ಸಚಿವ ಅಜಯ್ ಮಿಶ್ರಾ ರಾಜೀನಾಮೆಗೆ ರಾಕೇಶ್ ಟಿಕಾಯತ್ ಆಗ್ರಹ
ಲಕ್ನೋ, ಅಕ್ಟೋಬರ್ 06: ಉತ್ತರ ಪ್ರದೇಶದ ಲಖಿಂಪುರ್ ಖೇರಿಯ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಕೆಯು ನಾಯಕ ರಾಕೇಶ್ ಟಿಕಾಯತ್ ಸಚಿವ ಅಜಯ್ ಮಿಶ್ರಾ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ಕೇಂದ್ರ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರ ಪೈಕಿ ಪ್ರಮುಖರಾಗಿರುವ ಟಿಕಾಯತ್, ಸರ್ಕಾರಿ ಅಧಿಕಾರಿಗಳ ಜತೆ ಅಕ್ಟೋಬರ್ 4ರಂದು ರೈತರು ಮಾಡಿಕೊಂಡ ಒಪ್ಪಂದದ ನೇತೃತ್ವ ವಹಿಸಿದ್ದರು. ಈ ಒಪ್ಪಂದದ ಬಳಿಕ ಪ್ರತಿಭಟನೆ ನಿಲ್ಲಿಸಿದ್ದರು. ಅಲ್ಲದೆ, ಮೃತ ರೈತರ ಮರಣೋತ್ತರ ಪರೀಕ್ಷೆಗೆ ಅವರ ಕುಟುಂಬದವರು ಸಮ್ಮತಿಸಿದ್ದರು.
ಪ್ರತಿಯೊಬ್ಬ ಆರೋಪಿಗಳನ್ನು ಬಂಧಿಸಬೇಕು, ರೈತರ ಜತೆ ಸರ್ಕಾರ ಮಾಡಿಕೊಂಡಿರುವ ಎಲ್ಲಾ ಒಪ್ಪಂದಗಳನ್ನು ಒಂದು ವಾರದ ಒಳಗೆ ಜಾರಿಗೊಳಿಸಬೇಕು ಇಲ್ಲವಾದಲ್ಲಿ ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ನಮ್ಮ ಪ್ರತಿಭಟನೆ ಅಂತ್ಯವಾಗಿಲ್ಲ, ಒಪ್ಪಂದ ಮಾಡಿಕೊಂಡಿರುವುದನ್ನು ಜಾರಿಗೊಳಿಸುತ್ತಾರೆಯೇ ಎಂದು 8 ದಿನಗಳ ಕಾಲ ಕಾದು ನೋಡಲಿದ್ದೇವೆ, ಜಾರಿಗೊಳಿಸದಿದ್ದಲ್ಲಿ ದೇಶಾದ್ಯಂತ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಒಮ್ಮತಕ್ಕೆ ಬಂದ ಬಳಿಕ ಮೃತ ರೈತರ ಕುಟುಂಬಗಳಿಗೆ 45 ಲಕ್ಷ ಪರಿಹಾರ ನೀಡಲಾಗುವುದು ಹಾಗೂ ಹೈಕೋರ್ಟ್ ಜಡ್ಜ್ ಅಧೀನದಲ್ಲಿ ನ್ಯಾಯಾಂಗ ತನಿಖೆ ನಡೆಸಲಾಗುವುದುಎಂದು ಎಡಿಜಿಪಿ ಪ್ರಶಾಂತ್ ಕುಮಾರ್ ತಿಳಿಸಿದ್ದರು.
ರೈತರ ಮೇಲಿನ ಹಿಂಸಾಚಾರದಿಂದಾಗಿ ಸುದ್ದಿಯಲ್ಲಿರುವ ಉತ್ತರ ಪ್ರದೇಶದ ಲಖಿಂಪುರ್ ಖೇರಿಗೆ ತೆರಳಲು ಕಾಂಗ್ರೆಸ್ ನಾಯಕರಿಗೂ ಕೊನೆಗೂ ಉತ್ತರ ಪ್ರದೇಶ ಸರ್ಕಾರ ಅವಕಾಶ ಮಾಡಿಕೊಟ್ಟಿದೆ.
ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಇತರೆ ಮೂವರಿಗೆ ಅನುಮತಿ ನೀಡಿರುವುದಾಗಿ ಉತ್ತರ ಪ್ರದೇಶ ಸರ್ಕಾರ ಗೃಹ ಸಚಿವಾಲಯ ಮಾಹಿತಿ ನೀಡಿದೆ.
