ಉತ್ತರಪ್ರದೇಶದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದ ವ್ಯಕ್ತಿಯ ಕೈಗೆ ಕೋಳ
ಲಕ್ನೋ, ಜನವರಿ.03: ಮಹಾತ್ಮ ಗಾಂಧೀಜಿ ಜನಿಸಿದ ಈ ನೆಲದಲ್ಲೇ ಮೀರ್ ಸಾದಿಕ್ ಗಳೂ ಹುಟ್ಟಿದ್ದಾರೆ. ಇಲ್ಲೇ ಹುಟ್ಟಿ, ಇಲ್ಲೇ ಬೆಳೆದು, ಇಲ್ಲಿನ ಅನ್ನವನ್ನೇ ತಿಂದು ಬೇರೊಂದು ದೇಶಕ್ಕೆ ನಿಷ್ಠೆ ತೋರುವ ಜನರು ಇಂದಿಗೂ ಭಾರತದಲ್ಲಿ ಇದ್ದಾರೆ ಎನ್ನುವುದಕ್ಕೆ ಇದೊಂದು ಘಟನೆ ಜೀವಂತ ಸಾಕ್ಷಿಯಾಗಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೊಂದಣಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವೇಳೆಯಲ್ಲಿ ಕೇಂದ್ರ ಸರ್ಕಾರಕ್ಕೆ ಧಿಕ್ಕಾರ ಕೂಗುವುದೇನೋ ಸರಿ. ಆದರೆ, ಇದೇ ವೇಳೆ ಪ್ರತಿಭಟನಾಕಾರನೊಬ್ಬ ಪಾಕಿಸ್ತಾನ್ ಜಿಂದಾಬಾದ್, ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾನೆ.
ಭಾರತದಲ್ಲಿ ಇದ್ದುಕೊಂಡು ಪಾಕಿಸ್ತಾನಕ್ಕೆ ಜೈಕಾರ ಕೂಗಿದ ಆಸಾಮಿಯನ್ನು ಪೊಲೀಸರು ಇದೀಗ ಹಿಡಿದು ಕಂಬಿ ಹಿಂದೆ ತಳ್ಳಿದ್ದಾರೆ. ಉತ್ತರ ಪ್ರದೇಶ ಮೀರತ್ ನ ಮವಾನಾದಲ್ಲಿ ಇಂಥದೊಂದು ಘಟನೆ ನಡೆದಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪಾಕಿಸ್ತಾನಕ್ಕೆ ಜೈ ಎನ್ನುವವರಿಗೆ ಬರವಿಲ್ಲ!
ಉತ್ತರ ಪ್ರದೇಶದ ಮೀರತ್ ನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆಗಳು ಕೇಳಿ ಬರುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಕೂಡಾ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಗಳು ನಡೆದಿದ್ದ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಜೈಕಾರ ಕೂಗಿದ ಉದಾಹರಣೆಗಳಿವೆ. ಇನ್ನು, ಇಂದಿನ ಘಟನೆಗೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಆದಷ್ಟು ಬೇಗ ಮತ್ತಷ್ಟು ಆರೋಪಿಗಳನ್ನು ಬಂಧಿಸಲಾಗುತ್ತದೆ. ದೇಶ ವಿರೋಧಿ ಚಟುವಟಿಕೆಗಳನ್ನು ಸಹಿಸಲು ಸಾಧ್ಯವಿಲ್ಲ. ತಪ್ಪಿತಸ್ಥರ ವಿರುದ್ಧ ಕಡ್ಡಾಯವಾಗಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಮೀರತ್ ನ ಹೆಚ್ಚುವರಿ ಪೊಲೀಸ್ ಆಯುಕ್ತ ಪ್ರಶಾಂತ್ ಕುಮಾರ್ ಮಾಹಿತಿ ನೀಡಿದ್ದಾರೆ.












Click it and Unblock the Notifications