ಲೋಕಸಭೆ ಚುನಾವಣೆಯಲ್ಲಿ ಸೋತ ಅಮೇಥಿಯಲ್ಲಿ ರಾಹುಲ್ ಭರ್ಜರಿ ಅಭಿಯಾನ
ಲಕ್ನೋ, ಡಿಸೆಂಬರ್ 18: ಉತ್ತರ ಪ್ರದೇಶ ಸೇರಿದಂತೆ ಪಂಚ ರಾಜ್ಯಗಳಲ್ಲಿ 2022ರ ಆರಂಭದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ಓಡಿಸಿ ಎನ್ನುವ ಅಭಿಯಾನವನ್ನು ನಡೆಸಲಿದ್ದಾರೆ.
ಉತ್ತರಪ್ರದೇಶದಲ್ಲಿ 2022ರ ಪ್ರಾರಂಭದಲ್ಲಿಯೇ ವಿಧಾನಸಭೆ ಚುನಾವಣೆ ನಡೆಯಲಿದ್ದು, ಒಂದೆಡೆ ಬಿಜೆಪಿ ಸರ್ಕಾರ ಸಾಲುಸಾಲು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆಯಲ್ಲಿ ತೊಡಗಿದೆ.
ಪ್ರಧಾನಿ ಮೋದಿ ಈಗಾಗಲೇ ಹಲವು ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ಇತ್ತೀಚೆಗಷ್ಟೇ ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆ ಮಾಡಿರುವ ಅವರು, ಇಂದು ಮತ್ತೆ ಉತ್ತರಪ್ರದೇಶಕ್ಕೆ ಭೇಟಿ ನೀಡಲಿದ್ದು, ಗಂಗಾ ಎಕ್ಸ್ಪ್ರೆಸ್ ವೇ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಹಾಗೇ, ಇನ್ನೊಂದೆಡೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಅಮೇಠಿಗೆ ತೆರಳಲಿದ್ದಾರೆ.

ರಾಹುಲ್ ಗಾಂಧಿ ಅಮೇಥಿಗೆ ಎರಡನೇ ಭಾರಿಗೆ ಭೇಟಿ ನೀಡಲಿದ್ದಾರೆ, 2019ರ ಲೋಕಸಭೆ ಚುನಾವಣೆಯಲ್ಲಿ 50 ಸಾವಿರ ಮತಗಳಿಂದ ಸ್ಮೃತಿ ಇರಾನಿ ವಿರುದ್ಧ ಸೋಲು ಅನುಭವಿಸಿದ್ದರು.
ಮಹಿಳೆಯರಿಗೆ ಪ್ರತ್ಯೇಕವಾದ ಪ್ರಣಾಳಿಕೆ ಬಿಡುಗಡೆ ಮಾಡುತ್ತದೆ ಎಂದು ತಿಳಿದುಬಂದಿದೆ. ಹೀಗೆ ಉತ್ತರ ಪ್ರದೇಶ ಚುನಾವಣೆಯಲ್ಲಿ 'ಮಹಿಳಾ ಅಸ್ತ್ರ' ಪ್ರಯೋಗಕ್ಕೆ ಮುಂದಾಗಿರುವ ಕಾಂಗ್ರೆಸ್ ಪ್ರಿಯಾಂಕಾ ಗಾಂಧಿ ವಾದ್ರಾ ನಾಯಕತ್ವದಲ್ಲಿ ಚುನಾವಣೆ ಎದುರಿಸಲು ಸನ್ನದ್ದವಾಗುತ್ತಿದೆ. ಇನ್ನೊಂದೆಡೆ ಈಗ ಅವರ ಸಹೋದರ ಹಾಗೂ ಎಐಸಿಸಿ ಮಾಜಿ ಅಧ್ಯಕ್ಷರೂ ಆದ ಸಂಸದ ರಾಹುಲ್ ಗಾಂಧಿ ಕೂಡ ಉತ್ತರ ಪ್ರದೇಶ ಚುನಾವಣಾ ಕಣಕ್ಕೆ ಇಳಿಯುತ್ತಿದ್ದಾರೆ.