ಕಳೆದ ಭಾನುವಾರ ರಾತ್ರಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ತಂದೆಯ ಊರು ಲಖೀಂಪುರ ಖೇರಿಯ ಟಿಕೂನಿಯಾ ಎಂಬಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಮುಖ್ಯ ಅತಿಥಿಯಾಗಿ ಆಗಮಿಸಬೇಕಿತ್ತು.
ಆದರೆ ಕೃಷಿ ಕಾಯ್ದೆ ವಿರೋಧಿಸಿ ರೈತರು ಒಟ್ಟುಗೂಡಿ ಪ್ರತಿಭಟನೆ ನಡೆಸುವ ಮೂಲಕ ಕಾರನ್ನು ತಡೆದಿದ್ದರು. ಈ ವೇಳೆ ಎರಡು ಕಾರು ಅವರ ಮೇಲೆ ಹರಿದು ಇಬ್ಬರು ರೈತರು ಮೃತಪಟ್ಟಿದ್ದರು. ಈ ಘಟನೆಯಿಂದ ಹಿಂಸಾಚಾರ ನಡೆದಿದ್ದು, ಇಲ್ಲಿಯವರೆಗೆ 8 ಮಂದಿ ಸಾವನ್ನಪ್ಪಿದ್ದಾರೆ.
ಇತ್ತೀಚೆಗೆ ಲಖೀಂಪುರಖೇರಿಗೆ ಭೇಟಿ ನೀಡಿದ್ದ ಪ್ರಿಯಾಂಕಾ ಗಾಂಧಿ ಈ ಹಿಂಸಾಚಾರ ಘಟನೆಯಲ್ಲಿ ಮೃತಪಟ್ಟ ನಾಲ್ಕು ರೈತರ ಕುಟುಂಬಗಳನ್ನು ಭೇಟಿ ಮಾಡಿದ್ದರು. ಈ ವೇಳೆ ಪ್ರಿಯಾಂಕಾ ಗಾಂಧಿ ಅವರನ್ನುಅಡ್ಡಗಟ್ಟಿದ ಪೊಲೀಸರು ವಶಕ್ಕೆ ಪಡೆದಿದ್ದರು. ಪೊಲೀಸರು ವಶಕ್ಕೆ ಪಡೆದ ವಿಡಿಯೋ ಕೂಡ ವೈರಲ್ ಆಗಿತ್ತು. ಆ ವಿಡಿಯೋದಲ್ಲಿ ಪ್ರಿಯಾಂಕಾ ಗಾಂಧಿ, ಸಾವನ್ನಪ್ಪಿದ ಅಮಾಯಕ ಜನರಿಗಿಂತ ನಾನು ಮುಖ್ಯವಾದವಳಲ್ಲ.
ನೀವು ಸರ್ಕಾರವನ್ನು ರಕ್ಷಿಸುತ್ತಿದ್ದೀರ. ನನ್ನನ್ನು ಬಂಧಿಸಲು ನಿಮ್ಮ ಬಳಿ ವಾರೆಂಟ್ ಇದೆಯೇ? ವಾರೆಂಟ್ ನೀಡದಿದ್ದರೆ ನೀವು ನನ್ನನ್ನು ಮುಟ್ಟುವಂತಿಲ್ಲ ಎಂದು ಹೇಳಿದ್ದರು.
ಪೊಲೀಸರು ಅವರನ್ನು ಕರೆದುಕೊಂಡು ಹೋಗಿ ಗೃಹ ಬಂಧನದಲ್ಲಿರಿಸಿದ್ದರು.
ಉತ್ತರ ಪ್ರದೇಶದ ಸೀತಾಪುರದ ಪಿಎಸಿ ಗೆಸ್ಟ್ ಹೌಸ್ ನಲ್ಲಿ ಪ್ರಿಯಾಂಕಾ ಗಾಂಧಿ ಅವರನ್ನು ಗೃಹ ಬಂಧನದಲ್ಲಿರಿಸಲಾಗಿದ್ದು, ಬಂಧನ ಬಳಿಕ ಪ್ರಿಯಾಂಕಾ ಗಾಂಧಿ ತಮ್ಮ ಕೊಠಡಿಯನ್ನು ಖುದ್ದು ತಾವೇ ಪೊರಕೆ ಹಿಡಿದು ಕಸ ಗುಡಿಸಿರುವ ವಿಡಿಯೋ ಕೂಡ ವೈರಲ್ ಆಗಿತ್ತು. ಬಳಿಕ ಶಾಂತಿಭಂಗ ತಂದ ಆರೋಪದ ಮೇಲೆ ಅವರನ್ನು ಬಂಧಿಸಿದ ಪೊಲೀಸರು ಎಫ್ ಐಆರ್ ಕೂಡ ದಾಖಲಿಸಿದ್ದರು.












Click it and Unblock the Notifications