ದಲಿತರ ಮತ ಗೆಲ್ಲಲು ಬಿಜೆಪಿಯಿಂದ ಮತ್ತೊಂದು ಪ್ರತಿಮೆ ಸ್ಥಾಪನೆ!
ಲಕ್ನೋ, ಜನವರಿ 01 : ಲೋಕಸಭೆ ಚುನಾವಣೆ ೨೦೧೯ ಹತ್ತಿರವಾಗುತ್ತಿದ್ದಂತೆ, ಪ್ರತಿಮೆ ಸ್ಥಾಪನೆ ರಾಜಕೀಯ ಜೋರಾಗುತ್ತಿದೆ. ಉತ್ತರಪ್ರದೇಶದ ವೀರ ವನಿತೆ, ಬ್ರಿಟಿಷರ ಪಾಲಿಗೆ ಸಿಂಹಸ್ವಪ್ನವಾಗಿದ್ದ ದಲಿತ ಮಹಿಳೆ, ಸ್ವಾತಂತ್ರ್ಯ ಹೋರಾಟಗಾರ್ತಿ ಉದಾ ದೇವಿ ಅವರ ಪ್ರತಿಮೆ ಸ್ಥಾಪನೆಗೆ ಬಿಜೆಪಿ ಸರ್ಕಾರವು ಮುಂದಾಗಿದೆ.
ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು, ಪಾಸಿ ಸಮುದಾಯದ ವೀರ ಮಹಿಳೆಯ ಹೆಸರಿನಲ್ಲಿ ಸುಮಾರು 100 ಅಡಿ ಎತ್ತರದ ಪ್ರತಿಮೆ, ಸ್ಮಾರಕ, ಪಾರ್ಕ್ ನಿರ್ಮಿಸುವುದಾಗಿ ಘೋಷಿಸಿದೆ. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಉದಾದೇವಿ ಅವರು ದಿಟ್ಟ ಹೋರಾಟ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.
2014ರ ಲೋಕಸಭೆ ಚುನಾವಣೆ ಹಾಗೂ 2017ರ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಪಾಸಿ ಸಮುದಾಯದ ಮತಗಳು ನಿರ್ಣಾಯಕವಾಗಿತ್ತು. 71 ಮಂದಿ ಬಿಜೆಪಿ ಲೋಕಸಭಾ ಸದಸ್ಯರ ಪೈಕಿ 6 ಮಂದಿ ಪಾಸಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. 310 ವಿಧಾನಸಭಾ ಸದಸ್ಯರ ಪೈಕಿ 23 ಮಂದಿ ಈ ಸಮುದಾಯದವರಿದ್ದಾರೆ.

1990ರಲ್ಲಿ ಕಲ್ಯಾಣ್ ಸಿಂಗ್ ಸರ್ಕಾರವು ಉದಾದೇವಿ ಅವರ ಹೋರಾಟವನ್ನು ಸ್ಮರಿಸಿ ಪ್ರತಿಮೆ, ಸ್ಮಾರಕ ನಿರ್ಮಿಸಿದೆ. ಆದರೆ, ಈಗ ಬೃಹತ್ ಪ್ರತಿಮೆಯನ್ನು ಲಕ್ನೋದಲ್ಲಿ ಸ್ಥಾಪಿಸಲಾಗುವುದು ಎಂದು ಮೋಹನ್ ಲಾಲ್ ಗಂಜ್ ನ ಸಂಸದ ಕೌಶಲ್ ಕಿಶೋರ್ ಅವರು ಬಿಜೆಪಿಯ ಪರಿಶಿಷ್ಟ ಜಾತಿ ಮೋರ್ಚಾದ ಸಮಾರಂಭದಲ್ಲಿ ಮಾತನಾಡಿ, ಪ್ರತಿಮೆ ನಿರ್ಮಾಣಕ್ಕಾಗಿ ಪಾಸಿ ಸಮುದಾಯದವರು ಕಬ್ಬಿಣ ದಾನ ಮಾಡುವಂತೆ ಕೋರಿದರು.












Click it and Unblock the Notifications