ರಾಹುಲ್ ಗಾಂಧಿ ಅಮೇಠಿಯಲ್ಲಿ ಇಂದು ಬಿಜೆಪಿಯನ್ನು ಓಡಿಸಿ, ಹಣದುಬ್ಬರ ತೊಲಗಿಸಿ ಎಂಬ ಜಾಥಾದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾಂಗ್ರೆಸ್ನಿಂದ ರಾಷ್ಟ್ರಾದ್ಯಂತ ನವೆಂಬರ್ 14ರಿಂದ ಸಾರ್ವಜನಿಕ ಜಾಗೃತಿ ಅಭಿಯಾನ ನಡೆಯುತ್ತಿದ್ದು, ಅದರ ಒಂದು ಭಾಗವಾಗಿ ಈ ಜಾಥಾದಲ್ಲಿ ಇಂದು ಅಮೇಠಿಯಲ್ಲಿ ನಡೆಯುತ್ತಿದೆ. ಇಂದು ರಾಹುಲ್ ಗಾಂಧಿ ಜಗದೀಶ್ಪುರದಿಂದ ಹರಿಮೌವರೆಗೆ ಪಾದಯಾತ್ರೆ ನಡೆಸಲಿದ್ದಾರೆ ಎಂದೂ ಹೇಳಲಾಗಿದೆ. ಈ ಪಾದಯಾತ್ರೆಯಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರೂ ಕೂಡ ಪಾಲ್ಗೊಳ್ಳುವರು.
ಮುಂದಿನ ವರ್ಷ ನಡೆಯುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಶೇ. 40ರಷ್ಟು ಟಿಕೆಟ್ ಗಳನ್ನು ಮಹಿಳೆಯರಿಗೆ ನೀಡಲು ನಿರ್ಧರಿಸಿದೆ. ಅಲ್ಲದೆ ಈ ಬಾರಿ ತನ್ನ ಪ್ರಣಾಳಿಕೆಯಲ್ಲಿ ವಿಶಿಷ್ಟವಾದ ಘೋಷಣೆ ಮಾಡಲು ತಯಾರಿ ನಡೆಸಿದೆ.
ಹಿಂದೆ ತಾಯಿ ಸೋನಿಯಾ ಗಾಂಧಿ ಬಳಿಕ ರಾಹುಲ್ ಗಾಂಧಿ 2004, 2009 ಮತ್ತು 2014ರಲ್ಲಿ ಅಮೇಥಿಯಿಂದ ಗೆದ್ದು ಸಂಸದರಾಗಿದ್ದರು. 2019ರಲ್ಲಿ ಕೇರಳದ ವೈನಾಡು ಕ್ಷೇತ್ರದಿಂದ ಸ್ಪರ್ಧಿಸಿ ಸಂಸದರಾಗಿದ್ದಾರೆ.
ಈಗ ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತ್ತೆ ತಮ್ಮ ಹಳೆಯ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ.
ಇನ್ನೊಂದೆಡೆ ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿಯೂ ಆಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಉತ್ತರ ಪ್ರದೇಶದಲ್ಲೇ ಬೀಡು ಬಿಟ್ಟಿದ್ದಾರೆ. ಕಳೆದ ವಾರ ಲಕ್ನೋದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ್ದ ಅವರು, 'ನಾವು ಮಹಿಳಾ ಪ್ರಣಾಳಿಕೆಯನ್ನು ಸಿದ್ಧಪಡಿಸಿದ್ದೇವೆ.
