'ಲವ್ ಜಿಹಾದ್' ಕಾನೂನು: 1 ತಿಂಗಳಲ್ಲಿ 14 ಪ್ರಕರಣ, ಮಹಿಳೆಯರಿಂದ ದಾಖಲಾಗಿದ್ದು 2 ಕೇಸ್
ಲಕ್ನೋ, ಡಿಸೆಂಬರ್ 29: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರವು ಮತಾಂತರ ವಿರೋಧಿ ಕಾನೂನನ್ನು ಜಾರಿಗೆ ತಂದು ಸೋಮವಾರಕ್ಕೆ ಒಂದು ತಿಂಗಳು ಪೂರ್ಣಗೊಂಡಿದೆ. ನವೆಂಬರ್ 28ರಂದು ಕಾನೂನುಬಾಹಿರ ಧಾರ್ಮಿಕ ಮತಾಂತರ ನಿಷೇಧ ಸುಗ್ರೀವಾಜ್ಞೆ 2020ಯನ್ನು ಜಾರಿಗೆ ತಂದ ಬಳಿಕ ಇದುವರೆಗೂ ಉತ್ತರ ಪ್ರದೇಶ ಪೊಲೀಸರು 14 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. 51 ಮಂದಿಯನ್ನು ಬಂಧಿಸಿದ್ದು, ಅವರಲ್ಲಿ 49 ಮಂದಿ ಜೈಲಿನಲ್ಲಿದ್ದಾರೆ.
ಈ 14 ಪ್ರಕರಣಗಳ ಪೈಕಿ 13 ಪ್ರಕರಣಗಳು ಹಿಂದೂ ಮಹಿಳೆಯರನ್ನು ಇಸ್ಲಾಂಗೆ ಮತಾಂತರ ಮಾಡಲು ಒತ್ತಡ ಹೇರಿದ ಆರೋಪಗಳಡಿ ದಾಖಲಾಗಿವೆ. ಕೇವಲ ಎರಡು ಪ್ರಕರಣಗಳಲ್ಲಿ ಸ್ವತಃ ಮಹಿಳೆಯರೇ ದೂರು ನೀಡಿದ್ದಾರೆ. ಇನ್ನು 12 ಪ್ರಕರಣಗಳಲ್ಲಿ ಅವರ ಸಂಬಂಧಿಕರು ದೂರು ಸಲ್ಲಿಸಿದ್ದಾರೆ. ಎರಡರಲ್ಲಿ ಹಿಂದೂ ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರು ಮಧ್ಯಪ್ರವೇಶಿಸಿ, ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ. ಒಂದು ಪ್ರಕರಣದಲ್ಲಿ ಮಾತ್ರ ಮಹಿಳೆ ವಯಸ್ಕಳಾಗಿದ್ದಾಳೆ. ಎಂಟು ಪ್ರಕರಣಗಳಲ್ಲಿ ಒಂದು ಜೋಡಿಯು ತಾವು ಸ್ನೇಹಿತರು ಅಥವಾ ರಿಲೇಷನ್‌ಶಿಪ್‌ನಲ್ಲಿ ಇದ್ದಿದ್ದಾಗಿ ಹೇಳಿದ್ದರೆ, ಒಂದು ಜೋಡಿಯು ತಾವು ಮದುವೆಯಾಗುವುದಾಗಿ ತಿಳಿಸಿದೆ.
ಕ್ರೈಸ್ತ ಧರ್ಮಕ್ಕೆ ಅಕ್ರಮ ಮತಾಂತರ ಮಾಡಿದ ಒಂದು ಪ್ರಕರಣ ಕೂಡ ದಾಖಲಾಗಿದೆ. ಅಜಂಗಡದಲ್ಲಿ ಈ ಸಂಬಂಧ ಮೂವರ ವಿರುದ್ಧ ದೂರು ದಾಖಲಾಗಿದೆ.

ಎರಡು ಪ್ರಕರಣಗಳಲ್ಲಿ ಬೇರೆ ವ್ಯಕ್ತಿಗಳೊಂದಿಗೆ ಮದುವೆಯಾಗಿರುವ ಇಬ್ಬರು ಮಹಿಳೆಯರು 'ಸಾಮಾಜಿಕ ಒತ್ತಡ' ಮುಂದಿಟ್ಟು ತಮ್ಮ ಹೇಳಿಕೆಗಳನ್ನು ದಾಖಲಿಸಲು ನಿರಾಕರಿಸಿದ್ದಾರೆ. ಎರಡರಲ್ಲಿ ಮಹಿಳೆಯರು ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಮತಾಂತರದ ಬಲವಂತಕ್ಕೆ ಒಳಗಾದ ಆರೋಪ ಮಾಡಿರುವ ಮೂವರು ಮಹಿಳೆಯರು ದಲಿತ ಸಮುದಾಯಕ್ಕೆ ಸೇರಿದ್ದಾರೆ.
ಸುಗ್ರೀವಾಜ್ಞೆ ಜಾರಿಗೆ ಬಂದ ದಿನವೇ 24 ವರ್ಷದ ಓವಿಯಸ್ ಅಹ್ಮದ್ ವಿರುದ್ಧ ಪ್ರಕರಣ ದಾಖಲಾಗಿತ್ತು. ವಿವಾಹಿತ ಹಿಂದೂ ಮಹಿಳೆಯನ್ನು ಮತಾಂತರಕ್ಕೆ ಬಲವಂತ ಮಾಡಿದ ಮತ್ತು ಆಕೆಯ ಪೋಷಕರನ್ನು ಬೆದರಿಸಿದ ಆರೋಪ ಮಾಡಲಾಗಿತ್ತು.












Click it and Unblock the Notifications