ಐಆರ್ ನ್ನು ಸಬ್-ಇನ್ಸ್ ಪೆಕ್ಟರ್ ಹೇಳಿಕೆ ಆಧರಿಸಿ ದಾಖಲಿಸಿಕೊಳ್ಳಲಾಗಿದೆ. "ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡುವಂತೆ ಅಪರಿಚಿತ ಮೂಲಗಳಿಂದ ಸಂತ್ರಸ್ತೆ ಮತ್ತು ಕುಟುಂಬ ಸದಸ್ಯರಿಗೆ ಹಣದ ಆಮಿಷವೊಡ್ಡಲಾಗಿದೆ. ಸುಳ್ಳು ಆರೋಪ ಮಾಡುವುದಕ್ಕೆ 50 ಲಕ್ಷ ರೂಪಾಯಿ ನೀಡುವುದಾಗಿ ಅಪರಿಚಿತರು ಆಮಿಷವೊಡ್ಡಿದ್ದರು. ಆದರೆ ಸಂತ್ರಸ್ತೆ ಕುಟುಂಬಸ್ಥರಿಗೆ ಹಣದ ಆಮಿಷವೊಡ್ಡಿದ್ದ ಅಪರಿಚಿತ ಮೂಲ ಯಾವುದು ಎಂಬುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ" ಎಂದು ಇನ್ಸ್ ಪೆಕ್ಟರ್ ಹೇಳಿದ್ದರು.

ಉತ್ತರ ಪ್ರದೇಶ ಸಿಎಂ ವಿರುದ್ಧ ಪಿತೂರಿ ಬಗ್ಗೆ ಎಫ್ಐಆರ್
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ನೀಡಿರುವ ಹೇಳಿಕೆಗಳನ್ನೇ ಆಧರಿಸಿ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳನ್ನು ವೈರಲ್ ಮಾಡಲಾಗುತ್ತಿದೆ. ಆ ಮೂಲಕ ಸಿಎಂ ವಿರುದ್ಧ ಪಿತೂರಿ ಮಾಡಲಾಗುತ್ತಿದೆ ಎಂದು ಪೊಲೀಸರು ದಾಖಲಿಸಿಕೊಂಡಿರುವ ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ. ರಾಜ್ಯಾದ್ಯಂತ ಉತ್ರಾಸ್ ಪ್ರಕರಕ್ಕೆ ಸಂಬಂಧಿಸಿದಂತೆ 19 ಎಫ್ಐಆರ್ ಗಳನ್ನು ದಾಖಲಿಸಿಕೊಳ್ಳಲಾಗಿದೆ.

ಶಾಂತಿ ಕದಡುವ ಪ್ರಯತ್ನದ ಬಗ್ಗೆ ಎಫ್ಐಆರ್
ಉತ್ತರ ಪ್ರದೇಶದ ಹತ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣ ನಿಭಾಯಿಸುವಲ್ಲಿ ಸೋತಿರುವ ಪೊಲೀಸರು ಕೆಲವೊಂದು ಎಫ್ಐಆರ್ ಗಳಲ್ಲಿ ಶಾಂತಿ ಕದಡುವ ಪ್ರಯತ್ನ ನಡೆದಿದೆ ಎಂದು ದೂಷಿಸಿದ್ದಾರೆ. ರಾಜ್ಯದಲ್ಲಿ ಶಾಂತಿಗೆ ಭಂಗ ತರುವ ಉದ್ದೇಶದಿಂದಲೇ ಕೆಲವು ಪ್ರಯತ್ನಗಳನ್ನು ನಡೆಸಲಾಗಿದೆ ಎಂದು ಪೊಲೀಸರು ಎಫ್ಐಆರ್ ನಲ್ಲಿ ಆರೋಪಿಸಿದ್ದಾರೆ. ಹತ್ರಾಸ್ ಪ್ರಕರಣದ ಹಿನ್ನೆಲೆಯಲ್ಲಿ ಭಾರಿ ಪಿತೂರಿ ಅಡಗಿದ್ದು ಸತ್ಯವನ್ನು ಪತ್ತೆ ಮಾಡುವುದಕ್ಕೆ ಆಳವಾದ ತನಿಖೆಯನ್ನು ನಡೆಸಲಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಪ್ರಶಾಂತ್ ಕುಮಾರ್ ಹೇಳಿದ್ದಾರೆ.