ಮಹಿಳೆಯರಿಗೆ ಅಧಿಕಾರ ನೀಡಲು ಬಯಸುತ್ತೇವೆ. ಮಹಿಳೆಯರ ಅಭಿಪ್ರಾಯದ ಬಗ್ಗೆ ಇರುವ ಸಂಕೋಲೆಗಳನ್ನು ಮುರಿಯುವ ವಾತಾವರಣವನ್ನು ನಾವು ನಿರ್ಮಿಸಬೇಕಾಗಿದೆ. ಈ ಮೂಲಕ ರಾಜಕೀಯ ಹಾಗೂ ಸಮಾಜದಲ್ಲಿ ಮಹಿಳೆಯರ ಪೂರ್ಣ ಪ್ರಮಾಣದ ಭಾಗವಹಿಸುವಿಕೆ ಬಗ್ಗೆ ಇರುವ ಶೋಷಣೆಯನ್ನು ಕೊನೆಗೊಳಿಸಬಹುದು' ಎಂದು ಹೇಳಿದ್ದರು.
ಶೇ.40 ರಷ್ಟು ಮಹಿಳಾ ಪ್ರಾತಿನಿಧ್ಯ: ಕಾಂಗ್ರೆಸ್ ಪಕ್ಷ ದೇಶಕ್ಕೆ ಮೊದಲ ಮಹಿಳಾ ಪ್ರಧಾನಿ (ಇಂದಿರಾ ಗಾಂಧಿ)ಯನ್ನು ನೀಡಿದೆ. ಕಾಂಗ್ರೆಸ್ ಪಕ್ಷದ ವತಿಯಿಂದ ಸುಚೇತಾ ಕೃಪಲಾನಿ ಮೊದಲ ಮಹಿಳಾ ಸಿಎಂ ಆಗಿದ್ದರು. ಇತರ ದೇಶಗಳು ಕಡಿಮೆ ಮಹಿಳಾ ಪ್ರಾತಿನಿಧ್ಯವನ್ನು ಹೊಂದಿದ್ದಾಗ ನಮ್ಮ ದೇಶವು ಮೊದಲ ಮಹಿಳಾ ಪ್ರಧಾನಿಯನ್ನು ಹೊಂದಿತ್ತು ಎಂದು ಹೇಳಿದ ಪ್ರಿಯಾಂಕಾ ಗಾಂಧಿ, ಈಗ ದೇಶದ ಅತಿ ದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ಶೇಕಡಾ 40ರಷ್ಟು ಪ್ರಾತಿನಿಧ್ಯವನ್ನು ನೀಡುತ್ತಿದೆ.
ಮಹಿಳೆಯರ ಸಬಲೀಕರಣವು ಕಾಗದಕ್ಕೆ ಸೀಮಿತವಾಗಿರಬಾರದು. ಯಾವಾಗ ಮಹಿಳೆಯರು ನಿಜವಾಗಿಯೂ ರಾಜಕೀಯದ ಭಾಗವಾಗುತ್ತಾರೆಯೋ ಆಗ ಅದನ್ನು ಕಾಗದದ ಮೇಲೆ ಅಲ್ಲ ನೆಲದ ಮೇಲೆ ಜಾರಿಗೊಳಿಸಬಹುದಾದ ವಾತಾವರಣ ನಿರ್ಮಾಣ ಆಗುತ್ತದೆ ಎಂದು ಹೇಳಿದ್ದರು.
ಹೀಗೆ ಮಹಿಳಾ ಅಸ್ತ್ರ ಪ್ರಯೋಗದ ಮೂಲಕ ಇಲ್ಲಿನ ಇತರೆ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜ ಪಕ್ಷಗಳಿಗೆ ಕಾಂಗ್ರೆಸ್ ಹೊಸ ಸವಾಲನ್ನು ಒಡ್ಡಿದೆ.
ಈ ಎಲ್ಲಾ ಪಕ್ಷಗಳಿಗೂ ಮೊದಲೇ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದಕ್ಕೂ ಸಿದ್ದತೆ ನಡೆಸಿದೆ. ಜೊತೆಗೆ ಉತ್ತರ ಪ್ರದೇಶದ ಎಲ್ಲಾ 403 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಕೂಡ ಘೋಷಿಸಿದೆ.












Click it and Unblock the Notifications