ಹತ್ರಾಸ್ ಸಂತ್ರಸ್ತೆ ಮನೆ ಸುತ್ತ ಖಾಕಿ ಕಣ್ಗಾವಲು
ಉತ್ತರ ಪ್ರದೇಶ ಹತ್ರಾಸ್ ಅತ್ಯಾಚಾರ ಸಂತ್ರಸ್ತೆ ಕುಟುಂಬಕ್ಕೆ ಜೀವ ಬೆದರಿಕೆ ಇರುವ ಹಿನ್ನೆಲೆ ಕುಟುಂಬ ಸದಸ್ಯರಿಗೆ ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ಸರ್ಕಾರದ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನಿಶ್ ಕುಮಾರ್ ಅವಸ್ಥಿ ತಿಳಿಸಿದ್ದರು. ಹತ್ರಾಸ್ ಅತ್ಯಾಚಾರ ಸಂತ್ರಸ್ತೆ ಕುಟುಂಬ ಸದಸ್ಯರ ಭದ್ರತೆಗಾಗಿ ಅವರ ನಿವಾಸದ ಸುತ್ತ 12 ರಿಂದ 15 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ. ದಿನದ 24 ಗಂಟೆ ಪೊಲೀಸ್ ಕಣ್ಗಾವಲು ಹಾಕಲಾಗಿದೆ ಎಂದು ಹತ್ರಾಸ್ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಮೂವರು ಎಸ್ಎಚ್ಓ, ಒಬ್ಬ ಡೆಪ್ಯುಟಿ ಸೂಪರಿಟೆಂಡೆಂಟ್ ಆಫ್ ಪೊಲೀಸ್ ಶ್ರೇಣಿಯ ಅಧಿಕಾರಿ ಮತ್ತು ಪೊಲೀಸ್ ಕಾನ್ಸ್ ಟೇಬಲ್ ರನ್ನು ನಿಯೋಜಿಸಲಾಗಿದೆ.

ಅತ್ಯಾಚಾರ ನಡೆದಿಲ್ಲ ಎಂದ ವಿಧಿವಿಜ್ಞಾನ ಪ್ರಯೋಗಾಲಯ
ಉತ್ತರ ಪ್ರದೇಶ ಹತ್ರಾಸ್ ಅತ್ಯಾಚಾರ ಸಂತ್ರಸ್ತೆಯ ದೇಹದ ಯಾವುದೇ ಭಾಗದಲ್ಲಿ ಅತ್ಯಾಚಾರ ನಡೆದಿರುವ ಬಗ್ಗೆ ಗುರುತು ಪತ್ತೆಯಾಗಿಲ್ಲ ಎಂದು ವಿಧಿವಿಜ್ಞಾನ ಪ್ರಯೋಗಾಲಯ ನೀಡಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆಗ್ರಾದಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯವು 19 ವರ್ಷದ ಅತ್ಯಾಚಾರ ಸಂತ್ರಸ್ತೆಯ ದೇಹದ ಮಾದರಿ ಪರೀಕ್ಷೆ ನಡೆಸಿತು. ಸೋಮವಾರ ಪರೀಕ್ಷೆಯ ಅಂತಿಮ ವರದಿ ನೀಡಿದ್ದು, ಸಂತ್ರಸ್ತೆಯ ದೇಹದಲ್ಲಿ ವೀರ್ಯ ಮಾದರಿ ಪತ್ತೆಯಾಗಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.












Click it and Unblock the Notifications